* ಚುನಾವಣಾ ಹೊಸ್ತಿಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ನೇಮಕಾತಿ ಚರ್ಚೆ
* ರಾಹುಲ್ ಗಾಂಧಿಯೇ ಪಕ್ಷದ ಅಧ್ಯಕ್ಷ, 2022ರಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣ
ನವದೆಹಲಿ(ಡಿ.29): ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿದ್ದ ಚರ್ಚೆ ಇದೀಗ ಬಹುಬೇಗ ಅಂತ್ಯಗೊಳ್ಳಲಿದೆ. ಮುಂದಿನ ವರ್ಷ ಸೆಪ್ಟೆಂಬರ್ ವೇಳೆಗೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಸಂಘಟನೆ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಇಂಗಿತ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ ವೇಳೆಗೆ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸೋನಿಯಾ ಗಾಂಧಿ ಭೇಟಿಯ ಬಳಿಕ ಮಿಸ್ತ್ರಿ ಹೇಳಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಸದ್ಯ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಅಕ್ಟೋಬರ್‌ನಲ್ಲಿಯೇ ಪಕ್ಷ ಘೋಷಿಸಿತ್ತು.
ಮಾಹಿತಿ ಪ್ರಕಾರ ಮುಂದಿನ ವರ್ಷ ಸೆಪ್ಟೆಂಬರ್ ವೇಳೆಗೆ ಕಾಂಗ್ರೆಸ್ ಪಕ್ಷ ತನ್ನ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ. 2024ರಲ್ಲಿ ಹೊಸ ಮುಖದೊಂದಿಗೆ ಚುನಾವಣೆ ಎದುರಿಸಲು ಪಕ್ಷ ಬಯಸಿದೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಅಂದರೆ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಪಟ್ಟಾಭಿಷೇಕ ಕೇವಲ ಔಪಚಾರಿಕವಾಗಿದೆ. ಪಕ್ಷದ ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ನಿಂತರೆ ಅವರ ವಿರುದ್ಧ ಯಾರೂ ನಾಮಪತ್ರ ಸಲ್ಲಿಸುವುದಿಲ್ಲ. ಮೂಲಗಳನ್ನು ನಂಬುವುದಾದರೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವ ಅವಕಾಶವಿದ್ದರೂ ರಾಹುಲ್ ಗಾಂಧಿ ಅಧ್ಯಕ್ಷರಾಗುವುದು ಖಚಿತ.
ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಮಂಗಳವಾರ ಸೋನಿಯಾ ಗಾಂಧಿ ಅವರಿಗೆ ಚುನಾವಣಾ ಪ್ರಕ್ರಿಯೆಯ ಪ್ರಗತಿ ವರದಿಯನ್ನು ಸಲ್ಲಿಸಿದರು. ಮುಂದಿನ ವರ್ಷ ಸೆಪ್ಟೆಂಬರ್ ವೇಳೆಗೆ ಪಕ್ಷಕ್ಕೆ ಹೊಸ ಅಧ್ಯಕ್ಷರು ಸಿಗಲಿದ್ದಾರೆ ಎಂದು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ನಂತರ ಮಿಸ್ತ್ರಿ ಹೇಳಿದ್ದಾರೆ.
2019ರ ಸೋಲಿನ ನಂತರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ನಂತರ ಸೋನಿಯಾ ಗಾಂಧಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂಬುದು ಗಮನಾರ್ಹ. ಪಕ್ಷದಲ್ಲಿ ಅಧ್ಯಕ್ಷ ಸ್ಥಾನದ ಕೊರೋನಾದಿಂದಾಗಿ ಸಂಘಟನೆಯ ಚುನಾವಣೆಗಳು ನಡೆಯುತ್ತಿಲ್ಲ, ಆದರೆ ಈಗ ಪಕ್ಷವು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮತ್ತು ಗಡುವನ್ನು ನಿರ್ಧರಿಸಿದೆ.