ಎಡಪಕ್ಷಗಳನ್ನು ಬಳಸಿ ಭಾರತದ ರಾಜಕೀಯದಲ್ಲಿ ಚೀನಾ ಕೈವಾಡ!

Published : Aug 04, 2021, 07:12 AM ISTUpdated : Aug 04, 2021, 07:15 AM IST
ಎಡಪಕ್ಷಗಳನ್ನು ಬಳಸಿ ಭಾರತದ ರಾಜಕೀಯದಲ್ಲಿ ಚೀನಾ ಕೈವಾಡ!

ಸಾರಾಂಶ

* ಭಾರತ-ಅಮೆರಿಕ ಅಣುಬಂಧ ವಿರೋಧಿಸಲು 2008ರಲ್ಲಿ ಸೂಚನೆ * ಎಡಪಕ್ಷಗಳನ್ನು ಬಳಸಿ ಭಾರತದ ರಾಜಕೀಯದಲ್ಲಿ ಚೀನಾ ಕೈವಾಡ! * ನಿವೃತ್ತ ವಿದೇಶಾಂಗ ಕಾರ್ಯದರ್ಶಿ ಗೋಖಲೆ ‘ಸ್ಫೋಟಕ ಪುಸ್ತಕ’

ನವದೆಹಲಿ(ಆ.04): 2007-08ರಲ್ಲಿ ಭಾರತ-ಅಮೆರಿಕ ಅಣು ಒಪ್ಪಂದವನ್ನು ಎಡಪಕ್ಷಗಳು ತೀವ್ರವಾಗಿ ವಿರೋಧಿಸುವಲ್ಲಿ ಕಮ್ಯುನಿಸ್ಟ್‌ ಪಕ್ಷದ ಸರ್ಕಾರ ಇರುವ ಚೀನಾ ಪ್ರಮುಖ ಪಾತ್ರ ವಹಿಸಿತ್ತು. ಇದಕ್ಕಾಗಿ ಭಾರತದ ಕಮ್ಯುನಿಸ್ಟ್‌ ಪಕ್ಷಗಳನ್ನು ಅದು ಬಳಸಿಕೊಂಡಿತ್ತು ಎಂಬ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ. ಇದು ಭಾರತದ ರಾಜಕೀಯದಲ್ಲಿ ಚೀನಾ ಕೈ ಆಡಿಸುತ್ತಿರುವ ಮೊದಲ ನಿದರ್ಶನ ಎಂದು ಹೇಳಲಾಗಿದೆ.

ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ‘ಲಾಂಗ್‌ ಗೇಮ್‌: ಹೌ ದ ಚೈನೀಸ್‌ ನೆಗೋಷಿಯೇಟ್‌ ವಿತ್‌ ಇಂಡಿಯಾ’ ಎಂಬ ಪುಸ್ತಕ ಬರೆದಿದ್ದು, ಅದರಲ್ಲಿ ಈ ವಿಷಯ ಹೊರಗೆಡವಿದ್ದಾರೆ. 2007ರಿಂದ 2009ರ ಅವಧಿಯಲ್ಲಿ ಗೋಖಲೆ ಅವರು ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಚೀನಾ ವ್ಯವಹಾರ ನೋಡಿಕೊಳ್ಳುತ್ತಿದ್ದರು.

ಎಡಪಕ್ಷಗಳೊಂದಿಗೆ ಹೊಂದಿದ್ದ ನಿಕಟ ಸಂಪರ್ಕವನ್ನು ಚೀನಾ ಚೆನ್ನಾಗಿ ಬಳಸಿಕೊಂಡಿದೆ. ಸಿಪಿಐ ಹಾಗೂ ಸಿಪಿಎಂ ನಾಯಕರು ಚೀನಾಕ್ಕೆ ಹೋಗಿ ಸಭೆ ನಡೆಸುತ್ತಿದ್ದರು ಅಥವಾ ಅಲ್ಲಿಗೆ ಆರೋಗ್ಯ ತಪಾಸಣೆಗೆ ತೆರಳುತ್ತಿದ್ದರು. ಭಾರತ-ಅಮೆರಿಕ ನಡುವೆ 2007ರಲ್ಲಿ ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಏರ್ಪಟ್ಟಅಣು ಒಪ್ಪಂದದಿಂದ ಚೀನಾಕ್ಕೆ ಆತಂಕವಾಗಿತ್ತು. ಎಲ್ಲಿ ಭಾರತವು ಅಮೆರಿಕದತ್ತ ವಾಲುವುದೋ ಎಂಬ ಆತಂಕ ಅದಕ್ಕೆ ಎದುರಾಗಿತ್ತು. ಇದೇ ಸಂದರ್ಭ ಬಳಸಿಕೊಂಡ ಅದು ತನ್ನ ಜತೆ ಸಾಮೀಪ್ಯ ಹೊಂದಿದ್ದ ಎಡರಂಗದ ನಾಯಕರನ್ನು ಬಳಸಿಕೊಂಡು ಒಪ್ಪಂದವನ್ನು ತೀವ್ರವಾಗಿ ವಿರೋಧಿಸಲು ಕೋರಿತ್ತು. ಆ ಪ್ರಕಾರ ಎಡರಂಗವು ತೀವ್ರವಾಗಿ ಒಪ್ಪಂದ ವಿರೋಧಿಸಿತು ಎಂದು ಪುಸ್ತಕದಲ್ಲಿ ಗೋಖಲೆ ವಿವರಿಸಿದ್ದಾರೆ.

ಆರೋಪ ಅಲ್ಲಗಳೆದ ಕಾರಟ್‌:

ಅಂದು ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದ ಪ್ರಕಾಶ್‌ ಕಾರಟ್‌ ಅವರು ಈ ಆರೋಪ ನಿರಾಕರಿಸಿದ್ದಾರೆ. ‘ಒಪ್ಪಂದದಿಂದ ಅಣ್ವಸ್ತ್ರ ಸ್ವಾವಲಂಬನೆಯನ್ನು ಭಾರತ ಸಾಧಿಸಲಿದೆ ಎಂದು ಅಂದು ಹೇಳಲಾಗಿತ್ತು. ಆದರೆ ಅಮೆರಿಕದ ಮೇಲೆ ನಾವು ಅವಲಂಬಿತರಾಗಬೇಕಾದ ಸ್ಥಿತಿ ಬರಲಿದೆ ಎಂಬುದು ನಮ್ಮ ವಾದವಾಗಿತ್ತು. ಅದಕ್ಕೇ ನಾವು ಒಪ್ಪಂದ ವಿರೋಧಿಸಿದೆವು. ಅಂದು ನಾವು ಹೇಳಿದ ಹಾಗೆಯೇ ಇಂದು ಭಾರತ ಅಣ್ವಸ್ತ್ರ ಸ್ವಾವಲಂಬಿ ಆಗಿಲ್ಲ’ ಎಂದಿದ್ದಾರೆ.

ಮೌಲಾನಾಗೆ ಚೀನಾ ರಕ್ಷಣೆ:

ಇದೇ ವೇಳೆ, ಪಾಕಿಸ್ತಾನದಲ್ಲಿರುವ ಜೈಷ್‌ ಎ ಮೊಹಮ್ಮದ್‌ ಭಯೋತ್ಪಾದಕ ಸಂಘಟನೆಯ ಉಗ್ರ ಮೌಲಾನಾ ಮಸೂದ್‌ ಅಜರ್‌ಗೆ ಜಾಗತಿಕ ಉಗ್ರ ಎಂಬ ಹಣೆಪಟ್ಟಿತಪ್ಪಿಸಲು ಚೀನಾ ನಾನಾ ತಂತ್ರ ಹೆಣೆದಿತ್ತು. ಇದಕ್ಕಾಗಿ ಅದು ರಷ್ಯಾವನ್ನು ಬಳಸಿಕೊಂಡಿತ್ತು ಎಂದು ಗೋಖಲೆ ಅವರ ಪುಸ್ತಕ ಹೇಳಿದೆ.

ಪುಸ್ತಕದಲ್ಲಿ ಏನಿದೆ?

ಮನಮೋಹನ ಸಿಂಗ್‌ ಪ್ರಧಾನಿಯಾಗಿದ್ದಾಗ ಏರ್ಪಟ್ಟಅಣು ಒಪ್ಪಂದದಿಂದ ಭಾರತವು ಅಮೆರಿಕದತ್ತ ವಾಲಬಹುದು ಎಂದು ಚೀನಾಕ್ಕೆ ಆತಂಕವಾಗಿತ್ತು. ಹೀಗಾಗಿ ಅದು ಭಾರತದ ಎಡರಂಗದ ನಾಯಕರನ್ನು ಬಳಸಿಕೊಂಡು ಒಪ್ಪಂದ ವಿರೋಧಿಸಲು ಕೋರಿತ್ತು. ಸಿಪಿಐ ಹಾಗೂ ಸಿಪಿಎಂ ನಾಯಕರು ಆರೋಗ್ಯ ತಪಾಸಣೆಗಾಗಿ ಚೀನಾಕ್ಕೆ ಹೋಗಿ ಸಭೆ ನಡೆಸುತ್ತಿದ್ದರು. ಇದು ಭಾರತದ ರಾಜಕೀಯದಲ್ಲಿ ಚೀನಾ ಕೈಯಾಡಿಸಿದ್ದರ ಮೊದಲ ನಿದರ್ಶನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?