ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳಿಗೆ 10% ಮೀಸಲು ಏಕೆ, ಹೇಗೆ ಜಾರಿಯಾಗಬೇಕು?

By Kannadaprabha News  |  First Published Aug 3, 2021, 5:53 PM IST

ಸಂವಿಧಾನದ 124ನೇ ತಿದ್ದುಪಡಿಯು ಭಾರತದಲ್ಲಿ ಬಹುಕಾಲದಿಂದ ಇದ್ದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟುಮೀಸಲಾತಿಯ ಬೇಡಿಕೆಗೆ ಸ್ಪಂದಿಸಿರುವುದು ಸ್ವಾಗತಾರ್ಹ.


ಸಂವಿಧಾನದ 124ನೇ ತಿದ್ದುಪಡಿಯು ಭಾರತದಲ್ಲಿ ಬಹುಕಾಲದಿಂದ ಇದ್ದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯ ಬೇಡಿಕೆಗೆ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ ಇದು ಟೀಕೆಗಳಿಂದ ಹೊರತಾದುದಲ್ಲ. ಮೀಸಲಾತಿಯಂದಾಕ್ಷಣ Taboo ಎಂಬ ರೀತಿಯಲ್ಲಿ, ಅದೊಂದು ಸರ್ಕಾರದಿಂದ ಕೊಡುವ ಫ್ರೀಬಿ ಎಂಬಂತೆ ನೋಡುವ ದೃಷ್ಟಿಕೋನ ಇಂದಿಗೂ ಬದಲಾಗಿಲ್ಲ.

ಚಾರಿತ್ರಿಕವಾಗಿ ಕೆಲವು ಕೆಳಸ್ತರ (ಸಬ್‌-ಆಲ್ಟರ್ನ್‌) ಸಮಾಜಗಳಿಗೆ ಆದ ಅನ್ಯಾಯವನ್ನು ಸರಿಪಡಿಸಲು ಮೀಸಲಾತಿ ಒಂದು ಧನಾತ್ಮಕ ಹೆಜ್ಜೆ. ಇಂತಹ ಧನಾತ್ಮಕ ಹೆಜ್ಜೆಯನ್ನು ನ್ಯಾಯಯುತವಾಗಿ ಇತರೆ ಸಮಾಜೋ-ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೂ ಪಸರಿಸಬೇಕೆಂಬ ದೃಷ್ಟಿಕೋನವೇ ಈ ಶೇ.10ರ ಮೀಸಲಾತಿಯಾಗಿದೆ. ಇದು ಜಾತಿ ಆಧಾರಿತವಾಗಿರದೆ ಸಮಾಜದ ಎಲ್ಲ ಸ್ತರದ ಜನರು, ಅದರಲ್ಲೂ ಮುಖ್ಯವಾಗಿ ಬಡತನದಿಂದ ಅವಕಾಶ ವಂಚಿತರಾಗುವವರಿಗೆ ನೀಡುವ ಮೀಸಲಾತಿ.

Latest Videos

undefined

ಬಿಜೆಪಿ ಸರ್ಕಾರದ ಈ ನೀತಿಯು ಹಿಂದೂ ಸಮಾಜದ ಎಲ್ಲ ಸ್ತರಗಳಿಗೂ ಸಮಾನ ಅವಕಾಶಗಳ ಹಂಚಿಕೆಗೆ ದಾರಿ ಮಾಡಿಕೊಡುತ್ತದೆ ಎಂಬುದು ಇದರ ಮತ್ತೊಂದು ದೃಷ್ಟಿಕೋನ. ಪ್ರಮುಖವಾಗಿ ಇಲ್ಲಿ ಮೇಲ್‌ಸ್ತರದ ಬ್ರಾಹ್ಮಣರೂ ಸೇರಿದಂತೆ ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ಈ ಮೀಸಲಾತಿಯಿಂದ ಅನುಕೂಲವಾಗುವುದೆಂಬ ಚಿಂತನೆಯೂ ಈ ಬಗ್ಗೆ ಜಾತಿ ಆಧಾರಿತ ಟೀಕೆಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ.

ಸರ್ಕಾರಿ ಹುದ್ದೆಗಳಿಗೆ ಮಾತ್ರ ಅನ್ವಯ

ಮೂಲತಃ ಈ ತಿದ್ದುಪಡಿಯು 15 ಹಾಗೂ 16ನೇ ವಿಧಿ​ಗಳನ್ನು (15(6)-16(6)ನ್ನು ಸೇರಿಸಿ) ಸಡಿಲಗೊಳಿಸಿ ಸಾಮಾನ್ಯ ಹಾಗೂ ಮೀಸಲಾತಿ ಇಲ್ಲದ ಜನರಿಗೆ ಮೀಸಲಾತಿಯ ಲಾಭ ಒದಗಿಸುವ ಚಿಂತನೆಯಾಗಿದೆ. ಇದು ನೇಮಕಾತಿ ಅಥವಾ ಸರ್ಕಾರಿ/ ಸರ್ಕಾರೇತರ ಹುದ್ದೆಗಳಿಗೆ ಸಂಬಂ​ಧಿಸಿದ್ದು, ಶೇ.10ನ್ನು ಮೀರದಂತಿರಬೇಕೆಂದೂ ಇದರಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಮೀಸಲಾತಿ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ. ಆ ಕಾರಣದಿಂದ ಈ ಮೀಸಲಾತಿಯ ಲಾಭ ಸರ್ಕಾರ/ ಖಾಸಗಿ ಮತ್ತು ಸರ್ಕಾರದಿಂದ ರಚಿತವಾಗುವ ಹುದ್ದೆಗಳಿಗೆ ಮಾತ್ರ ಅನ್ವಯವಾಗುತ್ತದೆ.

ರಾಜ್ಯದ ಅಡಿಯಲ್ಲಿ ತುಂಬುವ ಖಾಲಿ ಹುದ್ದೆಗಳಿಗೆ ಮಾತ್ರ ಇದು (ಅನುದಾನಿತ/ಅನುದಾನರಹಿತ/ಖಾಸಗಿ) ಸೇರಿದಂತಿದ್ದು, ಇದಕ್ಕೆ ಅನ್ವಯವಾಗುವವರು ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಸಂಪಾದನೆ ಉಳ್ಳವರಾಗಿರಬೇಕು, 5 ಎಕರೆಗಿಂತ ಕಡಿಮೆ ಭೂಮಿ ಹೊಂದಿದಂತವರಾಗಿರಬೇಕು, 100 ಚದರಡಿಗಿಂತ ಕಡಿಮೆ ಅಳತೆಯ ಮನೆ ಉಳ್ಳವರಾಗಿರಬೇಕು, 100 ಅಥವಾ 200 ಯಾರ್ಡ್ಸ್ಗಳಲ್ಲಿ ಹೊಂದಿರಬಾರದೆಂಬ ಹಲವಾರು ಮಿತಿಗಳನ್ನು ಹಾಕಿದ್ದಾರೆ. ಈ ರೀತಿಯ ಮಿತಿಗಳು ಯಾವುದೇ ಮೀಸಲಾತಿ ಹೊಂದದ ಸಾಮಾನ್ಯರಿಗೆ ಹಾಗೂ ಮೀಸಲಾತಿ ಇಲ್ಲದ ಜಾತಿಗಳಿಗೆ ಅನ್ವಯವಾಗುತ್ತದೆ.

ಆದಾಯ ತೆರಿಗೆಯ ಒಂದು ಅಂಕಿಅಂಶದ ಪ್ರಕಾರ ಸುಮಾರು ಶೇ.17ರಷ್ಟುಜನರು 5ರಿಂದ 10 ಲಕ್ಷ ರು.ಗಳ ಆದಾಯ ಹೊಂದಿದವರಾಗಿದ್ದು, ಇದು ಈ ಜನರಿಗೆ ಉಪಯುಕ್ತವೆಂದಿದ್ದಾರೆ. ಈ ಮೂಲಕ ಮೀಸಲಾತಿ ಕೇವಲ ಒಂದೆರಡು ಜಾತಿಗೆ ಅಂಟಿದ ಜಾಡು ಎಂಬ ಮಾತು ತಿಳಿಯಾಗುತ್ತದೆ. ಕೆಲವು ಟೀಕಾಕಾರರು 8 ಲಕ್ಷ ರು. ಮಿತಿ ತೀರಾ ಹೆಚ್ಚಾಯಿತು, ಅದನ್ನು 5 ಲಕ್ಷಕ್ಕೆ ಇಳಿಸಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.

ಶೇ.95 ಜನರಿಗೆ ಅನುಕೂಲ

ಎನ್‌ಎಸ್‌ಎಸ್‌ಒ- ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆಯ ದತ್ತಾಂಶಗಳನ್ನು ಅವಲೋಕಿಸಿದರೆ ಈ ಮೀಸಲಾತಿ ಭಾರತದ ವಿವಿಧ ಜಾತಿ, ಪಂಗಡಗಳನ್ನೂ ಸೇರಿದಂತೆ ಶೇ.95ರಷ್ಟುಜನರಿಗೆ ಅನುಕೂಲವಾಗುವುದು ಕಾಣಿಸುತ್ತದೆ. ಈ ರೀತಿಯ ವಿಭಿನ್ನ ಅಭಿಪ್ರಾಯಗಳು ಈ ಮೀಸಲಾತಿ ಕೂಡ ಅವಕಾಶ ವಂಚಿತರು ಮತ್ತು ಆರ್ಥಿಕವಾಗಿ ಹಿಂದುಳಿದವರ ನಡುವೆ ವ್ಯತ್ಯಾಸಗಳನ್ನು ಸೃಷ್ಟಿಸುತ್ತದೆ ಎಂಬ ಭಾವನೆ ಮೂಡಿಸಬಹುದು.

ಇಂದಿರಾ ಸಹಾನಿಯವರ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ ಹೇಳಿರುವುದನ್ನು ಗಮನಿಸಿದರೆ, ಹಿಂದುಳಿದ ವರ್ಗಗಳನ್ನು ಗುರುತಿಸಲು ಕೇವಲ ಆರ್ಥಿಕ ಅಳತೆಗೋಲೊಂದೇ ಸಾಲದು ಎಂಬ ಈ ಕಾರಣಕ್ಕಾಗಿ ಈ ಮೀಸಲಾತಿ ಬಹುಶಃ ದೇಶದ ಉನ್ನತ ನ್ಯಾಯಾಲಯದಲ್ಲಿ ಮತ್ತೆ ಪರೀಕ್ಷೆ ಎದುರಿಸಬೇಕಾಗಬಹುದು. ಈ ನಿಟ್ಟಿನಲ್ಲಿ ನಿಜವಾಗಿಯೂ ಬಡತನವನ್ನು ಅನುಭವಿಸುತ್ತಿರುವ ಮತ್ತು ಅವಕಾಶಗಳಿಂದ ವಂಚಿತರಾಗಿರುವ ಯಾರಿಗಾದರೂ ಸಹಾಯವಾಗಬೇಕಾಗಿದ್ದ ಈ ಮೀಸಲಾತಿ ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ಅಗ್ನಿ ಪರೀಕ್ಷೆ ಎದುರಿಸಬೇಕಾಗುತ್ತದೆ.

ಈ ಮೇಲೆ ಹೇಳಿದ ಕಾರಣಗಳಿಗಾಗಿ ಹಾಗೂ ಈ ಎಲ್ಲಾ ಬೇಡಿಕೆಯ ನಡುವೆ ಭಾರತದ ಉನ್ನತ ನ್ಯಾಯಾಲಯ ತಿಳಿಸಿರುವ ಶೇ.50ರಷ್ಟುಮೀಸಲಾತಿಯ ಮೇಲ್ಪಟ್ಟವನ್ನು ದಾಟಬಾರದೆಂಬ ತೀರ್ಪಿಗೆ ವಿರೋಧವಾಗಿ ಈ ‘ಆರ್ಥಿಕ ಹಿಂದುಳಿದಿರುವಿಕೆ’ಯನ್ನು ಅಳತೆಗೋಲಾಗಿರಿಸುವುದಕ್ಕಾಗಿ ಮೀಸಲಾತಿಯನ್ನೇ ಟೀಕಿಸುವುದು ಇನ್ನೂ ನಿಂತಿಲ್ಲ. ಈ ಕಾರಣಕ್ಕಾಗಿ ಹಿಂದುಳಿದಿರುವಿಕೆಯನ್ನು ಅಳತೆ ಮಾಡುವುದಕ್ಕಾಗಿ ಕೆಲವು ಅಳತೆಗೋಲನ್ನು ರಚಿಸುವುದು ಅವಶ್ಯಕ. ಈಗಾಗಲೇ ಅಸ್ತಿತ್ವದಲ್ಲಿರುವ ಮೀಸಲಾತಿಯನ್ನೇ ಸರಿಯಾಗಿ ನಿರ್ವಹಿಸಲಾರದ ರಾಜ್ಯಗಳು ಈ ಮೀಸಲಾತಿಯನ್ನು ಹೇಗೆ ನಿರ್ವಹಿಸಬಹುದು ಎಂಬೆಲ್ಲಾ ಪ್ರಶ್ನೆಗಳು ನಮ್ಮನ್ನು ಕಾಡುತ್ತವೆ.

ದೇಶದಲ್ಲಿ ಮೀಸಲಾತಿಯ ಭವಿಷ್ಯ

19ನೇ ಶತಮಾನದ ಕೊನೆಯಿಂದ ಭಾರತದ ರಾಜ್ಯಗಳು ತಾವೇ ಅತಿ ದೊಡ್ಡ ಉದ್ಯೋಗದಾತರಾಗಿದ್ದನ್ನು ಮರೆತು, ಜಾಗತೀಕರಣದ ಹಿನ್ನಲೆಯಲ್ಲಿ ಕುಗ್ಗುತ್ತಿರುವ ರಾಜ್ಯಗಳಾಗಿ ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಗಳೇ ನಡೆಯದಂತಾದ ಈ ಸಂದರ್ಭದಲ್ಲಿ ಮೀಸಲಾತಿಯ ಭವಿತವ್ಯವೇನೆಂಬುದನ್ನು ಸಹಜವಾಗಿ ಪ್ರಶ್ನಿಸುವ ಹಕ್ಕು ಎಲ್ಲ ನಾಗರಿಕರದ್ದಾಗಿದೆ.

ಒಂದೆಡೆ ತಾಂತ್ರಿಕತೆಯ ಬೆಳವಣಿಗೆಯನ್ನು ಗಮನಿಸಿ, ಮತ್ತೊಂದೆಡೆ ಸಾಂಕ್ರಾಮಿಕ ಹಾಗೂ ಇನ್ನಿತರ ಪರಿಣಾಮಗಳನ್ನು ನೋಡಿದರೆ ರಾಜ್ಯದ ಆರ್ಥಿಕ ಸ್ಥಿತಿಗತಿಗಳೇ ಸರಿ ಇಲ್ಲದ ಸಂದರ್ಭದಲ್ಲಿ ಸರ್ಕಾರದಲ್ಲಿನ ನೌಕರಿಗಳೇ ಖಾಸಗೀಕರಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ಈ ಮೀಸಲಾತಿಯ ಭವಿಷ್ಯವೇನು ಎಂಬ ಚಿಂತನೆ ಮೂಡುತ್ತದೆ.

ಒಂದೆಡೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂದುವರಿದ-ಅಭಿವೃದ್ಧಿ ಹೊಂದಿದ ದೇಶವೆಂದು ಪ್ರತಿಪಾದಿಸುತ್ತಾ, ಇನ್ನೊಂದೆಡೆ ಮೀಸಲಾತಿಯ ನ್ಯಾಯಯುತ ಚಾರಿತ್ರಿಕ ಹಿನ್ನಲೆಯೊಂದಿಗೆ ಸಮಾಜೋ-ಆರ್ಥಿಕ ಮೀಸಲಾತಿಗಳನ್ನು ಹುರಿದುಂಬಿಸುತ್ತಿರುವುದು ನಾವು ನಮ್ಮ ದೇಶದ ಪ್ರಜೆಗಳಿಗೆ ಸಮಾನವಾದ ಆಟದ ಮೈದಾನವನ್ನು ಕೊಡುವ ಬದಲು ಅಂಕು-ಡೊಂಕಾದ ವ್ಯವಸ್ಥೆಯನ್ನು ಸ್ಥಾಪಿಸಿ ಸಮಾಜದ ಸರ್ವತೋಮುಖ ಏಳಿಗೆಗೆ ತೊಡಕನ್ನು ಉಂಟುಮಾಡುತ್ತಿದೆಯೇನೋ ಎಂಬ ಪ್ರಶ್ನೆಗಳು ಮೂಡುತ್ತದೆ.

ಭಾರತದಂತಹ ಸಮಾಜದಲ್ಲಿ ಅಸಮಾನತೆ ಚಾರಿತ್ರಿಕವಾಗಿ, ಪ್ರಾಸಂಗಿಕವಾಗಿ ಬಂಡವಾಳಶಾಹಿ, ಪುರೋಹಿತಶಾಹಿ ಹಾಗೂ ರಾಜ್ಯಶಾಹಿಗಳಿಂದಲೇ ಸೃಷ್ಟಿಯಾಗಿದೆ. ಈ ಅಸಮಾನತೆಗಳನ್ನು ಹೋಗಲಾಡಿಸಲು ಮೂಲಭೂತವಾದ ಸರ್ವಸಮ್ಮತಿ ದೊರಕುವ ‘ಪುನರ್‌ ಹಂಚಿಕೆ’ ಆರ್ಥಿಕ ನೀತಿಯ ಅವಶ್ಯಕತೆ ಇದೆ. ಇಲ್ಲಿ ಜಾನ್‌ ರಾಲ್ಸ್‌ರವರು ಹೇಳುವ ‘ನ್ಯಾಯಿಕ ಸಿದ್ಧಾಂತ’ದಲ್ಲಿ ಚರ್ಚಿಸುವಂತೆ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಮೂಲಭೂತ ಸ್ವಾತಂತ್ರ್ಯ ಇರಬೇಕು ಹಾಗೂ ಸಮಾಜೋ-ಆರ್ಥಿಕ ಅಸಮಾನತೆಗಳನ್ನು ಪ್ರತಿಯೊಬ್ಬರ ಅನುಕೂಲತೆಗೆ ಹಾಗೂ ಅವರು ಹೊಂದಿರುವ ಅ​ಕಾರದ ಪರಿಮಿತಿಗಳಿಗೆ ಒಳಪಟ್ಟಂತೆ ಹೊಂದಿರಬೇಕು. ಇಲ್ಲಿ ಸಮಾಜದ ಎಲ್ಲಾ ಸರಕುಗಳ ಒಡೆತನ ಎಲ್ಲರಿಗೆ ಸಮಾನವಾಗಿ ದೊರಕುವಂತಿರಬೇಕು.

ಅದರಲ್ಲೂ ಅತಿ ಅನನುಕೂಲತೆ ಇದ್ದವರಿಗೆ ಹೆಚ್ಚು ಅನುಕೂಲತೆ ಹಾಗೂ ಅನುಕೂಲತೆ ಹೆಚ್ಚಿದ್ದವರಿಗೆ ಅಲ್ಪ ಅನನುಕೂಲತೆ ಆಗುವಂತೆ ಸಮಾಜದ ಎಲ್ಲಾ ಮಗ್ಗಲುಗಳಿಗೆ ನ್ಯಾಯ ದೊರೆಯುವಂತಿರಬೇಕು. ಹೀಗಾದಾಗ ಮಾತ್ರ ಮೀಸಲಾತಿ ಎಂಬುದು ಸ್ಪರ್ಧಾತ್ಮಕತೆಗೆ ಒಳಪಡದೆ ತರ್ಕಬದ್ಧವಾಗಿ ಅಸ್ತಿತ್ವಕ್ಕೆ ಬರುತ್ತದೆ. ಆಗ ವರ್ಗ-ವರ್ಗಗಳ ನಡುವೆ ಈರ್ಷ್ಯೆಗಳಿಲ್ಲದ ಮೀಸಲಾತಿಯನ್ನೇ ಧನಾತ್ಮಕವಾಗಿ ನೋಡುವ ಚಿಂತನೆ ಬೆಳೆಯುತ್ತದೆ. ಆ ಸಂದರ್ಭದಲ್ಲಿ ಈ ಶೇ.10ರಷ್ಟಾಗಲೀ ಅಥವಾ ಶೇ.60ರಷ್ಟಾಗಲೀ ಯಾವುದೇ ರೀತಿಯ ಮೀಸಲಾತಿಯು ನಿಜವಾಗಿಯೂ ಅವಶ್ಯಕತೆ ಇರುವವರ ಪಾಲಾಗುತ್ತದೆ. ಇಲ್ಲದಿದ್ದರೆ, ಒಳ ಮೀಸಲಾತಿಯ ಕೂಗಿನಂತೆ ಶೇ.10ರಷ್ಟರ ಮೀಸಲಾತಿಯೂ ಕೂಡ ಪ್ರಭಾವಶಾಲಿ, ರಾಜಕೀಯವಾಗಿ ಸಕ್ರಿಯವಾಗಿರುವವರ ಹಾಗೂ ಸಮಾಜದಲ್ಲಿ ಗಣ್ಯರಿರುವವರ ಪಾಲಾಗುತ್ತದೆ ಎಂಬುವುದರಲ್ಲಿ ಸಂಶಯವಿಲ್ಲ.

ಶೇ.10 ಮೀಸಲಿಗೆ ಪ್ರಚಾರ ನೀಡಿ

ಈ ರೀತಿಯ ಮೀಸಲಾತಿಯು ಎಲ್ಲ ಸಂದರ್ಭದಲ್ಲಿಯೂ ಪೂರ್ವಾಗ್ರಹಗಳಿಲ್ಲದೇ ತರ್ಕಬದ್ಧವಾಗಿ ವಸ್ತುನಿಷ್ಠವಾಗಿದ್ದಲ್ಲ. ಅಂತಹ ಮೀಸಲಾತಿಯ ಉಪಯೋಗವು ಸಮಾಜದ ಏಳಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲದಿದ್ದಲ್ಲಿ, ಈ ಮೀಸಲಾತಿಯು ಅಸೂಯೆಗೆ ಎಡೆಮಾಡಿಕೊಡುತ್ತಾ, ಸಮಾಜದ ವರ್ಗಗಳ ನಡುವೆ ಭಿನ್ನತೆಗಳನ್ನು ರೂಪಿಸಿ ಒಡಕನ್ನು ಉಂಟುಮಾಡುತ್ತದೆ. ನಾಗರಿಕ ಸಮಾಜಗಳು ಇಂತಹ ನೀತಿಗಳನ್ನು ಧನಾತ್ಮಕ ದೃಷ್ಟಿಕೋನದಿಂದ ಅಧ್ಯಯನ ಮಾಡಿ ಪ್ರಚುರಪಡಿಸುವ ಮುಖಾಂತರ ಸಮಾಜದ ವಿಭಿನ್ನ ಸ್ತರಗಳು ಮತ್ತು ವರ್ಗಗಳ ನಡುವೆ ಸಾಮರಸ್ಯ ಸೃಷ್ಟಿಸುವುದು ಈ ಸಂದರ್ಭದಲ್ಲಿ ಅವಶ್ಯಕ. ಈ ರೀತಿಯ ದಿಟ್ಟಹೆಜ್ಜೆ ಬಿಜೆಪಿ ಸರ್ಕಾರದ ನೀತಿಗಳಲ್ಲಿ ಒಂದಾಗಿದ್ದು, ಇದನ್ನು ಮೆಚ್ಚಿಕೊಳ್ಳುವುದಕ್ಕೆ ಹಿಂದೇಟು ಹಾಕುವುದೇಕೆ?

-ಡಾ. ಹರೀಶ್‌ ರಾಮಸ್ವಾಮಿ, ಕುಲಪತಿ. ರಾಯಚೂರು ವಿಶ್ಚವಿದ್ಯಾಲಯ

- ಡಾ. ಕಮಲಾಕ್ಷಿ ಜಿ.ತಡಸದ್‌, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ

click me!