
ರಾಜ್‌ಕೋಟ್ (ಏ.28) ಬಿಜೆಪಿ ಭದ್ರಕೋಟೆ ಎಂದು ಕಣ್ಣುಮುಚ್ಚಿ ಹೇಳುವ ರಾಜ್ಯ ಗುಜರಾತ್. ಗುಜರಾತ್ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಭಾರಿ ಸಂಚಲನ ಸೃಷ್ಟಿಸಿದ್ದರು. ಮೋದಿ ಪ್ರಧಾನಿಯಾದ ಬಳಿಕವೂ ಗುಜರಾತ್‌ನಲ್ಲಿ ಮೋದಿ ಪರ ಒಲವು ಇಮ್ಮಡಿಯಾಗಿದೆ. ಕೆಲ ದಶಕಗಳಿಂದ ಗುಜರಾತ್‌ನ ಎಲ್ಲಾ ಚುನಾವಣೆಯಲ್ಲಿ ಬಿಜೆಪಿಯೇ ಘರ್ಜಿಸಿದೆ. ಹೀಗೆ ಬಿಜೆಪಿಯ ಭದ್ರಕೋಟೆಯಾಗಿದ್ದ ಗುಜರಾತ್‌ನ ಜಂಗಲೇಶ್ವರ ವಾರ್ಡ್‌ನಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದೆ.
ರಾಜ್‌ಕೋಟ್ ಮುನ್ಸಿಪಾಲ್ ಕಾರ್ಪೋರೇಶನ್ (RMC)ನ ವಾರ್ಡ್ ನಂ 16 ( ಜಂಗಲೇಶ್ವರ ವಾರ್ಡ್) ಬಿಜೆಪಿಯ ಭದ್ರಕೋಟೆ ಎಂದೇ ಗುರುತಿಸಿಕೊಂಡಿತ್ತು. ಇಲ್ಲಿನ ನಾಲ್ಕು ಸ್ಥಾನಗಳನ್ನುಪ್ರತಿ ಬಾರಿ ಬಿಜೆಪಿ ಗೆದ್ದು ಬೀಗುತ್ತಿತ್ತು. ಕೇಸರಿ ಬಾವುಟಗಳ ನಡುವೆ ಇದೀಗ ನಾಲ್ಕರಲ್ಲಿ ನಾಲ್ಕು ಸ್ಥಾನವನ್ನು ಕಾಂಗ್ರೆಸ್ ಗೆದ್ದು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಇದೀಗ ಜಂಗಲೇಶ್ವರ ವಾರ್ಡ್‌ನಲ್ಲಿ ಕಾಂಗ್ರೆಸ್ ಸಂಭ್ರಮ ಜೋರಾಗಿದೆ. ವಾರ್ಡ್ ನಂ.16ರಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳಾದ ಇಬ್ರಾಹಿಂ ಸೊರಾ, ಅರ್ಜುನ್ ಚೌವ್ಹಾಣ್, ದೀಪ್ತಿಬೆನ್ ಸೋಲಂಕಿ ಹಾಗೂ ರಸಿಲಾಬೆನ್ ಗರೈಯಾ ಗೆದ್ದು ಬೀಗಿದ್ದಾರೆ.
ವಾರ್ಡ್ 16ರಲ್ಲಿ ಬಿಜೆಪಿ ಸೋಲಿಗೆ ಮುಖ್ಯ ಕಾರಣ ಬುಲ್ಡೋಜರ್ ಅನ್ನೋ ಮಾತು ಕೇಳಿಬರುತ್ತಿದೆ. ವಾರ್ಡ್ 16ರಲ್ಲಿ ಅಕ್ರಮ ಮನೆಗಳ ಸಂಖ್ಯೆ ಹೆಚ್ಚಾಗಿತ್ತು. ಸರ್ಕಾರಿ ಜಾಗ ಅತಿಕ್ರಮಣ ಮಾಡಿ ಇಲ್ಲಿ ಮನೆ ಕಟ್ಟಿಕೊಂಡಿದ್ದರು. ಫೆಬ್ರವರಿ ತಿಂಗಳಲ್ಲಿ ಬಿಜೆಪಿ ಸರ್ಕಾರ, ರಾಜ್‌ಕೋಟ್ ಮುನ್ಸಿಪಲ್ ಸಹಯೋಗದಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ 1,400 ಮನೆಗಳನ್ನು ನೆಲಸಮಗೊಳಿಸಿ 87,000 ಚದರಅಡಿ ಸ್ಥಳವನ್ನು ಸರ್ಕಾರ ಮರುವಶಪಡಿಸಿಕೊಂಡಿತ್ತು. ಇದೇ ವೇಳೆ ಸಾವಿರಕ್ಕೂ ಹೆಚ್ಚು ಅತಿಕ್ರಮ ಮನೆಗಳಿಗೆ ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಇದು ತೀವ್ರ ಪರಿಣಾಮ ಬೀರಿದೆ. ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಇದೇ ವಿಚಾರ ಮುಂದಿಟ್ಟು ಮತ ಕೇಳಿತ್ತು. ತಾವು ಅಧಿಕಾರಕ್ಕೆ ಬಂದರೆ ನೆಲಸಮಗೊಂಡ ಮನೆಗಳನ್ನು ಮರು ನಿರ್ಮಾಣ ಮಾಡಿಕೊಡಿಸುವುದಾಗಿ ಹೇಳಿತ್ತು. ಇಷ್ಟೇ ಅಲ್ಲ ವಾರ್ಡ್ 16ರಲ್ಲಿ ವಾಸವಿದ್ದ ಯಾವ ಕುಟುಂಬಗಳನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡಿತ್ತು.
ಗುಜರಾತ್ ಸ್ಥಳೀಯ ಚುನಾವಣೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ. 15 ಮುನ್ಸಿಪಲ್ ಕಾರ್ಪೋರೇಶನ್ ಪೈಕಿ ಈಗಾಗಲೇ 8 ಸ್ಥಾನ ಗೆದ್ದುಕೊಂಡಿದೆ. ಇನ್ನು ಕೆಲ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಎಪ್ರಿಲ್ 16ರ ಭಾನುವಾರ ಮತದಾನ ನಡೆದಿತ್ತು. ಇಂದು ಸಂಜೆ ವೇಳೆ ಸ್ಪಷ್ಟ ಚಿತ್ರಣ ಸಿಗಲಿದೆ.
15 ಮುನ್ಸಿಪಲ್ ಕಾರ್ಪೋರೇಶನ್, 84 ಮುನ್ಸಿಪಾಲಿಟಿ, 34 ಜಿಲ್ಲಾ ಪಂಚಾಯತ್, 260 ತಾಲೂಕು ಪಂಚಾಯತ್‌ನ ಒಟ್ಟು 9200 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. 4.18 ಕೋಟಿ ಮತದಾರರು ಅರ್ಹರಾಗಿದ್ದರು. ಭಾನುವಾರ ನಡೆದ ಮುನ್ಸಿಪಲ್ ಕಾರ್ಪೋರೇಶನ್ ಮತದಾನಲ್ಲಿ ಶೇಕಡಾ 55.1 ರಷ್ಟು ಮತದಾನವಾಗಿತ್ತು.ಇನ್ನು ತಾಲೂಕು, ಜಿಲ್ಲಾ ಪಂಚಾಯಿತ್ ಮಟ್ಟದಲ್ಲಿ ಸರಾಸರಿ ಶೇಕಡಾ 65ರಷ್ಟು ಮತದಾನವಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ