
ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜೊತೆಗಿನ ಉತ್ತಮ ಒಡನಾಟ ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಇವಿಎಂ ಹ್ಯಾಕ್ ಮಾಡಬಹುದು ಎಂದು ಕಾಂಗ್ರೆಸ್ ನಾಯಕ ರಶೀದ್ ಅಲ್ವಿ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಲ್ವಿ 'ಇಸ್ರೇಲ್ 600 ಕಿ.ಮೀ. ದೂರದಿಂದಲೇ ಲೆಬನಾನ್‌ನಲ್ಲಿ ಪೇಜರ್ ಮತ್ತು ವಾಕಿಟಾಕಿ ಹ್ಯಾಕ್ ಮಾಡಿ ಸ್ಫೋಟ ನಡೆಸಿದೆ. ಹೀಗಿರುವಾಗ ಇವಿಎಂ ಯಾವ ಲೆಕ್ಕ? ಇಂಥ ಕೆಲಸಗಳಲ್ಲಿ ಇಸ್ರೇಲ್ ನಿಷ್ಣಾತವಾಗಿದೆ. ಹೀಗಾಗಿ ನೆತನ್ಯಾಹು ಜೊತೆಗಿನ ತಮ್ಮ ಸ್ನೇಹ ಬಳಸಿಕೊಂಡು ಪ್ರಧಾನಿ ಮೋದಿ, ಇವಿಎಂ ಹ್ಯಾಕ್ ಮಾಡಬಹುದು ಎಂದರು. ಎಲ್ಲಿಯವರೆಗೆ ಚುನಾವಣೆಗಳಲ್ಲಿ ಇವಿಎಂ ಬಳಕೆ ಮಾಡಲಾಗುತ್ತದೆಯೋ, ಅಲ್ಲಿಯವರೆಗೆ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ ಎಂದು ರಶೀದ್ ಅಲ್ವಿ ದೂರಿದ್ದಾರೆ.
ಪೇಜರ್ ರೀತಿ ಇವಿಎಂ ಹ್ಯಾಕ್ ಸಾಧ್ಯವಿಲ್ಲ: ಆಯೋಗ
ನವದೆಹಲಿ: ಇತ್ತೀಚೆಗೆ ಲೆಬನಾನ್‌ನಲ್ಲಿ ಪೇಜರ್‌ಗಳನ್ನು ಹ್ಯಾಕ್ ಮಾಡಿದ ರೀತಿಯಲ್ಲಿ ಭಾರತೀಯ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‌ಗಳನ್ನೂ ಹ್ಯಾಕ್ ಮಾಡಬಹುದು ಎಂಬ ಅನುಮಾನ ಮತ್ತು ಆರೋಪಗಳನ್ನು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟವಾಗಿ ತಳ್ಳಿಹಾಕಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, 'ಪೇಜರ್‌ಗಳು ಅಂತರ್ಜಾಲಕ್ಕೆ ಸಂಪರ್ಕ ಹೊಂದಿರುತ್ತವೆ. ಆದರೆ ಇವಿಎಂಗಳು ಹಾಗಿಲ್ಲ. ಜೊತೆಗೆ ಪೇಜರ್‌ಗಳಲ್ಲಿ ಬಳಸುವ ಬ್ಯಾಟರಿಗೂ, ಇವಿಎಂ ಬ್ಯಾಟರಿಗೂ ವ್ಯತ್ಯಾಸವಿದೆ. ಇವಿಎಂಗಳಲ್ಲಿ ಒಮ್ಮೆ ಮಾತ್ರ ಬಳಸಬಹುದಾದ ಕ್ಯಾಲ್ಕುಲೇಟರ್ ರೀತಿಯ ಬ್ಯಾಟರಿ ಬಳಸಲಾಗಿರುತ್ತದೆ. ಹೀಗಾಗಿ ಅದನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ' ಎಂದು ಸ್ಪಷ್ಟನೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ