ದೇಶದಲ್ಲಿ ಸಮುದಾಯಕ್ಕೆ ಹಬ್ಬಿದೆ ಕೊರೋನಾ!| ಕೇಂದ್ರ ಸರ್ಕಾರ ಈಗಲಾದರೂ ಸತ್ಯ ಒಪ್ಪಿಕೊಳ್ಳಬೇಕು: ತಜ್ಞರಿಂದ ಸಲಹೆ| ಸರ್ಕಾರ ದೃಢಪಡಿಸಿದರೆ ಜನರು ಇನ್ನಷ್ಟುಎಚ್ಚರದಿಂದ ಇರಲು ನೆರವಾಗುತ್ತೆ| ಐಸಿಎಂಆರ್ ಅಧ್ಯಯನ ವರದಿ ವಾಸ್ತವದ ಪ್ರತಿಬಿಂಬ, ಸಮಗ್ರ ಮಾಹಿತಿ ಅಲ್ಲ
ನವದೆಹಲಿ(ಜೂ.14): ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರ ನಡುವೆಯೇ, ಮಾರಕ ವೈರಾಣು ದೇಶದ ಹಲವು ಭಾಗಗಳಲ್ಲಿ ಸಮುದಾಯಕ್ಕೆ ಹರಡಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಆರೋಗ್ಯ ಕ್ಷೇತ್ರದ ತಜ್ಞರು ಬಹಿರಂಗಪಡಿಸಿದ್ದಾರೆ. ಕೇಂದ್ರ ಸರ್ಕಾರ ಈಗಲಾದರೂ ಸತ್ಯಾಂಶ ಒಪ್ಪಿಕೊಳ್ಳಬೇಕು. ಜನರು ಇನ್ನಷ್ಟುಎಚ್ಚರಿಕೆ ವಹಿಸಲು ಇದರಿಂದ ಅನುಕೂಲವಾಗಲಿದೆ ಎಂದು ಸಲಹೆ ಮಾಡಿದ್ದಾರೆ.
ಕೊರೋನಾ ಇನ್ನೂ ಸಮುದಾಯ ಹಂತ ಪ್ರವೇಶಿಸಿಲ್ಲ ಎಂಬ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್)ಯ ವರದಿ ಬಗ್ಗೆ ವೈರಾಣುಶಾಸ್ತ್ರ, ಸಾರ್ವಜನಿಕ ಆರೋಗ್ಯ ಹಾಗೂ ವೈದ್ಯಕೀಯ ತಜ್ಞರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವರದಿ ಸದ್ಯದ ಪರಿಸ್ಥಿತಿಯ ಪ್ರತಿಬಿಂಬ ಅಲ್ಲ. ಸಮೀಕ್ಷೆಗೆ ತೆಗೆದುಕೊಂಡಿರುವ ಮಾದರಿಯೂ ಹೆಚ್ಚಿಲ್ಲ. ಸಮುದಾಯ ಹಂತಕ್ಕೆ ಹಬ್ಬಿಲ್ಲ ಎಂದು ಹೇಳುವುದಾದರೆ, ಸಮುದಾಯ ಹಂತ ಅಂದರೆ ಯಾವುದು ಎಂದೂ ಪ್ರಶ್ನಿಸಿದ್ದಾರೆ.
ಬೀಜಿಂಗ್‌ನಲ್ಲಿ 3 ದಿನದಲ್ಲಿ 46 ಮಂದಿಗೆ ಸೋಂಕು: ಮಾರುಕಟ್ಟೆ, ವಸತಿ ಪ್ರದೇಶ ಬಂದ್!
ಸತ್ಯ ಒಪ್ಪಿಕೊಳ್ಳಿ:
ದೇಶದ ಹಲವು ಭಾಗಗಳಲ್ಲಿ ಕೊರೋನಾ ವೈರಸ್ ಸಮುದಾಯ ಹಂತ ತಲುಪಿದೆ ಎಂಬ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ. ಭಾರಿ ಪ್ರಮಾಣದ ಸಾಮೂಹಿಕ ವಲಸೆ ಹಾಗೂ ಲಾಕ್‌ಡೌನ್ ತೆರವುಗೊಳಿಸಿದ್ದರಿಂದಾಗಿ ಈವರೆಗೆ ಎಲ್ಲೆಲ್ಲಿ ಸೋಂಕು ಪತ್ತೆಯಾಗಿರಲಿಲ್ಲವೋ ಅಲ್ಲಿಗೆಲ್ಲಾ ತಲುಪಿದೆ. ಹೀಗಾಗಿ ಸರ್ಕಾರ ಮುಂದೆ ಬಂದು ಸಮುದಾಯ ಹಂತಕ್ಕೆ ಕೊರೋನಾ ಹಬ್ಬಿರುವುದನ್ನು ಒಪ್ಪಿಕೊಳ್ಳಬೇಕು. ಇದರಿಂದ ಜನರು ಮತ್ತಷ್ಟುಜಾಗರೂಕರಾಗಲು ಸಹಾಯವಾಗಲಿದೆ. ಅಲ್ಲದೆ ನಿರ್ಲಕ್ಷ್ಯ ವಹಿಸುವುದು ತಪ್ಪಲಿದೆ ಎಂದು ದೆಹಲಿಯ ಏಮ್ಸ್ ಮಾಜಿ ನಿರ್ದೇಶಕ ಡಾ| ಎಂ.ಸಿ. ಮಿಶ್ರಾ ಸಲಹೆ ನೀಡಿದ್ದಾರೆ.
ಮತ್ತೊಂದೆಡೆ, ದೇಶದಲ್ಲಿ ಕೊರೋನಾ ಬಹಳ ಹಿಂದೆಯೇ ಸಮುದಾಯ ಹಂತಕ್ಕೆ ತಲುಪಿದೆ. ಐಸಿಎಂಆರ್ ಅಧ್ಯಯನದ ಪ್ರಕಾರವೂ, ತೀವ್ರ ಉಸಿರಾಟ ತೊಂದರೆ ಹೊಂದಿರುವ ಶೇ.40 ಮಂದಿಗೆ ವಿದೇಶ ಪ್ರವಾಸ ಅಥವಾ ಸೋಂಕಿತರ ಸಂಪರ್ಕದ ಹಿನ್ನೆಲೆ ಇಲ್ಲದಿದ್ದರೂ ಕೊರೋನಾ ಬಂದಿದೆ. ಇದು ಸಮುದಾಯ ಹಂತ ಅಲ್ಲ ಎಂದಾದರೆ, ಇನ್ನೇನು? ಎಂದು ವೈರಾಣು ಶಾಸ್ತ್ರಜ್ಞ ಶಾಹೀದ್ ಜಮೀಲ್ ಹೇಳಿದ್ದಾರೆ.
ಪಿಒಕೆಗೆ ರೋಗಿಗಳ ಶಿಫ್ಟ್ ಮಾಡುತ್ತಿದೆ ಪಾಕ್!
ಐಸಿಎಂಆರ್ ವಾದವನ್ನೇ ಒಪ್ಪಿಕೊಂಡರೂ, ದೆಹಲಿ, ಅಹಮದಾಬಾದ್ ಹಾಗೂ ಮುಂಬೈನಂತಹ ಸ್ಥಳಗಳಲ್ಲಿ ಕೊರೋನಾ ಸಮುದಾಯ ಹಂತ ತಲುಪಿರುವುದನ್ನು ಅಲ್ಲಗಳೆಯಲಾಗದು ಎಂದು ಶ್ವಾಸಕೋಶ ತಜ್ಞ ಡಾ| ಅರವಿಂದ ಕುಮಾರ್ ತಿಳಿಸಿದ್ದಾರೆ.
ಎಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲವೋ ಅಲ್ಲಿ ಐಸಿಎಂಆರ್ ಸಮೀಕ್ಷೆ ನಡೆಸುತ್ತಿದೆ. ಇಂತಹ ಸಮೀಕ್ಷೆಯನ್ನು ಮುಂಬೈನ ಧಾರಾವಿ ಕೊಳಗೇರಿಯಲ್ಲೋ ಅಥವಾ ದೆಹಲಿಯಲ್ಲೋ ನಡೆಸಬೇಕಿತ್ತು. ಸರಿಯಾದ ಸ್ಥಳಗಳಲ್ಲಿ ಸಮೀಕ್ಷೆ ನಡೆಸಿಲ್ಲವೆಂದಾದರೆ ಅದನ್ನು ನಡೆಸಿಯೂ ಪ್ರಯೋಜನವಿಲ್ಲ. ಸಮುದಾಯ ಹಂತಕ್ಕೆ ಕೊರೋನಾ ಹಬ್ಬಿದ್ದರೂ ನಾವು ಅದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಫರೀದಾಬಾದ್‌ನ ಫೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ| ರವಿ ಶೇಖರ್ ಝಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈ: ಕೋವಿಡ್ ಆಸ್ಪತ್ರೆಗಳ ಶೇ.99 ಬೆಡ್‌ಗಳು ಭರ್ತಿ!
ತಜ್ಞರು ಹೇಳೋದೇನು?
- ಕೊರೋನಾ ಸಮುದಾಯ ಹಂತ ತಲುಪಿಲ್ಲ ಎಂದು ಐಸಿಎಂಆರ್ ಸಮೀಕ್ಷೆ ಹೇಳುತ್ತಿದೆ
- ಆದರೆ ಸಮೀಕ್ಷೆಯನ್ನು ಕೊರೋನಾ ಹೆಚ್ಚಿರುವ ಕಡೆ ನಡೆಸಿಲ್ಲ, ಸ್ಯಾಂಪಲ್ ಕಡಿಮೆ ಇದೆ
- ದೇಶದ ಹಲವು ಭಾಗಗಳಲ್ಲಿ ವೈರಸ್ ಸಮುದಾಯ ಹಂತಕ್ಕೆ ಬಹಳ ಹಿಂದೆಯೇ ಹಬ್ಬಿದೆ
- 40% ಮಂದಿಗೆ ವಿದೇಶ ಪ್ರವಾಸ ಅಥವಾ ಸೋಂಕಿತರ ಸಂಪರ್ಕ ಇಲ್ಲದಿದ್ದರೂ ಸೋಂಕಿದೆ
- ಇದು ಸಮುದಾಯ ಹಂತ ಅಲ್ಲ ಎಂದಾದರೆ, ಇನ್ನಾವುದು ಸಮುದಾಯ ಹಂತ?
- ಸಮುದಾಯ ಹಂತಕ್ಕೆ ಕೊರೋನಾ ಹಬ್ಬಿದ್ದರೂ ನಾವು ಅದನ್ನು ಒಪ್ಪಿಕೊಳ್ಳುತ್ತಿಲ್ಲ
- ಸರ್ಕಾರ ವಾಸ್ತವನ್ನು ಒಪ್ಪಿಕೊಳ್ಳಬೇಕು. ಜನ ಎಚ್ಚರಿಕೆ ತೆಗೆದುಕೊಳ್ಳಲು ಅನುಕೂಲವಾಗುತ್ತದೆ