ವಿಶ್ವ ಆರೋಗ್ಯ ಸಂಸ್ಥೆಯು, ಕೊರೋನಾ ಸೋಂಕಿನ ಜಾಗತಿಕ ಅಪಾಯ ಅಂದಾಜಿನ ಪ್ರಮಾಣವನ್ನು ಗಂಭೀರದಿಂದ ಅತಿ ಗಂಭೀರ ಮಟ್ಟಕ್ಕೆ ಏರಿಸಿದೆ.
ಜಿನೇವಾ (ಫೆ. 29): ವಿಶ್ವ ಆರೋಗ್ಯ ಸಂಸ್ಥೆಯು, ಕೊರೋನಾ ಸೋಂಕಿನ ಜಾಗತಿಕ ಅಪಾಯ ಅಂದಾಜಿನ ಪ್ರಮಾಣವನ್ನು ಗಂಭೀರದಿಂದ ಅತಿ ಗಂಭೀರ ಮಟ್ಟಕ್ಕೆ ಏರಿಸಿದೆ. ಸೋಂಕು ಜಾಗತಿಕ ಷೇರುಪೇಟೆ ಕುಸಿಯಲು ಕಾರಣವಾದ ಮತ್ತು ಸಹಾರಾ ಆಫ್ರಿಕಾ ಪ್ರದೇಶಗಳಿಗೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ ಅದು ಈ ನಿರ್ಧಾರ ಕೈಗೊಂಡಿದೆ.
ದಿನೇ ದಿನೇ ಪ್ರಕರಣಗಳು ಹೊಸ ಹೊಸ ಪ್ರದೇಶಕ್ಕೆ ವಿಸ್ತರಿಸುತ್ತಿರುವ ಕಾರಣ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಈಗಲೂ ಸೊಂಕು ನಿಯಂತ್ರಿಸುವ ಅವಕಾಶ ಇದ್ದೇ ಇದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಹೇಳಿದ್ದಾರೆ.
undefined
ವಿಶ್ವದ 58 ರಾಷ್ಟ್ರಗಳಿಗೆ ಹಬ್ಬಿದ ಕೊರೋನಾ
ನವದೆಹಲಿ: ಚೀನಾವೊಂದರಲ್ಲೇ 2800 ಜನರನ್ನು ಬಲಿಪಡೆದಿರುವ ಕೊರೋನಾ ವೈರಸ್ ಇದೀಗ ಬೆಲಾರಸ್, ಲಿತುವೇನಿಯಾ, ನ್ಯೂಜಿಲೆಂಡ್, ನೈಜೀರಿಯಾ, ಮೆಕ್ಸಿಕೋ, ಅಜರ್‌ಬೈಜಾನ್ ಹಾಗೂ ನೆದರ್‌ಲೆಂಡ್ ರಾಷ್ಟ್ರಗಳ ನಾಗರಿಕರಲ್ಲೂ ಪತ್ತೆಯಾಗಿದೆ. ತನ್ಮೂಲಕ ಈ ಮಾರಣಾಂತಿಕ ಸಾಂಕ್ರಮಿಕ ರೋಗವು ವಿಶ್ವದ 6 ಖಂಡಗಳ 58 ರಾಷ್ಟ್ರಗಳಿಗೂ ವ್ಯಾಪಿಸಿದಂತಾಗಿದೆ. ವಿಶ್ವದಾದ್ಯಂತ 88,000 ಜನರಿಗೆ ಇದೀಗ ಸೋಂಕು ಹಬ್ಬಿದೆ.
ಈ ಸೋಂಕಿನಿಂದಾಗಿ ಈಗಾಗಲೇ ವೆನಿಸ್, ಇಟಲಿ ಸೇರಿದಂತೆ ವಿಶ್ವದ ನಾನಾ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಆದರೆ, ಮುಂದಿನ ದಿನಗಳಲ್ಲಿ ಕೊರೋನಾ ಆರ್ಥಿಕತೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಇನ್ನು ದಕ್ಷಿಣ ಕೊರಿಯಾದಲ್ಲಿ ಶುಕ್ರವಾರ ಒಂದೇ ದಿನ 571 ಮಂದಿಯಲ್ಲಿ ಹೊಸದಾಗಿ ಈ ವೈರಸ್ ಪತ್ತೆಯಾಗಿದೆ. ಈ ಹಿನ್ನೆಲೆ, ಕೊರಿಯಾದಲ್ಲಿ ಕೊರೋನಾ ಪೀಡಿತರ ಸಂಖ್ಯೆ 2337ಕ್ಕೆ ಏರಿದೆ.
ಚೀನಾದಲ್ಲಿ ಕೊರೋನಾ ಅಟ್ಟಹಾಸ
2788- ಈವರೆಗೂ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ
44- ಗುರುವಾರ ಒಂದೇ ದಿನ ಸಾವಿಗೀಡಾದವರು
78,824- ಸೋಂಕಿಗೆ ಸಿಲುಕಿದವರು