ಕೊಲಿಜಿಯಂ ಕುರಿತು ಕೇಂದ್ರ ಸಚಿವ ರಿಜಿಜು ಹೇಳಿಕೆಗೆ ನಿವೃತ್ತ ಸಿಜೆಐ ಲಲಿತ್ ಆಕ್ಷೇಪ

By Kannadaprabha NewsFirst Published Nov 14, 2022, 8:28 AM IST
Highlights

ಕೊಲಿಜಿಯಂ ಅಪಾರದರ್ಶಕ ಎಂದು ಕೇಂದ್ರ ಸಚಿವ ರಿಜಿಜು ಹೇಳಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ನಿವೃತ್ತ ನ್ಯಾಯಮೂರ್ತಿ ಯು.ಯು. ಲಲಿತ್, ರಿಜಿಜು ಹೇಳಿಕೆ ತಪ್ಪು, ಕೊಲಿಜಿಯಂ ಪಾರದರ್ಶಕ ಎಂದು ಸಮರ್ಥಿಸಿಕೊಂಡಿದ್ದಾರೆ. 

ನವದೆಹಲಿ: ದೇಶದ ಉನ್ನತ ನ್ಯಾಯಾಲಯಗಳಿಗೆ (Higher Courts) ನ್ಯಾಯಮೂರ್ತಿಗಳ (Judges) ನೇಮಕಕ್ಕೆ ಶಿಫಾರಸು ಮಾಡುವ ‘ಕೊಲಿಜಿಯಂ’ (Collegium) (ನ್ಯಾಯಾಧೀಶರ ನೇಮಕ ಸಮಿತಿ) ‘ಪಾರದರ್ಶಕವಾಗಿಲ್ಲ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು (Kiren Rijiju) ನೀಡಿದ ಹೇಳಿಕೆಗೆ ಇತ್ತೀಚೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ನಿವೃತ್ತರಾದ ನ್ಯಾ. ಯು.ಯು. ಲಲಿತ್‌ (U.U. Lalit) ಆಕ್ಷೇಪಿಸಿದ್ದಾರೆ. ನಿವೃತ್ತಿ ಹಿನ್ನೆಲೆಯಲ್ಲಿ ಟಿವಿ ಸಂದರ್ಶನ ನೀಡಿದ ನ್ಯಾಯಮೂರ್ತಿ ಲಲಿತ್‌ ‘ಅಂಥ ಹೇಳಿಕೆ (ಅಪಾರದರ್ಶಕ) ಅವರ ವೈಯಕ್ತಿಕ ವಿಚಾರ. ಆದರೆ ಕೊಲಿಜಿಯಂ ವ್ಯವಸ್ಥೆ ಪರಿಪೂರ್ಣವಾಗಿದೆ ಹಾಗೂ ಎಲ್ಲ ಸಾಧಕ-ಬಾಧಕ ಪರಿಶೀಲಿಸಿ ಹಾಗೂ ಎಲ್ಲರ ಅನಿಸಿಕೆ ಆಲಿಸಿ ನ್ಯಾಯಾಧೀಶರ ನೇಮಕಕ್ಕೆ ಸಮತೋಲಿತ ನಿರ್ಧಾರ ಕೈಗೊಳ್ಳುತ್ತದೆ’ ಎಂದರು.

‘ಸುಪ್ರೀಂ ಕೋರ್ಟ್‌ (Supreme Court) 34 ಹುದ್ದೆಗಳಲ್ಲಿ 7 ಹುದ್ದೆ ಖಾಲಿ ಇವೆ. ಹೀಗಾಗಿ ಸರ್ಕಾರ ಹಾಗೂ ಕೊಲಿಜಿಯಂ ನಡುವೆ ಮಾತುಕತೆ ನಡೆಯಬೇಕು. ನ್ಯಾಯಾಧೀಶರ ನೇಮಕಕ್ಕೆ ನಾವು ಮಾಡಿದ ಶಿಫಾರಸಿನ ಬಗ್ಗೆ ಸರ್ಕಾರ ಬೇಗ ನಿರ್ಧರಿಸಬೇಕು. ನೇಮಕ ಸ್ಥಗಿತಗೊಳಿಸುವುದು ಸ್ವೀಕಾರಾರ್ಹ ಅಲ್ಲ’ ಎಂದರು.

ಇದನ್ನು ಓದಿ: ಜಡ್ಜ್‌ಗಳ ನೇಮಕ ವಿಳಂಬ: ಕೇಂದ್ರ ಸರ್ಕಾರದ ಬಗ್ಗೆ Supreme Court ಗರಂ

ಅಮಿತ್‌ ಶಾ ವಕೀಲ ಆಗಿದ್ದರಿಂದ ಪರಿಣಾಮ ಇಲ್ಲ:
‘2014ರಲ್ಲಿ ಇನ್ನೂ ಬಿಜೆಪಿ ಅಧಿಕಾರಕ್ಕೆ ಬಂದಿರಲಿಲ್ಲ. ಆಗಲೇ ಸೊಹ್ರಾಬುದ್ದೀನ್‌ ಶೇಖ್‌ ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಅವರ ವಕೀಲನಾಗಿ ನಾನು ನೇಮಕಗೊಂಡೆ. ಆದರೆ ನಾನು ಮುಖ್ಯ ವಕೀಲ ಆಗಿರಲಿಲ್ಲ. ರಾಂ ಜೇಠ್ಮಲಾನಿ ನೇತೃತ್ವದ ತಂಡದಲ್ಲಿದ್ದೆ. ಹೀಗಾಗಿ ಜಡ್ಜ್‌ ಅವಧಿಯ ವೇಳೆ ಈ ಪ್ರಕರಣವು ನನ್ನ ಸೇವೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ, ‘ನಾನು ಅಮಿತ್‌ ಶಾ ಪರ ಯಾವತ್ತೂ ಕೋರ್ಟಲ್ಲಿ ವಾದ ಮಂಡಿಸಲಿಲ್ಲ. ಇದೇ ಪ್ರಕರಣದಲ್ಲಿ ಅಮಿತ್‌ ಶಾ ಜತೆ ಸಹ-ಆರೋಪಿಗಳಾಗಿದ್ದ ಇತರರ ಪರ ವಾದ ಮಂಡಿಸಿದ್ದೆ’ ಎಂದರು.

ಇದನ್ನೂ ಓದಿ: ಏಕಕಾಲಕ್ಕೆ ದಾಖಲೆ 8 ಹೈಕೋರ್ಟ್ ಸಿಜೆಗಳ ನೇಮಕಕ್ಕೆ ಶಿಫಾರಸು

ರಾಜ್ಯಸಭಾ ಸ್ಥಾನ ಕೊಟ್ರೆ ಒಪ್ಪಲ್ಲ, ಸಿಜೆಐ ಆದವರಿಗೆ ಅದು ಸೂಕ್ತವಲ್ಲ: ಲಲಿತ್‌
ಸರ್ಕಾರಿ ಹುದ್ದೆ ಅಥವಾ ರಾಜ್ಯಸಭಾ ಸ್ಥಾನ ನೀಡಿದರೆ ನಾನು ಸ್ವೀಕರಿಸುವುದಿಲ್ಲ, ಅದು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ತಕ್ಕುನಾದುದಲ್ಲ ಎಂಬುದು ನನ್ನ ಭಾವನೆ ಎಂದು ಸುಪ್ರೀಂಕೋರ್ಚ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ನ್ಯಾ. ಯು.ಯು.ಲಲಿತ್‌ ಭಾನುವಾರ ಹೇಳಿದ್ದಾರೆ. 

ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು, ಒಂದು ಬಾರಿ ಮುಖ್ಯ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದ ಬಳಿಕ ರಾಜ್ಯಸಭಾ ಸಂಸದನಾಗುವುದು ಅಥವಾ ರಾಜ್ಯವೊಂದರ ರಾಜ್ಯಪಾಲನಾಗುವುದು ಸಿಜೆಐ ಹುದ್ದೆಗೆ ಸರಿಹೊಂದುವುದಿಲ್ಲ ಎನ್ನುವುದು ನನ್ನ ಭಾವನೆ. ಆದರೆ ಈ ಹುದ್ದೆಗಳನ್ನು ಹೊಂದುವುದನ್ನು ನಾನು ತಪ್ಪು ಎಂದು ಹೇಳುತ್ತಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ: ಸುಪ್ರೀಂಗೆ 9  ಹೊಸ ನ್ಯಾಯಾಧೀಶರು, ಕರ್ನಾಟಕದ ಬಿವಿ ನಾಗರತ್ನ ಹೆಸರು ಫೈನಲ್

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾಗಿ ಹಾಲಿ ನ್ಯಾಯಮೂರ್ತಿಗಳನ್ನು ಅಥವಾ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗುತ್ತದೆ. ಇಂತಹವುಗಳಿಗೆ ಅವಶ್ಯಕತೆ ಇದೆ. ಆದರೆ ರಾಜ್ಯಸಭೆ ಸಂಪೂರ್ಣವಾಗಿ ವಿಭಿನ್ನವಾಗಿದೆ. ನಾನು ಕಾನೂನು ಶಾಲೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಲು ಬಯಸುತ್ತೇನೆ ಎಂದು ಹೇಳಿದರು. ಹಿಂದಿನ ಸಿಜೆಐಗಳ ಪೈಕಿ ಒಬ್ಬರಾದ ರಂಜನ್‌ ಗೊಗೋಯ್‌ ನಿವೃತ್ತಿ ಬಳಿಕ ರಾಜ್ಯಸಭಾ ಸದಸ್ಯರಾಗಿದ್ದರು.

click me!