
ಮುಂಬೈ(ಜು.30): ರಾಜಕೀಯ ಬೆಳವಣಿಗೆಗಳಿಂದ ಭಾರಿ ಸದ್ದು ಮಾಡಿದ್ದ ಮಹಾರಾಷ್ಟ್ರ ನಿಧಾನವಾಗಿ ದೈನಂದಿನ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದೆ. ಇದರ ನಡುವೆ ರಾಜ್ಯಪಾಲರ ಹೇಳಿಕೆಯೊಂದು ಮಹಾರಾಷ್ಟ್ರದಲ್ಲಿ ಮರಾಠಿ ಕಿಚ್ಚು ಹಚ್ಚಿದೆ. ಗುಜರಾತಿ, ರಾಜಸ್ಥಾನಿ ಮಾರ್ವಾಡಿಗಳ ಕೊಡುಗೆ ಕುರಿತು ಭಾಷಣದಲ್ಲಿ ಉಲ್ಲೇಖಿಸುವಾಗ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಂಬೈ ಆರ್ಥಿಕ ನಗರಿಯಾಗಿ ಬೆಳೆಯಲು ರಾಜಸ್ಥಾನಿ, ಗುಜರಾತಿಗಳ ಕೊಡುಗೆ ಅಪಾರ. ಇವರಿಲ್ಲದೇ ಇದ್ದರೆ ಮುಂಬೈನಲ್ಲಿ ಹಣವೇ ಇರುವುದಿಲ್ಲ. ಮುಂಬೈ ಈ ಮಟ್ಟಕ್ಕೆ ಬೆಳೆಯುತ್ತಲೇ ಇರಲಿಲ್ಲ ಎಂದು ಕೋಶಿಯಾರಿ ಹೇಳಿದ್ದಾರೆ. ಈ ಹೇಳಿಕೆಗೆ ಶಿವಸೇನೆ, ಕಾಂಗ್ರೆಸ್ ಸೇರಿದಂತೆ ಮಹಾರಾಷ್ಟ್ರ ಜನತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತ ಸ್ವತಃ ಬಿಜೆಪಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಕೋಶಿಯಾರಿ ಮಾತು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.
ಸಾಂವಿಧಾನಿಕ ಹುದ್ದೆ ಹೊಂದಿದವರು ಯಾವುದೇ ಸಮುದಾಯವನ್ನು, ಭಾಷಿಗರನ್ನು ಅವಮಾನಿಸುವುದು ಸರಿಯಲ್ಲ. ಕೋಶಿಯಾರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ವಿವಾದಾತ್ಮಕ ಮಾತುಗಳೇ ಅನಗತ್ಯ. ಇದು ಅವರ ವೈಯುಕ್ತಿ ಅಭಿಪ್ರಾಯ. ಆದರೆ ಒಂದು ಸಮುದಾಯಕ್ಕೆ ನೋವುಂಟು ಮಾಡಿದೆ. ಮರಾಠಿಗರ ಸಾಮರ್ಥ್ಯದಿಂದಲೇ ಮುಂಬೈ ವಿಶ್ವಮಟ್ಟದಲ್ಲಿ ಅತೀ ದೊಡ್ಡ ನಗರವಾಗಿ ಬೆಳೆದು ನಿಂತಿದೆ. ಮರಾಠಿಗರು ಮಹಾರಾಷ್ಟ್ರದ ಸಂಸ್ಕೃತಿ, ಘನೆತೆ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ದೇಶದ ಇತರ ರಾಜ್ಯದ ಅದೆಷ್ಟೋ ಮಂದಿಗೆ ಮುಂಬೈ ಕರ್ಮ ಭೂಮಿಯಾಗಿದೆ. ಹೀಗಾಗಿ ಮರಾಠಿಗರನ್ನು ಅವಮಾನಿಸುವ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.
ಗುಜರಾತಿಗಳನ್ನು ಮಹಾರಾಷ್ಟ್ರದಿಂದ ಓಡಿಸಿದರೆ ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ: ಮಹಾ ರಾಜ್ಯಪಾಲ
ಮುಂಬೈ ಹಾಗೂ ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಮರಾಠಿಗರ ಕೊಡುಗೆಯೇ ಅಪಾರ. ಮರಾಠಿಗರಿಂದಲೇ ರಾಜ್ಯ ಈ ಮಟ್ಟಕ್ಕೆ ಬೆಳೆದಿದೆ. ರಾಜ್ಯಪಾಲರ ಮಾತನ್ನು ಒಪ್ಪುವುದಿಲ್ಲ ಎಂದು ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ವಿವಾದ ಹೆಚ್ಚಾಗುತ್ತಿದ್ದಂತೆ ರಾಜ್ಯಪಾಲ ಕೋಶಿಯಾರಿ ಸ್ಪಷ್ಟನೆ ನೀಡಿದ್ದಾರೆ. ಮರಾಠಿಗರನ್ನು ಅವಮಾನಿಸುವ ಉದ್ದೇಶ ನನಗಿಲ್ಲ. ನನ್ನ ಹೇಳಿಕೆಯನ್ನೇ ತಪ್ಪಾಗಿ ಅರ್ಥೈಸಲಾಗಿದೆ. ಒಂದು ಸಮುದಾಯವನ್ನು, ಭಾಷಿಕರನ್ನು ದೂಷಿಸುವ ಕಾರ್ಯಕ್ಕೆ ಇಳಿಯುವುದಿಲ್ಲ. ಅನಗತ್ಯ ವಿವಾದಗಳು ಬೇಡ ಎಂದು ಕೋಶಿಯಾರಿ ಹೇಳಿದ್ದಾರೆ.
ಮುಂಬೈ ಹಾಗೂ ಮಹಾರಾಷ್ಟ್ರದಲ್ಲಿ ಇದೀಗ ಕೋಶಿಯಾರಿ ಹೇಳಿಕೆ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿದೆ. ಮರಾಠಿಗರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ, ಕೋಶಿಯಾರಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಮೊಘಲರು ಸೇರಿದಂತೆ ದಾಳಿಕೋರರು, ಬ್ರಿಟೀಷರಿಂದ ಮಹಾರಾಷ್ಟ್ರವನ್ನು ಉಳಿಸಿ, ಇಲ್ಲಿಯ ಜನರಿಗೆ ಅಭಯ ನೀಡಿದ್ದು ಮರಾಠಿಗರು. ಶಿವಾಜಿ ಮಹಾರಾಜ್ ರಂತಹ ಅಪ್ರತಿಮ ವೀರರು ಹೋರಾಡದೇ ಇದ್ದರೆ, ಇಂದು ಮಹಾರಾಷ್ಟ್ರ ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಧಿಕಾರದ ಆಸೆಗೆ ಮಾತೃಭಾಷೆ ಅಸ್ಮಿತೆ, ಆದರ್ಶ ಕಟ್ಟಿಟ್ಟ ಶಿವಸೇನೆಗೆ ಇದೆಂಥಾ ಗತಿ!
ಶಿಂಧೆ ಬಣದಲ್ಲಿ ಗುರುತಿಸಿಕೊಂಡವರ ವಜಾಕ್ಕೆ ಕೋರಿಕೆ
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿರುವ ಲೋಕಸಭೆಯ 12 ಬಂಡಾಯ ಸಂಸದರನ್ನು ವಜಾ ಮಾಡುವಂತೆ ಶಿವಸೇನೆ ನಾಯಕ ಸಂಜಯ್ ರಾವುತ್ ಗುರುವಾರ ಲೋಕಸಭೆಗೆ ಸ್ಪೀಕರ್ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಲೋಕಸಭೆಯಲ್ಲಿ ಶಿವಸೇನೆ 19 ಸದಸ್ಯ ಬಲ ಹೊಂದಿದ್ದು, ಈ ಪೈಕಿ 12 ಜನರು ಶಿಂಧೆ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ಈ ಬಣವು, ರಾಹುಲ್ ಶಿವಾಲೆ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕ ಎಂದು ಮತ್ತು ಭವನ ಗಾವ್ಳಿ ಅವರನ್ನು ಮುಖ್ಯ ವಿಪ್ ಎಂದೂ ಆಯ್ಕೆ ಮಾಡಿತ್ತು. ಅದನ್ನು ಲೋಕಸಭೆ ಸ್ಪೀಕರ್ ಕೂಡಾ ಮಾನ್ಯ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ