ದೇಶವ್ಯಾಪಿ ದಾಖಲೆಯ 2500 ಜನಕ್ಕೆ ವೈರಸ್‌!

By Kannadaprabha NewsFirst Published May 2, 2020, 7:40 AM IST
Highlights

ನಿನ್ನೆ ದಾಖಲೆಯ 2500 ಜನಕ್ಕೆ ವೈರಸ್‌| ಮತ್ತೆ 76 ಸಾವು| ಮಹಾರಾಷ್ಟ್ರ: ದಾಖಲೆಯ 1008 ಜನಕ್ಕೆ ಸೋಂಕು

ನವದೆಹಲಿ(ಮೇ.02): ಒಂದೆಡೆ ದೇಶದಲ್ಲಿ ಲಾಕ್‌ಡೌನ್‌ ಸಡಿಲಿಸಲು ಸಿದ್ಧತೆಗಳು ಆರಂಭವಾಗಿರುವಾಗಲೇ ಕೊರೋನಾ ವೈರಸ್‌ ಪ್ರಕರಣಗಳು ಶುಕ್ರವಾರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಒಂದೇ ದಿನ ಬರೋಬ್ಬರಿ 2520 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ 2100 ಪ್ರಕರಣಗಳು ಒಂದೇ ದಿನ ಕಾಣಿಸಿಕೊಂಡಿದ್ದೇ ಈವರೆಗಿನ ಗರಿಷ್ಠವಾಗಿತ್ತು. ಶುಕ್ರವಾರ ದಾಖಲೆ ಸಂಖ್ಯೆಯೊಂದಿಗೆ ಕೊರೋನಾ ವೈರಸ್‌ ಪ್ರಕರಣಗಳ ಸಂಖ್ಯೆ ದೇಶದಲ್ಲಿ 37181ಕ್ಕೆ ಏರಿಕೆ ಆಗಿದ್ದು, 40 ಸಾವಿರದತ್ತ ಸಾಗುತ್ತಿದೆ. ಇದೇ ವೇಳೆ ಒಂದೇ ದಿನ ದೇಶದ ವಿವಿಧೆಡೆ 76 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 1222ಕ್ಕೆ ಏರಿಕೆ ಕಂಡಿದೆ.

ಇನ್ನು ಕೊರೋನಾದ ಹಾಟ್‌ಸ್ಪಾಟ್‌ ಎನಿಸಿರುವ ಮಹಾರಾಷ್ಟ್ರದಲ್ಲಿ ಒಂದೇ ದಿನ 1008 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 11506ಕ್ಕೆ ಏರಿಕೆ ಆಗಿದೆ. ಇನ್ನು ಮಹಾರಾಷ್ಟ್ರದಲ್ಲಿ ಒಂದೇ ದಿನ 26 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ 485ಕ್ಕೆ ಏರಿಕೆ ಆಗಿದೆ.

10 ಸಾವಿರದತ್ತ ಗುಣಮುಖರು:

ಕೊರೋನಾ ಮಹಾಮಾರಿ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಧ್ಯೆಯೇ ಗುಣಮುಖರಾಗತ್ತಿರುವ ಸಂಖ್ಯೆ 10 ಸಾವಿರ ಸಮೀಪಿಸಿದೆ. ಈವರೆಗೆ ಒಟ್ಟು 9529 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ದೇಶದಲ್ಲಿ 27625 ಸಕ್ರಿಯ ಪ್ರಕರಣಗಳಿವೆ.

ಗುರುದ್ವಾರಕ್ಕೆ ಬೀಗ:

ಮಹಾರಾಷ್ಟ್ರದ ನಾಂದೇಡ್‌ನ ಹಾಜುರ್‌ ಸಾಹಿಬ್‌ ಗುರುದ್ವಾರದಿಂದ ಪಂಜಾಬ್‌ಗೆ ಮರಳಿದ್ದವರ ಪೈಕಿ 91 ಮಂದಿಗೆ ಕೊರೋನಾ ವೈರಸ್‌ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಗುರುದ್ವಾರವನ್ನು ಸ್ಥಳೀಯ ಅಧಿಕಾರಿಗಳು ಸೀಲ್‌ ಮಾಡಿದ್ದಾರೆ.

click me!