ಎಂಜಿನಿಯರ್‌ರನ್ನೇ ಹೊರಗಿಟ್ಟಿದ್ದಾರೆ: ಹೈಕಮಾಂಡ್‌ ವಿರುದ್ಧ ಸಿಡಿದ ಕಾಂಗ್ರೆಸ್‌ ‘ಜಿ-8’ ನಾಯಕರು!

By Kannadaprabha NewsFirst Published Feb 28, 2021, 8:46 AM IST
Highlights

ಹೈಕಮಾಂಡ್‌ ವಿರುದ್ಧ ಸಿಡಿದ ಕಾಂಗ್ರೆಸ್‌ ‘ಜಿ-8’ ನಾಯಕರು| ಸಂಸತ್ತಿನಿಂದ ಆಜಾದ್‌ಗೆ ‘ಗೇಟ್‌ಪಾಸ್‌’ ಕೊಟ್ಟಿದ್ದಕ್ಕೆ ಬೇಸರ| ರಿಪೇರಿ ಗೊತ್ತಿದ್ದ ಎಂಜಿನಿಯರ್‌ರನ್ನೇ ಹೊರಗಿಟ್ಟಿದ್ದಾರೆ| ಕಾಂಗ್ರೆಸ್‌ ಪಕ್ಷ ದುರ್ಬಲಗೊಳ್ಳುತ್ತಿದೆ: ಸಿಬಲ್‌, ಶರ್ಮಾ| ‘ಶಾಂತಿ ಸಮ್ಮೇಳನ’ದ ಹೆಸರಲ್ಲಿ ವರಿಷ್ಠರ ವಿರುದ್ಧ ‘ಸಮರ’

ಜಮ್ಮು(ಫೆ.28): ಕಾಂಗ್ರೆಸ್‌ನಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು ಎಂದು ಕಳೆದ ವರ್ಷ ಪಕ್ಷದ ನಾಯಕತ್ವದ ವಿರುದ್ಧ ಆಕ್ರೋಶ ಸ್ಫೋಟಗೊಳಿಸಿದ್ದ 23 ನಾಯಕರ (ಜಿ-23) ಪೈಕಿ 8 ನಾಯಕರು (ಜಿ-8), ಈಗ ಮತ್ತೆ ಭಿನ್ನರಾಗ ಎತ್ತಿದ್ದಾರೆ. ಪಕ್ಷದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಅವರನ್ನು ಮತ್ತೆ ರಾಜ್ಯಸಭೆಗೆ ಕಳಿಸದ ಪಕ್ಷದ ತೀರ್ಮಾನವನ್ನು ಅವರು ಪ್ರಶ್ನಿಸಿದ್ದಾರೆ.

ಜಮ್ಮುವಿನಲ್ಲಿ ಶನಿವಾರ ‘ಶಾಂತಿ ಸಮ್ಮೇಳನ’ದ ಹೆಸರಿನಲ್ಲಿ ಸಭೆ ನಡೆಸಿದ ಈ ನಾಯಕರು ಹೈಕಮಾಂಡ್‌ ನಿರ್ಧಾರಗಳ ವಿರುದ್ಧ ‘ಸಮರ’ ಸಾರುವ ಮಾತುಗಳನ್ನು ಆಡಿದರು. ಸಭೆಯಲ್ಲಿ ಇದ್ದವರೆಂದರೆ ಗುಲಾಂ ನಬಿ ಆಜಾದ್‌, ಕಪಿಲ್‌ ಸಿಬಲ್‌, ಮನೀಶ್‌ ತಿವಾರಿ, ಆನಂದ ಶರ್ಮಾ, ಭೂಪಿಂದರ್‌ ಹೂಡಾ, ವಿವೇಕ ತನ್ಖಾ ಹಾಗೂ ರಾಜ್‌ಬಬ್ಬರ್‌.

ಕಪಿಲ್‌ ಸಿಬಲ್‌ ಮಾತನಾಡಿ, ‘ಆಜಾದ್‌ ಅವರಂಥ ಅನುಭವಿಯನ್ನು ರಾಜ್ಯಸಭೆಗೆ ಮತ್ತೆ ಆಯ್ಕೆ ಮಾಡದೇ ನಿವೃತ್ತಗೊಳಿಸಿರುವ ಪಕ್ಷದ ನಿರ್ಧಾರದಿಂದ ಬೇಸರವಾಗಿದೆ. ಅವರ ಅನುಭವ ಬಳಸಿಕೊಳ್ಳಲು ಪಕ್ಷ ವಿಫಲವಾಗಿದೆ. ಆಜಾದ್‌ಗೆ ಪಕ್ಷದ ಪರಿಸ್ಥಿತಿ ಪ್ರತಿ ಜಿಲ್ಲೆಯಲ್ಲೇನಿದೆ ಎಂಬುದು ಗೊತ್ತು. ಅವರು ವಿಮಾನ ಹಾರಿಸಬಲ್ಲ ಪೈಲಟ್‌ ಹಾಗೂ ಕೆಟ್ಟವಿಮಾನ ರಿಪೇರಿ ಮಾಡಬಲ್ಲ ಪೈಲಟ್‌ ಎಂಜಿನಿಯರ್‌ ಆಗಿದ್ದರು. ಅವರನ್ನೇಕೆ ಹೊರಗಿಟ್ಟರೋ ಗೊತ್ತಿಲ್ಲ’ ಎಂದು ಬೇಸರಿಸಿದರು.

‘ಪಕ್ಷ ದುರ್ಬಲಗೊಳ್ಳುತ್ತಿದೆ. ಅದಕ್ಕೆಂದೇ ನಾವಿಲ್ಲಿ ಸೇರಿದ್ದೇವೆ. ಈ ಮುನ್ನೂ ಸೇರಿದ್ದೆವು. ಪಕ್ಷ ಬಲವರ್ಧನೆ ನಮ್ಮ ಗುರಿ’ ಎಂದರು.

ಆನಂದ ಶರ್ಮಾ ಮಾತನಾಡಿ, ‘ಕಳೆದ 1 ದಶಕದಿಂದ ಕಾಂಗ್ರೆಸ್‌ ದುರ್ಬಲವಾಗಿದೆ. ಈಗ ಎಲ್ಲೆಡೆ ಅದಕ್ಕೆ ಬಲ ಬರಬೇಕು. ಹೊಸ ಪೀಳಿಗೆ ಪಕ್ಷಕ್ಕೆ ಆಗಮಿಸಬೇಕು. ಪಕ್ಷವನ್ನು ನಾವು ರಕ್ಷಿಸುತ್ತೇವೆ’ ಎಂದರು. ‘1050ರ ನಂತರ ಒದೇ ಮದಲ ಬಾರಿ ಪಕ್ಷದ ಕಾಶ್ಮೀರದ ಪ್ರತಿನಿಧಿ ರಾಜ್ಯಸಭೆಯಲ್ಲಿ ಇಲ್ಲ’ ಎಂದು ಬೇಸರಿಸಿದರು.

ಆಜಾದ್‌ ನಿವೃತ್ತಿಯ ಬಳಿಕ ಇತ್ತೀಚೆಗೆ ರಾಜ್ಯಸಭಾ ವಿಪಕ್ಷ ನಾಯರಕ್ಕಾಗಿ ಕಾಂಗ್ರೆಸ್‌ ಪಕ್ಷ ಕರ್ನಾಟಕದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಿತ್ತು.

click me!