Rajasthan Politics: ಶಾಲೆ ನೋಡಲು ಹೋದ CJP ಮುಖಂಡರ ಮೇಲೆ ಅಟ್ಯಾಕ್, 'ಬಿಜೆಪಿ ಗೂಂಡಾಗಳು' ಎಂದ ದೀಪ್ಕೆ | ವಿಡಿಯೋ

Published : Aug 21, 2026, 01:01 PM ISTUpdated : Aug 21, 2026, 01:06 PM IST
CJP workers including Ashutosh Ranka beaten up during school visit in Jaipur viral video

ಸಾರಾಂಶ

ಜೈಪುರದಲ್ಲಿ ಶೆಡ್ ಒಂದರಲ್ಲಿ ನಡೆಯುತ್ತಿದ್ದ ಶಾಲೆಯನ್ನ ಪರಿಶೀಲಿಸಲು ಹೋದ CJP ನಿಯೋಗದ ಮೇಲೆ ರಾಜಕೀಯ ವಿರೋಧಿಗಳು ದಾಳಿ ಮಾಡಿದ್ದಾರೆ. ಇದು 'ಬಿಜೆಪಿ ಗೂಂಡಾಗಳ' ಪೂರ್ವನಿಯೋಜಿತ ಕೃತ್ಯ ಎಂದು CJP, ಶಿಕ್ಷಣ ಸಚಿವ ಮದನ್ ದಿಲಾವರ್ ಮೇಲೆ ಆರೋಪಿಸಿದೆ.

ರಾಜಸ್ಥಾನದ ಶಿಕ್ಷಣ ವಲಯದಲ್ಲಿ ಶುಕ್ರವಾರ ದೊಡ್ಡ ಗಲಾಟೆಯೇ ನಡೆದಿದೆ. ಜೈಪುರ ಜಿಲ್ಲೆಯ ರಾಮಪುರ ಕನ್ವರ್‌ಪುರದಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (CJP) ನಿಯೋಗದ ಮೇಲೆ ರಾಜಕೀಯ ವಿರೋಧಿಗಳು ಹೊಂಚುಹಾಕಿ ದಾಳಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರಾಜ್ಯದ ಸರ್ಕಾರಿ ಶಾಲೆಗಳ ಬಗ್ಗೆ ಶಿಕ್ಷಣ ಸಚಿವ ಮದನ್ ದಿಲಾವರ್ ಹೊರಡಿಸಿರುವ ವಿವಾದಾತ್ಮಕ ಆದೇಶದ ಕಿಡಿ ಈಗ ಈ ಘಟನೆಯಿಂದ ಮತ್ತಷ್ಟು ಹೆಚ್ಚಾಗಿದೆ.

ಬಿಜೆಪಿ ಗೂಂಡಾಗಳ ಪೂರ್ವನಿಯೋಜಿತ ದಾಳಿ: CJP ಆರೋಪ

CJP ಪ್ರಕಾರ, ಶೆಡ್ ಒಂದರಲ್ಲಿ ನಡೆಯುತ್ತಿದ್ದ ಸ್ಥಳೀಯ ಸರ್ಕಾರಿ ಶಾಲೆಯನ್ನ ಪರಿಶೀಲಿಸಲು ಹೋದಾಗ, ಗುಂಪೊಂದು ಹಿಂಸಾತ್ಮಕವಾಗಿ ದಾಳಿ ಮಾಡಿದೆ. ಘಟನಾ ಸ್ಥಳದಿಂದಲೇ ANI ಜೊತೆ ಮಾತನಾಡಿದ CJP ಕಾರ್ಯಕರ್ತ ಅಶುತೋಷ್ ರಾಂಕಾ, ಆಡಳಿತ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇದು ಪೊಲೀಸರ ನಿಷ್ಕ್ರಿಯತೆಯೊಂದಿಗೆ 'ಬಿಜೆಪಿ ಗೂಂಡಾಗಳು' ನಡೆಸಿದ ಪೂರ್ವನಿಯೋಜಿತ ದಾಳಿ. 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕು ಮತ್ತು ಶಿಕ್ಷಣ ಸಚಿವಾಲಯದ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇವತ್ತು ಇಡೀ ದೇಶ ಬಿಜೆಪಿಯ ಗೂಂಡಾಗಿರಿಯನ್ನು ಲೈವ್ ಆಗಿ ನೋಡಿದೆ. ಅಲ್ಲಿ ಕಲ್ಲು ತೂರಾಟ ನಡೀತಾನೇ ಇತ್ತು, ಆದ್ರೆ ಪೊಲೀಸರು ಸುಮ್ಮನೆ ನಿಂತಿದ್ದರು. ಏನೂ ಮಾಡಲ್ಲ ಅಂತ ಪೊಲೀಸರೇ ಹೇಳಿದ್ರು. ಇದೆಲ್ಲಾ ಮದನ್ ದಿಲಾವರ್ ಕುಮ್ಮಕ್ಕಿನಿಂದ ನಡೆದಿದೆ. ನಮ್ಮ ಕಾರ್ಯಕರ್ತರ ಕೈ ಮುರಿದಿದೆ. ನಮ್ಮ ವಾಹನಗಳನ್ನು ಜಖಂಗೊಳಿಸಲಾಗಿದೆ. ಇಲ್ಲಿ ಕಲ್ಲು ತೂರಾಟ ನಡೆಯಿತು. ವಯಸ್ಸಾದವರು ನಮ್ಮ ತಂಡದ ಮಹಿಳೆಯರ ಮೇಲೆ ಕಲ್ಲೆಸೆದು ಅವರ ಫೋನ್‌ಗಳನ್ನು ಒಡೆದು ಹಾಕಿದರು. ಇದೆಲ್ಲಾ ಮೊದಲೇ ಪ್ಲಾನ್ ಆಗಿತ್ತು. ಈ ಎಲ್ಲಾ ಗೂಂಡಾಗಳನ್ನು 48 ಗಂಟೆಯೊಳಗೆ ಬಂಧಿಸಬೇಕು ಮತ್ತು ಆದೇಶವನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ಈ ಪ್ರತಿಭಟನೆ ಶಿಕ್ಷಣದಿಂದ ಮದನ್ ದಿಲಾವರ್ ಕಡೆಗೆ ತಿರುಗುತ್ತದೆ ಎಂದು ಎಚ್ಚರಿಸಿದರು.

ನಿಮಗೆ ನಾಚಿಕೆಯಾಗಬೇಕು. ಒಂದು ವರ್ಷದಿಂದ ಶಾಲೆಯು ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದೆ. ನಾವು ಅದನ್ನು ಸರಿಪಡಿಸಲು ಬಂದಿದ್ದೆವು. ಆದರೆ ಬಿಜೆಪಿ ಗೂಂಡಾಗಳು ಅಲ್ಲಿದ್ದರು... ಇದು ರಾಜಸ್ಥಾನದ ಪ್ರಜಾಪ್ರಭುತ್ವದಲ್ಲಿ ಒಂದು ಕರಾಳ ದಿನ' ಎಂದು ಅವರು ಹೇಳಿದ್ದಾರೆ.

X (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಅಭಿಜೀತ್ ದೀಪ್ಕೆ, ರಾಜಸ್ಥಾನ ಪೊಲೀಸರು ಈ ಘಟನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. 'ರಾಜಸ್ಥಾನದಲ್ಲಿ ಬಿಜೆಪಿ ಗೂಂಡಾಗಳು ಅಶು ಮೇಲೆ ದಾಳಿ ಮಾಡಿದ್ದಾರೆ. ಅಶು ಮತ್ತು CJPಯ ಇತರ ಕಾರ್ಯಕರ್ತರನ್ನು ಥಳಿಸಲಾಗಿದೆ ಮತ್ತು ಗಾಯಗೊಳಿಸಲಾಗಿದೆ. @PoliceRajasthan ಇದಕ್ಕೆಲ್ಲಾ ಅವಕಾಶ ನೀಡಿದೆ' ಎಂದು ಅವರು ಬರೆದಿದ್ದಾರೆ.

ಕಾರಿನ ಗಾಜು ಪುಡಿಯಾಗಿರುವ ಫೋಟೋ ಹಂಚಿಕೊಂಡ ದೀಪ್ಕೆ, ರಾಜಸ್ಥಾನದಲ್ಲಿ ಬಿಜೆಪಿ ಗೂಂಡಾಗಳು ಅಶು ಮೇಲೆ ದಾಳಿ ಮಾಡಿದ್ದಾರೆ. ಅಶು ಮತ್ತು CJPಯ ಇತರ ಕಾರ್ಯಕರ್ತರನ್ನು ಥಳಿಸಲಾಗಿದೆ ಮತ್ತು ಗಾಯಗೊಳಿಸಲಾಗಿದೆ. @PoliceRajasthan ಇದಕ್ಕೆಲ್ಲಾ ಅವಕಾಶ ನೀಡಿದೆ," ಎಂದು ಆರೋಪಿಸಿದ್ದಾರೆ.

CJP ನಿಯೋಗದ ಸದಸ್ಯರ ಪ್ರಕಾರ, ದನದ ಕೊಟ್ಟಿಗೆಯಂತಹ ಶೆಡ್‌ನಲ್ಲಿ ನಡೆಯುತ್ತಿದೆ ಎಂದು ವರದಿಯಾಗಿದ್ದ ಸರ್ಕಾರಿ ಶಾಲೆಯನ್ನು ಪರಿಶೀಲಿಸುವುದೇ ಅವರ ಭೇಟಿಯ ಉದ್ದೇಶವಾಗಿತ್ತು. ನಿಯೋಗದಲ್ಲಿದ್ದ ಸಂಜು ಎಂಬ ಸದಸ್ಯೆ ತಮ್ಮ ಅನುಭವವನ್ನು ಹೀಗೆ ವಿವರಿಸಿದ್ದಾರೆ, 'ನಾವು ರಾಮಪುರದ ಶಾಲೆ ನೋಡಲು ಬಂದಿದ್ದೆವು. ಒಂದು ವರ್ಷದ ಹಿಂದೆ ನಮ್ಮ ಸಹೋದ್ಯೋಗಿಗಳು ಬಂದಾಗಲೂ, ಈ ಶಾಲೆ ದನದ ಕೊಟ್ಟಿಗೆಯಲ್ಲಿ ನಡೀತಿತ್ತು. ಅದನ್ನೇ ನೋಡಲು ಬಂದಾಗ ಬಿಜೆಪಿ-ಆರ್‌ಎಸ್‌ಎಸ್ ಗೂಂಡಾಗಳು ಅಲ್ಲೇ ಇದ್ದರು. ಅವರು ಕೋಲುಗಳಿಂದ ಹೊಡೆದು, ತಳ್ಳಿ, ಕಲ್ಲು ತೂರಿದರು. ನನ್ನನ್ನು ಕೆಳಗೆ ತಳ್ಳಿ ಕೋಲಿನಿಂದ ಹೊಡೆದರು, ಕೈಗೆ ಗಾಯವಾಗಿದೆ. ತುಂಬಾ ನೋವಾಗ್ತಿದೆ...'

ಹಿಂಸಾಚಾರಕ್ಕೆ ಕಾಂಗ್ರೆಸ್ ಖಂಡನೆ

ಈ ಘಟನೆಗೆ ರಾಜಕೀಯ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಶಾಲೆಯ ಕಟ್ಟಡದ ಸ್ಥಿತಿ ಮತ್ತು ಭವಿಷ್ಯದ ಬಗ್ಗೆ ವಿರೋಧ ಪಕ್ಷದ ನಾಯಕರು ಮತ್ತು ಸ್ಥಳೀಯ ನಿವಾಸಿಗಳ ನಡುವೆ ಜಟಾಪಟಿ ಶುರುವಾಗಿದೆ. ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಯನ್ನು ಮುಚ್ಚಿಹಾಕಲು ಆಡಳಿತಾರೂಢ ಪಕ್ಷ ಹಿಂಸಾಚಾರದ ದಾರಿ ಹಿಡಿದಿದೆ ಎಂದು ರಾಜಸ್ಥಾನದ ಹಿರಿಯ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.

ರಾಜಸ್ಥಾನದ ವಿರೋಧ ಪಕ್ಷದ ನಾಯಕ ಟೀಕಾ ರಾಮ್ ಜುಲ್ಲಿ ಹಿಂಸಾಚಾರವನ್ನು ಖಂಡಿಸಿದ್ದಾರೆ. 'ಇದು ತಪ್ಪು. ನಾನು ಇದನ್ನು ಖಂಡಿಸುತ್ತೇನೆ. ಹಿಂಸಾಚಾರಕ್ಕೆ ಅವಕಾಶ ಇರಬಾರದು. ಶಾಲೆಗಳ ಸ್ಥಿತಿ ಬೆಳಕಿಗೆ ಬರಬೇಕು. ಭಾರತದಲ್ಲಿ ಇಂತಹ ಹಿಂಸೆಗೆ ಜಾಗವಿಲ್ಲ. ಜನರು ತಮ್ಮ ಅಭಿಪ್ರಾಯಗಳನ್ನು ಅಹಿಂಸಾತ್ಮಕವಾಗಿ ಮಂಡಿಸಬೇಕು. ಶಾಲೆಗಳು ಕೆಟ್ಟ ಸ್ಥಿತಿಯಲ್ಲಿವೆ; ಅವರು ಅದನ್ನು ಮರೆಮಾಚಲು ಮತ್ತು ತಮ್ಮ ಪಾಪಗಳನ್ನು ಮುಚ್ಚಿಹಾಕಲು ಬಯಸುತ್ತಾರೆ. ಆದರೆ ಅವರಿಗೆ ಅದು ಸಾಧ್ಯವಾಗುವುದಿಲ್ಲ' ಎಂದು ಜುಲ್ಲಿ ಹೇಳಿದ್ದಾರೆ.

ಇದೇ ವೇಳೆ, ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸ್ರಾ, ದಾಳಿಕೋರರು ಸಾರ್ವಜನಿಕ ಹಿತಾಸಕ್ತಿಯನ್ನು ಹತ್ತಿಕ್ಕಲು ಮೇಲಿನಿಂದ ಬಂದ ಆದೇಶದಂತೆ ವರ್ತಿಸಿದ ಬಿಜೆಪಿ ಕಾರ್ಯಕರ್ತರು ಎಂದು ಆರೋಪಿಸಿದ್ದಾರೆ. 'ಅವರು ಗ್ರಾಮಸ್ಥರಲ್ಲ, ಬಿಜೆಪಿ ಕಾರ್ಯಕರ್ತರು. ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲವನ್ನೂ ವಿರೋಧಿಸುತ್ತಾರೆ. ಅವರು ಮೇಲಿನಿಂದ ಬರುವ ಆದೇಶಗಳನ್ನು ಮಾತ್ರ ಪಾಲಿಸುತ್ತಾರೆ. ಯಾರಾದರೂ ಶಾಲೆಗೆ ಭೇಟಿ ನೀಡುವುದನ್ನು ತಡೆದರೆ ಅಥವಾ ದಾಳಿ ಮಾಡಿದರೆ, ನಾವು ಅದನ್ನು ಖಂಡಿಸುತ್ತೇವೆ. ಈ ಸರ್ಕಾರದಿಂದ ಬೇಸತ್ತ ಪ್ರತಿಯೊಬ್ಬರ ಜೊತೆ ಕಾಂಗ್ರೆಸ್ ನಿಲ್ಲುತ್ತದೆ' ಎಂದು ಅವರು ಹೇಳಿದ್ದಾರೆ.

ದಾಳಿ ನಡೆದಿಲ್ಲ, ಅವರೇ ಗಾಡಿ ಹೊಡೆದುಕೊಂಡ್ರು: ಸ್ಥಳೀಯರ ವಾದ

ಆದರೆ, ರಾಮಪುರ ಕನ್ವರ್‌ಪುರದ ಸ್ಥಳೀಯರು ಹಿಂಸಾಚಾರದ ಆರೋಪವನ್ನು ತಳ್ಳಿಹಾಕಿದ್ದಾರೆ. ಅವರು ಘಟನೆಯ ಬಗ್ಗೆ ಸಂಪೂರ್ಣ ಭಿನ್ನವಾದ ಕಥೆಯನ್ನು ಹೇಳಿದ್ದಾರೆ. ಕೇವಲ ಬಿಸಿಬಿಸಿ ಚರ್ಚೆ ನಡೆಯಿತಷ್ಟೇ ಎಂದಿರುವ ಗ್ರಾಮಸ್ಥರು, ಶಾಲೆಯ ಕಟ್ಟಡವನ್ನು ಬಲವಂತವಾಗಿ ಕೆಡವಲು ಯತ್ನಿಸಿದಾಗ ಭೇಟಿ ನೀಡಿದವರೇ ತಮ್ಮ ವಾಹನಕ್ಕೆ ಹಾನಿ ಮಾಡಿಕೊಂಡರು ಎಂದು ಆರೋಪಿಸಿದ್ದಾರೆ.

ಜುಗಲ್ ಕಿಶೋರ್ ಶರ್ಮಾ ಎಂಬ ಗ್ರಾಮಸ್ಥರು, CJP ಮೇಲೆ ದಾಳಿ ಮಾಡಿಲ್ಲ ಎಂದು ಹೇಳಿದ್ದಾರೆ. 'ನಾವು ಏನೂ ಮಾಡಿಲ್ಲ. ಅವರೇ 200-250 ಜನರನ್ನು ಕರೆತಂದಿದ್ದರು. ನಾವು ಅವರ ಮೇಲೆ ಕೈ ಮಾಡಿಲ್ಲ. ಶಾಂತವಾಗಿ ಮಾತನಾಡಿದೆವು, ಆದರೆ ಅವರೇ ತಮ್ಮ ಕಾರನ್ನು ಒಡೆದುಕೊಂಡರು. ಶಾಲೆಯನ್ನು ದುರಸ್ತಿ ಮಾಡಲು ಬಂದಿದ್ದೇವೆ ಎನ್ನುತ್ತಾರೆ. ಆದರೆ ಅದನ್ನು ನಮ್ಮ ಶಾಸಕರು ಮಾಡುತ್ತಾರೆ; ಅದಕ್ಕಾಗಿ ₹12 ಲಕ್ಷ ಮೀಸಲಿಡಲಾಗಿದೆ. ನಾವು ಬಿಜೆಪಿ ಅಥವಾ ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷವನ್ನು ಇಲ್ಲಿಗೆ ಬರಲು ಬಿಡುವುದಿಲ್ಲವಾದ್ದರಿಂದ ನಾವು ಅದನ್ನು ವಿರೋಧಿಸಿದೆವು. ನನ್ನ ಹೆಂಡತಿ ಎಷ್ಟು ಹೆದರಿದ್ದಾಳೆಂದರೆ ಮನೆಯಿಂದ ಹೊರಗೆ ಕಾಲಿಟ್ಟಿಲ್ಲ' ಎಂದು ಅವರು ಹೇಳಿದ್ದಾರೆ.

ಅನು ಶರ್ಮಾ ಎಂಬ ಇನ್ನೊಬ್ಬ ಗ್ರಾಮಸ್ಥರು, 'ಸುಮಾರು 20-25 ವಿದ್ಯಾರ್ಥಿಗಳು ಇಲ್ಲಿ ಓದಲು ಬರುತ್ತಾರೆ. ಈ ಶಾಲೆಯನ್ನು ಕೆಡವಲು ಯತ್ನಿಸುತ್ತಿದ್ದಾರೆ ಎಂಬ ಕಾರಣಕ್ಕೆ ನಾವು ಅವರನ್ನು ವಿರೋಧಿಸಿದೆವು. ಅವರು ಹೋದರೆ ಎಲ್ಲಿಗೆ ಹೋಗಬೇಕು?.. ನಾವು ಶಾಲೆಯನ್ನು ಕೆಡವಲು ಬಿಡುವುದಿಲ್ಲ. (ದುರಸ್ತಿಗಾಗಿ) ಹಣ ಈಗಾಗಲೇ ಮಂಜೂರಾಗಿದೆ... ಕೇವಲ ಮಾತಿನ ಚಕಮಕಿ ನಡೆಯಿತಷ್ಟೇ' ಎಂದು ಅವರು ಸೇರಿಸಿದ್ದಾರೆ.

ಶೈಕ್ಷಣಿಕ ಸೌಲಭ್ಯವನ್ನು ದುರಸ್ತಿ ಮಾಡಲು ಸ್ಥಳೀಯ ಶಾಸಕರಿಂದ ಈಗಾಗಲೇ ₹12 ಲಕ್ಷ ಸರ್ಕಾರಿ ಅನುದಾನ ಮಂಜೂರಾಗಿದೆ ಎಂದು ಸ್ಥಳೀಯರು ಒತ್ತಿ ಹೇಳಿದ್ದಾರೆ.

ಶಾಲೆ ಪ್ರವೇಶ ನಿರ್ಬಂಧದ ಆದೇಶವೇ ವಿವಾದದ ಮೂಲ

ಶಿಕ್ಷಣ ಸಚಿವ ಮದನ್ ದಿಲಾವರ್ ನೇತೃತ್ವದ ಶಿಕ್ಷಣ ಸಚಿವಾಲಯವು ಸರ್ಕಾರಿ ಶಾಲೆಗಳ ಆವರಣಕ್ಕೆ ಅನಧಿಕೃತ ಪ್ರವೇಶ, ಮಾಧ್ಯಮಗಳ ಭೇಟಿ ಮತ್ತು ಚಿತ್ರೀಕರಣವನ್ನು ನಿರ್ಬಂಧಿಸಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ನಂತರ ರಾಜಸ್ಥಾನದಲ್ಲಿ ಈ ರಾಜಕೀಯ ಸಂಘರ್ಷ ಶುರುವಾಗಿದೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿನ ತೀವ್ರ ಮೂಲಸೌಕರ್ಯ ಕೊರತೆಯನ್ನು ಮರೆಮಾಚಲು ಈ ಆದೇಶಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಆದರೆ, ಶಿಸ್ತು ಕಾಪಾಡಲು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ನಿರ್ಬಂಧಗಳು ಅಗತ್ಯ ಎಂದು ರಾಜ್ಯದ ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ವಾರದ ಆರಂಭದಲ್ಲಿ, ಸೋಮವಾರ, ಅಶುತೋಷ್ ರಾಂಕಾ ಅವರು ಶಿಕ್ಷಣ ಸಚಿವ ಮದನ್ ದಿಲಾವರ್ ಅವರಿಗೆ ಸವಾಲು ಹಾಕಿದ್ದರು. ಸಂಭಾವ್ಯ ಪೊಲೀಸ್ ಕ್ರಮವನ್ನು ಲೆಕ್ಕಿಸದೆ, ರಾಜ್ಯದಾದ್ಯಂತ ಶಿಥಿಲಗೊಂಡ ಶಾಲಾ ಮೂಲಸೌಕರ್ಯಗಳ ತಪಾಸಣೆ ನಿಲ್ಲುವುದಿಲ್ಲ ಎಂದು ಘೋಷಿಸಿದ್ದರು.

X ನಲ್ಲಿ ಪೋಸ್ಟ್ ಮಾಡಿದ್ದ ರಾಂಕಾ, 'ಮದನ್ ದಿಲಾವರ್ ಜೀ, ರಾಜಸ್ಥಾನದ ಎಲ್ಲಾ ಹಾಳಾದ ಶಾಲೆಗಳನ್ನು ಸರಿಪಡಿಸಿ, ಇಲ್ಲವೇ ನಮ್ಮ ಮೇಲೆ ಮೊದಲೇ ಎಫ್‌ಐಆರ್ ದಾಖಲಿಸಿ. ಬೇಕಿದ್ದರೆ ನಮ್ಮನ್ನು ಮೊದಲೇ ಬಂಧಿಸಿ. ನಿಮ್ಮದೇ ಸರ್ಕಾರ, ನಿಮ್ಮದೇ ಪೊಲೀಸ್. ಆದರೆ ರಾಜಸ್ಥಾನದ ಎಲ್ಲಾ ಶಾಲೆಗಳು ಸರಿಹೋಗುವವರೆಗೂ ನಾವು ತಪಾಸಣೆ ನಿಲ್ಲಿಸುವುದಿಲ್ಲ ಎಂದು ಸವಾಲೆಸೆದಿದ್ದರು. (ANI)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ಆರ್ಥಿಕತೆಯ ಹೊಸ ಶಕ್ತಿಗಳು! ಮಹಾನಗರಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿವೆ ಸಣ್ಣ ನಗರಗಳು: ಅಚ್ಚರಿಯ ವರದಿ!
ಭಾರತೀಯ ಯುವತಿ ಮದುವೆಯಾದ ಸ್ಕಾಟ್ಲೆಂಡ್‌ ಸಂಸದ! ಇದು ಪ್ರತಿಭಟನೆಯಲ್ಲಿ ಹುಟ್ಟಿದ ರೋಚಕ ಪ್ರೀತಿ!