ಕೇರಳಕ್ಕೆ ಮತ್ತೆ ಕೊರೋನಾ! ಒಂದೇ ಕುಟುಂಬದ ಐವರಿಗೆ ಸೋಂಕು

By Kannadaprabha NewsFirst Published Mar 9, 2020, 7:38 AM IST
Highlights

ಕೊರೋನಾ ವೈರಸ್‌ ವ್ಯಾಧಿ ತನ್ನ ಕಬಂಧ ಬಾಹುವನ್ನು ಮತ್ತಷ್ಟುವಿಸ್ತರಿಸಿದೆ. ಕೇರಳದಲ್ಲಿ ಮತ್ತೆ ಐವರಲ್ಲಿ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ. 

 ಪಿಟಿಐ ತಿರುವನಂತಪುರಂ/ನವದೆಹಲಿ (ಮಾ.09) :  ವಿಶ್ವಾದ್ಯಂತ ಈಗಾಗಲೇ ತೀವ್ರ ಆತಂಕ ಮೂಡಿಸಿರುವ ಮಾರಕ ಕೊರೋನಾ ವೈರಸ್‌ ವ್ಯಾಧಿ ತನ್ನ ಕಬಂಧ ಬಾಹುವನ್ನು ಮತ್ತಷ್ಟುವಿಸ್ತರಿಸಿದೆ. ಕೇರಳದಲ್ಲಿ ಮತ್ತೆ ಐವರಲ್ಲಿ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಭಾರತದ ಕೊರೋನಾಪೀಡಿತರ ಸಂಖ್ಯೆ ಭಾನುವಾರ 39ಕ್ಕೇರಿದೆ. ಹೊಸ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೈ ಅಲರ್ಟ್‌ ಸಾರಲಾಗಿದೆ.

ಪಟ್ಟಣಂತಿಟ್ಟ ಮೂಲದ ಈ ಐವರು ಸೋಂಕಿತರು ಕೊರೋನಾಪೀಡಿತ ಇಟಲಿಯ ವೆನಿಸ್‌ಗೆ ತೆರಳಿದ್ದರು. ಐವರಲ್ಲಿ ದಂಪತಿ, ಅವರ ಪುತ್ರ ಹಾಗೂ ಇಬ್ಬರು ಸಂಬಂಧಿಕರಿದ್ದಾರೆ. ಒಂದು ವಾರದ ಹಿಂದೆ ವಾಪಸು ಬಂದಾಗ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ಅದ್ಹೇಗೋ ತಪ್ಪಿಸಿಕೊಂಡು ಮನೆಗೆ ವಾಪಸಾಗಿದ್ದರು. ಈಗ ಅನಾರೋಗ್ಯಕ್ಕೆ ತುತ್ತಾಗಿದ್ದು, ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ.

ಇದರ ಬೆನ್ನಲ್ಲೇ ಕೇರಳ ಆರೋಗ್ಯ ಸಚಿವಾಲಯ ಎಚ್ಚರಿಕೆ ಸಂದೇಶ ನೀಡಿದೆ. ‘ಯಾರು ವಿದೇಶಗಳಿಗೆ ಹೋಗಿ ಬರುತ್ತಾರೋ ಹಾಗೂ ಸೋಂಕಿನ ಲಕ್ಷಣ ಹೊಂದುತ್ತಾರೋ ಅವರು ವಿಷಯವನ್ನು ಸರ್ಕಾರಕ್ಕೆ ತಿಳಿಸಿ ತಪಾಸಣೆಗೆ ಒಳಪಡಬೇಕು. ತಿಳಿಸದೇ ವಿಷಯ ಮುಚ್ಚಿಟ್ಟರೆ ಅದು ಅಪರಾಧವಾಗುತ್ತದೆ’ ಎಂದಿದೆ. ಪೊಲೀಸರು ಕೂಡ ಇದಕ್ಕೆ ಪೂರಕವಾದ ಎಚ್ಚರಿಕೆ ನೀಡಿದ್ದು, ‘ವಿಷಯ ಮುಚ್ಚಿಡುವುದು ಅಕ್ರಮ ಹಾಗೂ ಶಿಕ್ಷಾರ್ಹ ಅಪರಾಧ. ಇಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಸ್ಥಿತಿ ಸ್ಥಿರ:  ಈ ನಡುವೆ, ಕೊರೋನಾ ಪತ್ತೆಯಾದ ಐವರ ಬಗ್ಗೆ ವಿವರ ನೀಡಿದ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ‘ಸೋಂಕಿತರ ಸ್ಥಿತಿ ಸ್ಥಿರವಾಗಿದೆ. ಆದಾಗ್ಯೂ ಹೆಚ್ಚು ಕಾಳಜಿ ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಹೇಳಿದರು.

ಕೊರೋನಾ ಎಫೆಕ್ಟ್: ಮಾರ್ಚ್ 31ರ ವರೆಗೆ ಶಾಲೆಗಳಿಗೆ ರಜಾ...

‘ಇಟಲಿಯಿಂದ ಬಂದಾಗ ಐವರೂ ವಿಮಾನ ನಿಲ್ದಾಣದಲ್ಲಿ ತಪಾಸಣೆಯನ್ನು ತಪ್ಪಿಸಿಕೊಂಡು ಮನೆಗೆ ವಾಪಸಾಗಿದ್ದರು. ಈಗ ರೋಗಲಕ್ಷಣ ಕಂಡುಬಂದರೂ ದಂಪತಿ ಹಾಗೂ ಅವರ ಮಗ ಆರೋಗ್ಯ ತಪಾಸಿಸಿಕೊಳ್ಳಲು ನಿರಾಕರಿಸಿ ಆರೋಗ್ಯ ಸಿಬ್ಬಂದಿ ಜತೆ ವಾಗ್ವಾದ ನಡೆಸಿದರು. ಅವರನ್ನು ಒತ್ತಾಯದಿಂದ ಪಟ್ಟಣಂತಿಟ್ಟಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಕೊರೋನಾ ದೃಢಪಟ್ಟಿದೆ. ಅವರ ಇಬ್ಬರು ಬಂಧುಗಳಿಗೆ ಕೂಡ ಕೊರೋನಾ ಇರುವುದು ಪತ್ತೆಯಾಗಿದ್ದು, ಅವರನ್ನು ಕೊಟ್ಟಾಯಂ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗುತ್ತದೆ’ ಎಂದರು.

ಆದರೆ, ಈ ಐವರೂ ಪ್ರಯಾಣಿಸಿದ ಮಾ.1ರ ಖತಾರ್‌ ಏರ್‌ಲೈನ್ಸ್‌ ವಿಮಾನದ ಎಲ್ಲ ಪ್ರಯಾಣಿಕರ ತಪಾಸಣೆ ಕೂಡ ಅಗತ್ಯವಾಗಿದೆ. ಕೊಚ್ಚಿಗೆ ಬಂದಿಳಿದ ಈ ವಿಮಾನದ ಎಲ್ಲ ಪ್ರಯಾಣಿಕರೂ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಶೈಲಜಾ ಸೂಚಿಸಿದ್ದಾರೆ. ಖತಾರ್‌ ಏರ್‌ಲೈನ್ಸ್‌ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿದೆ.

ಈ ಮುಂಚೆ ಕೂಡ ಕೇರಳದ ಮೂವರಿಗೆ ಕೊರೋನಾ ಪತ್ತೆಯಾಗಿತ್ತು. ಸುದೈವವಶಾತ್‌ ಈ ಮೂವರೂ ಗುಣಮುಖರಾಗಿದ್ದರು.

ಉತ್ಸವಗಳಲ್ಲಿ ಎಚ್ಚರಿಕೆ:  ಸೋಮವಾರ ಕೇರಳದ ಪ್ರಸಿದ್ಧ ಅಟ್ಟುಕಲ ಪೊಂಗಾಲ ಉತ್ಸವವಿದೆ. ಇಲ್ಲಿ ಭಾರೀ ಪ್ರಮಾಣದ ಜನರು ಸೇರಿ ರಸ್ತೆಗಳಲ್ಲಿ ಸಾಂಕೇತಿಕ ಅಡುಗೆ ಮಾಡುತ್ತಾರೆ. ಈ ಉತ್ಸವದಲ್ಲಿ ಆರೋಗ್ಯ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಆ್ಯಂಬುಲೆನ್ಸ್‌ಗಳು ಸನ್ನದ್ಧ ಸ್ಥಿತಿಯಲ್ಲಿರಬೇಕು. ಉತ್ಸವದ ವಿಡಿಯೋ ಶೂಟಿಂಗ್‌ ಮಾಡಬೇಕು ಎಂದು ಸಚಿವೆ ಶೈಲಜಾ ಸೂಚಿಸಿದ್ದಾರೆ.

ಅಲ್ಲದೆ, ಯಾವುದೇ ರೋಗ ಲಕ್ಷಣಗಳಿದ್ದರೆ ಅಂಥವರು ಅಟ್ಟುಕಾಲ ದೇವಾಲಯದಿಂದ ದೂರ ಇರಬೇಕು ಎಂದೂ ಅವರು ಕೋರಿದ್ದಾರೆ.

ತಮಿಳುನಾಡಲ್ಲೂ ಶಂಕೆ:  ಈ ನಡುವೆ, ಅಮೆರಿಕದಿಂದ ದೋಹಾ ಮಾರ್ಗವಾಗಿ ಚೆನ್ನೈಗೆ ಬಂದ 15 ವರ್ಷದ ಬಾಲಕನೊಬ್ಬನನ್ನು ತಪಾಸಿಸಿದಾಗ ಆತನಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿವೆ. ಆತನನ್ನು ಚೆನ್ನೈನ ರಾಜೀವ್‌ ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿದೆ. ತಪಾಸಣಾ ವರದಿ ನಂತರ ಕೊರೋನಾ ಇದೆಯೇ ಇಲ್ಲವೇ ಎಂಬುದು ದೃಢಪಡಬೇಕಿದೆ.

ಅರುಣಾಚಲದಿಂದ ವಿದೇಶಿಗರಿಗೆ ನಿಷೇಧ

ಇಟಾನಗರ: ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ವಿದೇಶೀಯರ ರಾಜ್ಯ ಪ್ರವಾಸಕ್ಕೆ ಸಿಕ್ಕಿಂ ಬಳಿಕ ಅರುಣಾಚಲಪ್ರದೇಶವೂ ನಿಷೇಧ ಹೇರಿದೆ. ಅರುಣಾಚಲಪ್ರದೇಶಕ್ಕೆ ಭೇಟಿ ನೀಡಲು ವಿದೇಶಿಗರು ಪರ್ಮಿಟ್‌ ಪಡೆವುದು ಕಡ್ಡಾಯ. ಈಗ ಪರ್ಮಿಟ್‌ ವಿತರಿಸದಂತೆ ರಾಜ್ಯ ಸರ್ಕಾರ ಸೂಚಿಸಿದೆ.

click me!