ತೈಲ ದರ ಏರಿಕೆ ವಿರುದ್ಧ ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಖರ್ಗೆ!

By Suvarna NewsFirst Published Mar 9, 2021, 7:53 AM IST
Highlights

ತೈಲ ದರ ಏರಿಕೆ ವಿರುದ್ಧ ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಖರ್ಗೆ| ದರ ಏರಿಕೆ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ವಿಪಕ್ಷಗಳ ಬಿಗಿ ಪಟ್ಟು

ನವದೆಹಲಿ(ಮಾ.09): ಪೆಟ್ರೋಲ್‌, ಡೀಸೆಲ್‌ ಹಾಗೂ ಎಲ್‌ಪಿಜಿ ದರಗಳ ನಿರಂತರ ಏರಿಕೆಯ ವಿರುದ್ಧ ವಿಪಕ್ಷಗಳು ಸಂಸತ್ತಿನಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಬಜೆಟ್‌ ಅಧಿವೇಶನದ ಎರಡನೇ ಅವಧಿಯ ಮೊದಲ ದಿನದ ಕಲಾಪ ಭಾರೀ ಕೋಲಾಹಲಕ್ಕೆ ಸಾಕ್ಷಿಯಾಗಿದೆ. ತೈಲ ದರ ಏರಿಕೆಯ ವಿರುದ್ಧ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ ಕಲಾಪವನ್ನು ನಡೆಸಲು ಸಾಧ್ಯವಾಗಲಿಲ್ಲ.

ಇನ್ನು ತೈಲ ದರ ಏರಿಕೆಯ ವಿಷಯವಾಗಿ ರಾಜ್ಯಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಾಗತಿಕವಾಗಿ ಕಚ್ಚಾತೈಲ ದರಗಳು ಕಡಿಮೆ ಇರುವ ಹೊರತಾಗಿಯೂ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ದರಗಳು ನಿರಂತರವಾಗಿ ಏರಿಕೆ ಆಗುತ್ತಿವೆ. ಪೆಟ್ರೋಲ್‌ ದರ ಈಗ 100 ರು. ಸಮೀಪಿಸಿರುವುದು ನಿಮಗೂ ತಿಳಿದಿದೆ. 2014ರ ಬಳಿಕ ಪೆಟ್ರೋಲ್‌ ಮೇಲೆ ಶೇ.258ರಷ್ಟು ಸುಂಕ ವಿಧಿಸಲಾಗಿದ್ದು, ಪೆಟ್ರೋಲ್‌ ದರಗಳು ಸುಮಾರ ಶೇ.820ರಷ್ಟು ಏರಿಕೆ ಆಗಿವೆ.

ಈ ವಿಷಯವನ್ನು ಸದನ ಗಂಭೀರವಾಗಿ ಪರಿಗಣಿಸಿ ಕೂಡಲೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು. ಆದರೆ, ಖರ್ಗೆ ಅವರ ನೋಟಿಸ್‌ ಅನ್ನು ಸ್ವೀಕರಿಸಲು ಒಪ್ಪದ ರಾಜ್ಯಸಭಾಧ್ಯಕ್ಷ ವೆಂಕಯ್ಯನಾಯ್ಡು, ಚೆರ್ಚೆಗೆ ಅವಕಾಶ ನೀಡಲು ನಿರಾಕರಿಸಿದರು. ಇದರಿಂದ ಸದನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದರಿಂದ ಸದನವನ್ನು 11 ಗಂಟೆಯವರೆಗೆ ಮುಂದೂಡಿಕೆ ಮಾಡಲಾಯಿತು.

ಸದನದ ಕಲಾಪ ಆರಂಭವಾಗುತ್ತಿದ್ದಂತೆ ಇದೇ ವಿಷಯವಾಗಿ ಕಾಂಗ್ರೆಸ್‌ ಸದಸ್ಯರು ಚರ್ಚೆಗೆ ಪಟ್ಟುಹಿಡಿದಿದ್ದರಿಂದ ಸದನವನ್ನು 1 ಗಂಟೆಯವರೆಗೆ ಮುಂದೂಡಿಕೆ ಮಾಡಲಾಯಿತು. ಆ ಬಳಿಕವೂ ಗದ್ದಲ ಮುಂದುವರಿದಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗಲಿಲ್ಲ.

ಇದೇ ವೇಳೆ ಸಂಸತ್ತಿನ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಪೆಟ್ರೋಲಿಂ ಉತ್ಪನ್ನಗಳ ದರ ಏರಿಕೆಯ ವಿರುದ್ಧ ಸಂಸತ್ತಿನಲ್ಲಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನಾವು ಬೆಲೆ ಏರಿಕೆಯ ವಿರುದ್ಧ ಜನರ ಆಕ್ರೋಶವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಯಸಿದ್ದೇವೆ. ಆದರೆ, ಸರ್ಕಾರ ಇದಕ್ಕೆ ಸಿದ್ಧವಿಲ್ಲದೇ ಇರುವ ಕಾರಣ ಚರ್ಚೆಗೆ ಹಿಂದೇಟು ಹಾಕುತ್ತಿದೆ ಎಂದು ಹೇಳಿದ್ದಾರೆ.

ಇಂದಿನಿಂದ ಎಂದಿನಂತೆ ಕಲಾಪ:

ಕೊರೋನಾ ಕಾರಣದಿಂದಾಗಿ ರಾಜ್ಯಸಭೆ ಕಲಾಪವನ್ನು ಮುಂಜಾನೆ ಮತ್ತು ಲೋಕಸಭೆ ಕಲಾಪವನ್ನು ಮಧ್ಯಾಹ್ನಕ್ಕೆ ನಿಗದಿ ಮಾಡಲಾಗಿತ್ತು. ಆದರೆ, ಮಂಗಳವಾರದಿಂದ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳು ಮುಂಜಾನೆ 11ಗಂಟೆಯಿಂದ ಆರಂಭವಾಗಲಿವೆ. ಸಂಸದರ ಕೋರಿಕೆಯ ಹಿನ್ನೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ.

click me!