ಚುನಾವಣೆ ನಿರತ ಪಶ್ಚಿಮ ಬಂಗಾಳದಲ್ಲಿ ಶಾಸಕರ ವಲಸೆ| ಮಮತಾಗೆ ಮತ್ತೆ ಶಾಕ್: ಐವರು ಟಿಎಂಸಿ ಶಾಸಕರು ಬಿಜೆಪಿ ಸೇರ್ಪಡೆ!
ಕೋಲ್ಕತಾ(ಮಾ.09): ಚುನಾವಣೆ ನಿರತ ಪಶ್ಚಿಮ ಬಂಗಾಳದಲ್ಲಿ ಶಾಸಕರ ವಲಸೆ ಮುಂದುವರಿದಿದೆ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿರುವ ಕಾರಣಕ್ಕೆ ತೃಣಮೂಲ ಕಾಂಗ್ರೆಸ್‌ನ ಐವರು ಶಾಸಕರು ಪಕ್ಷ ತೊರೆದು ಸೋಮವಾರ ಬಿಜೆಪಿಗೆ ಸೆರ್ಪಡೆ ಆಗಿದ್ದಾರೆ.
ಈ ಮೂಲಕ ಮಾಲ್ಡಾ ಜಿಲ್ಲಾ ಪರಿಷದ್‌ನಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಪ್ತರಾಗಿರುವ ಸೊನಾಲಿ ಗುಹಾ, ಸಿಂಗೂರು ಚಳವಳಿಯ ಪ್ರಮುಖ ಮುಖವಾಗಿದ್ದ ರಬೀಂದ್ರನಾಥ್ ಬಟ್ಟಾಚಾರ್ಯ, 4 ಬಾರಿ ಶಾಸಕರಾಗಿರುವ ಜತು ಲಾಹಿರಿ, ಮಾಜಿ ಫುಟ್ಬಾಲ್ ಆಟಗಾರ ದಿಪೇಂದು ಬಿಸ್ವಾಸ್ ಹಾಗೂ ಶಾಸಕ ಸಿತಾಲ್ ಸರ್ದಾರ್ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿಯಾದರೂ ಅಧಿಕಾರ ಇಲ್ಲ
ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ದಿನಾಂಕ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಟೈಮ್ಸ್ ನೌ, ಸಿ- ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯೊಂದನ್ನು ನಡೆಸಿವೆ. ಸಮೀಕ್ಷೆ ಅನ್ವಯ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಶತಾಯಗತಾಯ ಯತ್ನಿಸುತ್ತಿರುವ ಬಿಜೆಪಿಯು ಒಟ್ಟು 294 ವಿಧಾನಸಭೆ ಕ್ಷೇತ್ರಗಳ ಪೈಕಿ ಭರ್ಜರಿ 107 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಇನ್ನು ಯಾವುದೇ ಕಾರಣಕ್ಕೂ ಕೇಸರಿಯ ಅಲೆ ಬಂಗಾಳಕ್ಕೆ ಸುಳಿಯಲು ಬಿಡಲ್ಲ ಎಂಬ ಪಣತೊಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 154 ಸ್ಥಾನಗಳನ್ನು ಗೆದ್ದು, ಅಧಿಕಾರದಲ್ಲಿ ಮುಂದುವರಿಯಲಿದೆ. ತನ್ಮೂಲಕ ಟಿಎಂಸಿ ಸರಳ ಬಹುಮತ ಗಳಿಸಲಿದೆ.