ಇನ್ಫೋಸಿಸ್ ಪ್ರತಿಷ್ಠಾನದ ಸ್ಥಾಪಕಿ, ಹೆಮ್ಮೆಯ ಕನ್ನಡತಿ ಸುಧಾಮೂರ್ತಿ ಅವರ ಹೆಸರನ್ನು ಅಮೆರಿಕಾದಲ್ಲಿರುವ ಸಂಸ್ಥೆಯೊಂದು ದುರುಪಯೋಗಪಡಿಸಿಕೊಂಡು ದುಡ್ಡು ಮಾಡಲು ಮುಂದಾಗಿದ್ದು, ಈ ಬಗ್ಗೆ ಸುಧಾಮೂರ್ತಿಯವರು ದೂರು ದಾಖಲಿಸಿದ್ದಾರೆ.
ಬೆಂಗಳೂರು: ಇನ್ಫೋಸಿಸ್ ಪ್ರತಿಷ್ಠಾನದ ಸ್ಥಾಪಕಿ, ಹೆಮ್ಮೆಯ ಕನ್ನಡತಿ ಸುಧಾಮೂರ್ತಿ ಅವರ ಹೆಸರನ್ನು ಅಮೆರಿಕಾದಲ್ಲಿರುವ ಸಂಸ್ಥೆಯೊಂದು ದುರುಪಯೋಗಪಡಿಸಿಕೊಂಡು ದುಡ್ಡು ಮಾಡಲು ಮುಂದಾಗಿದ್ದು, ಈ ಬಗ್ಗೆ ಸುಧಾಮೂರ್ತಿಯವರು ದೂರು ದಾಖಲಿಸಿದ್ದಾರೆ. ಅಮೆರಿಕಾದಲ್ಲಿ (America) ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಸುಧಾಮೂರ್ತಿಯವರ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು, ಈ ಬಗ್ಗೆ ಸುಧಾಮೂರ್ತಿಯವರು ತಮ್ಮ ಸಹಾಯಕರಿಂದ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಲೇಖಕಿ ಹಾಗೂ ಇನ್ಪೋಸಿಸ್ ಪ್ರತಿಷ್ಠಾನದ (Infosys Foundation) ಮುಖ್ಯಸ್ಥೆಯಾಗಿರುವ ಸುಧಾಮೂರ್ತಿ ಹಲವು ಸಾಮಾಜಿಕ ಸೇವೆಯ ಕಾರಣಕ್ಕೆ ಹೆಸರಾಗಿದ್ದಾರೆ. ಪ್ರಕೃತಿ ವಿಕೋಪ ಸಂಭವಿಸಿದ ಹಲವು ಕಡೆಗಳಲ್ಲಿ ಸುಧಾಮೂರ್ತಿ ಕೈಲಾಗದ ಅಸಹಾಯಕರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಇದರ ಜೊತೆಗೆ ಹಲವು ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಶ್ರಮಿಸಿದ್ದಾರೆ. ತಮ್ಮ ಸಾಮಾಜಿಕ ಕಾರ್ಯಗಳಿಂದಲೇ ಪ್ರಪಂಚದೆಲ್ಲೆಡೆ ಅವರು ಪ್ರಖ್ಯಾತಿ ಗಳಿಸಿದ್ದಾರೆ. ಈ ಖ್ಯಾತಿಯೇ ಈಗ ಅವರಿಗೆ ತೊಡಕಾಗಿದೆ. ಅಮೆರಿಕಾದಲ್ಲಿ ನಡೆದ ಎರಡು ಕಾರ್ಯಕ್ರಮಗಳಲ್ಲಿ ಅವರ ಹೆಸರು ದುರುಪಯೋಗವಾಗಿದೆ ಎಂದು ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಸುಧಾಮೂರ್ತಿಯವರು ತಮ್ಮ ಸಹಾಯಕಿ ಮಮತಾ ಸಂಜಯ್ (Mamata Sanjay) ಅವರ ಮೂಲಕ ದೂರು ದಾಖಲಿಸಿದ್ದಾರೆ.
ಭಾರತದ ಬಗ್ಗೆ ಹೆಮ್ಮೆ ಇದೆ: ಕೆನಡಾ ವಿಚಾರದಲ್ಲಿ ಭಾರತದ ಬೆಂಬಲಕ್ಕೆ ನಿಂತ ಬಾಂಗ್ಲಾದೇಶ
ಮೊದಲ ಘಟನೆಯಲ್ಲಿಉತ್ತರ ಕ್ಯಾಲಿಫೋರ್ನಿಯಾದ (Northern California) ಕನ್ನಡ ಕೂಟದ 50 ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಸುಧಾಮೂರ್ತಿಯವರಿಗೆ ಆಹ್ವಾನವನ್ನು ನೀಡಲಾಗಿತ್ತು. ಆದರೆ ಬಿಡುವಿಲ್ಲದ ಕಾರಣ ಸುಧಾಮೂರ್ತಿ ಈ ಆಹ್ವಾನವನ್ನು ನಿರಾಕರಿಸಿದ್ದರು. ಹಾಗಿದ್ದರೂ ಅವರು ಕಾರ್ಯಕ್ರಮದ ಮುಖ್ಯ ಅತಿಥಿ ಎಂದು ಸಂಘ ಪ್ರಚಾರ ಮಾಡಿರುವುದು ಸುಧಾಮೂರ್ತಿಯವರಿಗೆ ತಿಳಿದಿದೆ. ಈ ಬಗ್ಗೆ ವಿಚಾರಿಸಿದಾಗ ಮೂರ್ತಿ ಅವರ ಆಪ್ತ ಸಹಾಯಕಿ ಎಂದು ಹೇಳಿಕೊಂಡ ಲಾವಣ್ಯ ಎಂಬ ಮಹಿಳೆ ಸುಧಾಮೂರ್ತಿಯವರ ಆಗಮನವನ್ನು ಖಚಿತಪಡಿಸಿದ್ದಾರೆ ಎಂದು ಕೆಕೆಎನ್‌ಸಿ ಸಂಘಟಕರು ಸುಧಾಮೂರ್ತಿ ಅವರ ಕಚೇರಿಗೆ ಮಾಹಿತಿ ನೀಡಿದ್ದಾರೆ.
ಎರಡನೇ ಪ್ರಕರಣದಲ್ಲಿ ಶ್ರುತಿ ಎಂಬ ಮಹಿಳೆ ಸೆಪ್ಟಂಬರ್ 26 ರಂದು ಅಂದರೆ ನಾಳೆ ಅಮೆರಿಕಾದಲ್ಲಿ ನಡೆಯಲಿರುವ 'ಮೀಟ್ ಆಂಡ್-ಗ್ರೀಟ್' ('Meet and Greet' program) ಕಾರ್ಯಕ್ರಮದಲ್ಲಿ ಮೂರ್ತಿ ಭಾಗವಹಿಸುತ್ತಾರೆ ಎಂದು ಅಲ್ಲಿನ ಕೆಲವರಿಂದ 40 ಡಾಲರ್ ಹಣ ಸಂಗ್ರಹಿಸಿದ್ದಾರೆ. ಇದರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆಯೂ ಸಂಘಟಕರು ಸುಧಾಮೂರ್ತಿಯವರ ಕಚೇರಿಯನ್ನು ಸಂಪರ್ಕಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಭಾರತ ಮಾತೆಗೆ ಜೈ ಎಂದಷ್ಟೇ ಹೇಳಬಲ್ಲೆ... ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ನೂಪುರ್ ಶರ್ಮಾ
ಈ ಎರಡು ಪ್ರಕರಣಗಳ ಹಿನ್ನೆಲೆಯಲ್ಲಿ ಲಾವಣ್ಯ ಹಾಗೂ ಶ್ರುತಿ ಎಂಬುವವರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹೆಸರಿನ ದುರ್ಬಳಕೆ, ವಂಚನೆ, ಸೇರಿದಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಹಲವು ಗಂಭೀರ ಸ್ವರೂಪದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಸುಧಾಮೂರ್ತಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮೋಸ ಮಾಡಿದ ಇಬ್ಬರು ಅಮೆರಿಕಾದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.