ಸಂಸತ್‌ ಅಧಿವೇಶನದಲ್ಲಿ ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚೆ ಸಾಧ್ಯತೆ ಇಲ್ಲ?

By Suvarna NewsFirst Published Sep 13, 2020, 9:01 AM IST
Highlights

ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನ| ಸಂಸತ್‌ ಅಧಿವೇಶನದಲ್ಲಿ ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಚರ್ಚೆ ಸಾಧ್ಯತೆ ಇಲ್ಲ?

ನವದೆಹಲಿ(ಸೆ.13): ಸೋಮವಾರದಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಕೊರೋನಾ ಬಿಕ್ಕಟ್ಟು, ಆರ್ಥಿಕತೆಗೆ ಬಿದ್ದಿರುವ ಹೊಡೆತ, ಉದ್ಯೋಗ ಕುಸಿತ, ಚೀನಾ ಗಡಿ ಬಿಕ್ಕಟ್ಟನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಆದರೆ ಪ್ರಸಕ್ತ ಅಧಿವೇಶದನಲ್ಲಿ ಚೀನಾ ಗಡಿ ಬಿಕ್ಕಟ್ಟು ಕುರಿತ ವಿಷಯವನ್ನು ಸರ್ಕಾರ ಚರ್ಚೆಗೆ ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಭಾರತ ಮತ್ತು ಚೀನಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕೆಲವು ಸೂಕ್ಷ್ಮ ಸಂಗತಿಗಳು ಅಡಗಿವೆ. ಅಲ್ಲದೇ ಇದೊಂದು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಗೆ ಸಂಬಂಧಿಸಿದ ವಿಷಯವಾಗಿದ್ದರಿಂದ ಸಂಸತ್ತಿನಲ್ಲಿ ಬಹಿರಂಗವಾಗಿ ಚರ್ಚಿಸುವುದು ಸಾಧ್ಯವಿಲ್ಲ. ಹೀಗಾಗಿ ಗಡಿಯಲ್ಲಿನ ಇದುವರೆಗಿನ ಬೆಳವಣಿಗೆ ಕುರಿತು ಚರ್ಚೆಯ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ. ಆದರೆ ಮಾಸ್ಕೋದಲ್ಲಿ ಭಾರತ- ಚೀನಾ ವಿದೇಶಾಂಗ ಸಚಿವರು ಬಿಕ್ಕಟ್ಟು ಇತ್ಯರ್ಥಕ್ಕೆ 5 ಅಂಶಗಳ ಪಾಲನೆಗೆ ಒಪ್ಪಿಕೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಹೀಗಾಗಿ ಇನ್ನು ಕೆಲ ದಿನಗಳ ಗಡಿ ಬೆಳವಣಿಗೆ ಕಾದು ನೋಡಿ ಬಳಿಕ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರೇ ಸಂಸತ್ತಿನಲ್ಲಿ ಹೇಳಿಕೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಮಾನ್ಯವಾಗಿ ಸಂಸತ್‌ ಅಧಿವೇಶನ ಆರಂಭವಾಗುವುದಕ್ಕೂ ಮುನ್ನ ಸರ್ವಪಕ್ಷ ನಾಯಕರ ಜೊತೆ ಸಭೆ ನಡೆಸಿ ಚರ್ಚಿಸಬೇಕಾದ ವಿಷಯದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಆದರೆ, ಕೊರೋನಾ ವೈರಸ್‌ನ ಕಾರಣದಿಂದಾಗಿ ಸಂಸತ್‌ ಅಧಿವೇಶನಕ್ಕೂ ಮುನ್ನ ಸರ್ವಪಕ್ಷ ಸಭೆಯನ್ನು ಕರೆಯಲು ಸಾಧ್ಯವಾಗಿಲ್ಲ.

click me!