ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ದಿನ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಭಾಗವತ್ ಹೇಳಿಕೆಯನ್ನು ಖಂಡಿಸಿದ್ದಾರೆ.
ನವದೆಹಲಿ: ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾದ ದಿನವೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಎಂಬ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿ ನಡೆದ ಕಾಂಗ್ರೆಸ್‌ನ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತು ಮಾತನಾಡಿದ ರಾಹುಲ್ ಗಾಂಧಿ, ‘ಭಾಗವತ್‌ರದ್ದು ದೇಶದ್ರೋಹದ ಹೇಳಿಕೆ. ಇದು ಭಾರತೀಯರಿಗೆ ಮಾಡಿದ ಅವಮಾನ. ಇಂಥ ಹೇಳಿಕೆ ಮೂಲಕ ಅವರು ಸಂವಿಧಾನ ಹಾಗೂ ಬ್ರಿಟಿಷರ ವಿರುದ್ಧದ ಹೋರಾಟವನ್ನು ಅಮಾನ್ಯ ಎಂದಂತಾಯಿತು. ಇಂಥವುಗಳಿಗೆ ಕಿವಿಗೊಡಬಾರದು’ ಎಂದ ರಾಹುಲ್ ಗಾಂಧಿ, ‘ಅನ್ನಿಸಿದ್ದನ್ನು ಹೇಳುವ ದಿಟ್ಟತನ ಭಾಗವತ್‌ರಿಗಿದೆ. ಬೇರೆ ದೇಶದಲ್ಲಾಗಿದ್ದರೆ ಅವರನ್ನು ಬಂಧಿಸಲಾಗುತ್ತಿತ್ತು’ ಎಂದು ಕಿಡಿಕಾರಿದರು.
ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ‘1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಎಂದು ಹೇಳುವವರು ಅದಕ್ಕಾಗಿ ಹೋರಾಡಿರಲಿಲ್ಲ, ಜೈಲಿಗೆ ಹೋಗಲಿಲ್ಲ. ನಮ್ಮ ಜನರು ಸ್ವಾತಂತ್ರ್ಯಕ್ಕಾಗಿ ಸೆಣಸಿದ್ದರಿಂದ ನಮಗದು ನೆನಪಿದೆ’ ಎಂದರು. ಅಂತೆಯೇ, ‘ಇಂತಹ ಹೇಳಿಕೆಗಳನ್ನು ಕೋಡುತ್ತಿದ್ದರೆ ಭಾಗವತ್ ದೇಶದಲ್ಲಿ ಓಡಾಡುವುದೇ ಕಷ್ಟವಾದೀತು’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನವೇ ನಿಜ ಸ್ವಾತಂತ್ರ್ಯ: ಭಾಗವತ್