ಜಟಾಯುರಾಮನ ಬೆಟ್ಟಕ್ಕೆ 1008 ಮೆಟ್ಟಿಲು ನಿರ್ಮಾಣ: ಕಾಮಗಾರಿಗೆ ಪೇಜಾವರ ಶ್ರೀಗಳಿಂದ ಚಾಲನೆ

By Sathish Kumar KH  |  First Published Mar 5, 2023, 2:18 PM IST

ರಾಮಾಯಣದ ಜಟಾಯು ಮೋಕ್ಷ ಪಡೆದ ಪವಿತ್ರ ಸ್ಥಳ ಜಟಾಯು ರಾಮನ ಬೆಟ್ಟಕ್ಕೆ ಭಕ್ತರು ತೆರಳಲು ಅನುಕೂಲವಾಗುವಂತೆ 1008 ಮೆಟ್ಟಿಲುಗಳ ನಿರ್ಮಾಣ ಕಾರ್ಯವನ್ನು ಶುಕ್ರವಾರದಿಂದ ಆರಂಭಿಸಲಾಯಿತು.


ಉಡುಪಿ (ಮಾ.05): ಕೇರಳದ ಕೊಲ್ಲಂ ಜಿಲ್ಲೆಯ ಚಡಯಮಂಗಲಮ್ ಎಂಬಲ್ಲಿರುವ  ರಾಮಾಯಣದ ಜಟಾಯು ಮೋಕ್ಷ ಪಡೆದ ಪವಿತ್ರ ಸ್ಥಳ ಜಟಾಯು ರಾಮನ ಬೆಟ್ಟಕ್ಕೆ ಭಕ್ತರು ತೆರಳಲು ಅನುಕೂಲವಾಗುವಂತೆ 1008 ಮೆಟ್ಟಿಲುಗಳ ನಿರ್ಮಾಣ ಕಾರ್ಯಕ್ಕೆ ಶುಕ್ರವಾರದಂದು ಉಡುಪಿ ಶ್ರೀ ಪೇಜಾವರ ಮಠಾಧೀಶರೂ ಅಯೋಧ್ಯಾ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಶ್ರೀ‌ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಾಲನೆ ನೀಡಿದರು.

ಬಳಿಕ ನಡೆದ ಧರ್ಮಸಭೆಯಲ್ಲಿ  ಮಲಯಾಳಂ ಭಾಷೆಯಲ್ಲಿಯೇ  ಅನುಗ್ರಹ ಸಂದೇಶ ನೀಡಿ ಸೀತಾಮಾತೆಯ ರಕ್ಷಣೆಯಗಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ದುಷ್ಟ ರಾವಣನೆದುರು ಸೆಣಸಾಟಕ್ಕೆ ನಿಂತ ಜಟಾಯುವಿನ‌ ಸ್ರ್ತೀ ಪರವಾದ ನಿಲುವು ಸಂವೇದನೆಗಳು ನಮಗೆಲ್ಲ ಮಾದರಿ . ಸಮಾಜದಲ್ಲಿ ಜನನೀ ಮಾತೃಸ್ವರೂಪಳಾದ ಸ್ತ್ರೀಯ ಮಾನ ಪ್ರಾಣಗಳ ರಕ್ಷಣೆ  ಮತ್ತು ಜನ್ಮಭೂಮಿಯ ರಕ್ಷಣೆಗಾಗಿ ಯಾವ ಹೊತ್ತಲ್ಲೂ ಯಾವ ತ್ಯಾಗಕ್ಕೂ ಸಿದ್ಧರಿರಬೇಕೆಂಬ ಸಂದೇಶವನ್ನು ಜಟಾಯು ಪ್ರಸಂಗವನ್ನೂ ಸೇರಿದಂತೆ ಇಡೀ ರಾಮಾಯಣ ನಮಗೆ ತಿಳಿಸಿಕೊಡುತ್ತದೆ. ಜಟಾಯು ಮೋಕ್ಷ ಪಡೆದ ಪವಿತ್ರ ಬೆಟ್ಟಕ್ಕೆ ಪಾವಟಿಗೆಗಳನ್ನು ನಿರ್ಮಿಸುವುದೆಂದರೆ ಅನನ್ಯ ರಾಮಭಕ್ತಿ ಮತ್ತು ಸೀತಾಮಾತೆಯ ರಕ್ಷಣೆಗಾಗಿ ಪ್ರಾಣತೆತ್ತ ಜಟಾಯುವಿನ ಎತ್ತರಕ್ಕೆ ನಮ್ಮನ್ನು ನಾವು ಎತ್ತರಿಸಿಕೊಳ್ಳುವುದೆಂದು ಭಾವಿಸಬೇಕು ಎಂದರು.

Latest Videos

undefined

ಉಡುಪಿ: ಎರಡು ದಿನಗಳ ವೆಂಡರ್ ಡೆವಲಪ್‌ಮೆಂಟ್ ಕಾರ್ಯಕ್ರಮ ಆಯೋಜನೆ

ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್, ಮಾತಾ ಅಂಜನಾಂಬಾ ನಿಷ್ಠ , ಜಟಾಯು ರಾಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಜಯಕುಮಾರ್ ಕಾರ್ಯದರ್ಶಿ ಹಾಗೂ ಮಿಜೋರಾಮ್ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್ , ಸ್ವಾಮಿ ಶಂಕರಾನಂದ ಮಯಿ‌, ರಾಮಚಂದ್ರ ಅಡಿಗ ಶಿಲ್ಪಿ ಬಾಲು , ತಂತ್ರಿ ಸತೀಶ ಭಟ್ಟರಿಪ್ಪಾದ್, ರಾಜಶೇಖರನ್ ನಾಯರ್ ಮೊದಲಾದವರು ಉಪಸ್ಥಿತರಿದ್ದರು .

ಹರಿ-ಹರರಲ್ಲಿ ಬೇಧವಿಲ್ಲ ಎಂದ ಶೃಂಗೇರಿ ಶ್ರೀಗಳು: 
ಉಡುಪಿ (ಮಾ.05): ಜಗನ್ನಿಯಾಮಕನಾದ ಭಗವಂತ ಒಬ್ಬನೇ. ಆದರೆ ಭಕ್ತರ ಅನುಗ್ರಹಕ್ಕಾಗಿ ಬೇರೆ ಬೇರೆ ರೂಪ ಹಾಗು ಹೆಸರುಗಳಿಂದ ಕರೆಯಲ್ಪಡುತ್ತಿದ್ದಾನೆ. ಅನೇಕ ನಾಮಗಳಿಂದ ಕರೆಯಲ್ಪಡುತ್ತಿದ್ದು, ಶಿವನಿಗೂ, ವಿಷ್ಣುವಿಗೂ ಭೇದವಿಲ್ಲ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಕಿರಿಯ ಯತಿ ಶ್ರೀ ವಿಧುಶೇಖರಭಾರತಿ ಸ್ವಾಮೀಜಿಯವರು ಹೇಳಿದರು. ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಲ್ಲಿ ಭಾಗವಹಿಸಿ, ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆರ್ಶೀವಚನ ನೀಡಿದರು. 

ತಾರತಮ್ಯ ಮಾಡದಂತೆ ಶಿವನ ಆರಾಧನೆ ಮಾಡಿ: ಭಗವಂತ ಬ್ರಹ್ಮ, ಗಣಪತಿ, ದೇವಿಯ ರೂಪದಲ್ಲೂ ಇದ್ದಾನೆ. ಹಾಗಾಗಿ ಭಗವಂತ ರೂಪ, ನಾಮಗಳಿಗೆ ಭ್ರಮಗೊಳಗಾಗದೇ ಚೈತನ್ಯವನ್ನು ಮಾತ್ರ ಅರಿತು ತಾರತಮ್ಯ ಭಾವ ತಳೆಯದೇ ಆರಾಧನೆ ಮಾಡಬೇಕು. ಶಿವನ ಆರಾಧನೆ ಅನಾಧಿಕಾಲದಿಂದ ಸನಾತನ ಧರ್ಮದಲ್ಲಿ ಆಚರಿಸಿಕೊಂಡು ಬರುತ್ತಿದ್ದು, ಋಷಿಮುನಿಗಳು ಮಾತ್ರವಲ್ಲದೇ ದೇವಾನುದೇವತೆಗಳು ಶಿವರಾಧನೆಯಲ್ಲಿ ತೊಡಗಿರುವುದನ್ನು ಪುರಾಣಗಳು ಉಲ್ಲೇಖಿಸುತ್ತವೆ. ಶಂಕರ ಅಥವಾ ಶಿವ ಮಂಗಳಕರ ಆಗಿದ್ದಾರೆ. ಮಾನವ ಜನ್ಮ ನಶ್ವರವಾದದ್ದು. ಭೋಗ ಜೀವನದ ಬಗ್ಗೆ ಲಾಲಾಸೆ ಪಡದೇ, ನಮ್ಮ ಹಿರಿಯರು ತೋರಿದ ಮಾರ್ಗದಲ್ಲಿ ಸತ್ಕಾರ್ಯಗಳನ್ನು ಮಾಡುವ ಮೂಲಕ ವೈಯುಕ್ತಿಕ ಹಾಗು ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದರು. 

ವೇದಿಕೆಯಲ್ಲಿ ನಾಸಿಕ್ ಉದ್ಯಮಿ ಎಮ್.ಪಿ.ಪ್ರಭು, ಶೃಂಗೇರಿ ಮಠದ ಉಡುಪಿ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್ ಶಾಸ್ತ್ರಿ, ಮಹಾರಾಷ್ಟ್ರದ ಅನಿತಾ ಪ್ರಭು, ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದ ರೆಡ್ಡಿ, ಆರ್.ಎಸ್.ಎಸ್. ದಕ್ಷಿಣ ಕರ್ನಾಟಕ ಪ್ರಾಂತ ಕಾರ್ಯವಾಹ ಜಯಪ್ರಕಾಶ್, ಉದ್ಯಮಿಗಳಾದ ಯು. ಸತೀಶ್ ಶೇಟ್ ಉಡುಪಿ, ಕಾರ್ತಿಕ್ ನಾಯಕ್ ಕುಂದಾಪುರ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಚಂದ್ರಪ್ರಭು, ಮುಕುಂದ ಗಣಪತಿ ಪ್ರಭು, ಆತ್ಮರಾಮ್ ನಾಯಕ್ ಮಣಿಪಾಲ, ಅತಿರುದ್ರ ಮಹಾಯಾಗ ಸಮಿತಿ ಅಧ್ಯಕ್ಷ ರಘುಪತಿ ಭಟ್ ಮತ್ತಿತರರು ಉಪಸ್ಥಿತರಿದ್ದರು.

click me!