
ನವದೆಹಲಿ (ಜೂ.9): ಭಾರತದಲ್ಲಿ ಬೆಳವಣಿಗೆಯಾಗುತ್ತಿರುವ ವಿದ್ಯುತ್ ಚಾಲಿತ ವಾಹನ ಹಾಗೂ ಆಟೋಮೊಬೈಲ್ ಕ್ಷೇತ್ರಕ್ಕೆ ದೊಡ್ಡ ಹೊಡೆತ ಕೊಡಬಹುದಾದಂತ ಬೆಳವಣಿಗೆಯಾಗಿದೆ. ಕಾರಣ, ಅವುಗಳ ಉತ್ಪಾದನೆಗೆ ಅತ್ಯವಶ್ಯಕವಾದ ಭೂಮಿಯಡಿ ಸಿಗುವ ದುರ್ಲಭ ಅಯಸ್ಕಾಂತ (ರೇರ್ ಅರ್ಥ್ ಮ್ಯಾಗ್ನೆಟ್) ರಫ್ತಿಗೆ ಕತ್ತರಿ ಹಾಕಲು ಚೀನಾ ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಅಧ್ಯಕ್ಷ ಸಿ.ಎಸ್. ವಿಘ್ನೇಶ್ವರ್, ‘ರೇರ್ ಅರ್ಥ್ ಮ್ಯಾಗ್ನೆಟ್ ಪೂರೈಕೆ ನಿಂತುಹೋದರೆ, ದೇಶದ ಇವಿ ಉತ್ಪಾದನೆಯೇ ಜೂನ್ ಅಂತ್ಯದ ವೇಳೆಗೆ ನಿಂತುಹೋಗಬಹುದು. ಹೀಗಾಗದಿರಲು, ಸರ್ಕಾರ ಸಂಬಂಧಿಸಿದವರ ಬಳಿ ಮಾತುಕತೆ ನಡೆಸಬೇಕು’ ಎಂದು ಎಚ್ಚರಿಸಿದ್ದಾರೆ.
ದೇಶದಲ್ಲಿ ಇದು ಮುಂಗಾರಿನ ಸಮಯವಾದ್ದರಿಂದ, ಒಳ್ಳೆ ಬೆಳೆಯಾಗಿ ವಾಹನಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ಚೀನಾದ ಈ ನಡೆಯಿಂದ ತೊಡಕುಂಟಾಗುತ್ತದೆ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ದುರ್ಲಭ ಅಯಸ್ಕಾಂತ ಲಭ್ಯವಿದ್ದರೂ ಅದರ ಪ್ರಮಾಣ ಕಡಿಮೆಯಿದೆ. 2024ರಲ್ಲಿ 2,900 ಮೆಟ್ರಿಕ್ ಟನ್ ಉತ್ಪಾದಿಸಲಾಗಿತ್ತು. ಅತ್ತ ಇಷ್ಟೇ ಪ್ರಮಾಣದ (2,850 ಮೆಟ್ರಿಕ್ ಟನ್) ಅಯಸ್ಕಾಂತವನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿತ್ತು.
ರೇರ್ ಅರ್ಥ್ ಮ್ಯಾಗ್ನೆಟ್ ಮಹತ್ವ:
ಇದನ್ನು ಪ್ರಮುಖವಾಗಿ ಮೊಬೈಲ್, ಇಯರ್‌ಫೋನ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳು, ವಾಹನಗಳ ಮೋಟರ್ ಇತ್ಯಾದಿಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ. ಹೆಸರೇ ಹೇಳುವಂತೆ, ಇವು ದುರ್ಲಭವಾಗಿದ್ದು, ಎಲ್ಲಾ ದೇಶಗಳಲ್ಲಿ ಲಭ್ಯವಿಲ್ಲ. ಇದ್ದರೂ ಅದನ್ನು ಭೂಮಿಯಿಂದ ಹೊರತೆಗೆವ ತಂತ್ರಜ್ಞಾನ ಎಲ್ಲರ ಬಳಿ ಲಭ್ಯವಿಲ್ಲ. ಹೀಗಿರುವಾಗ, ವಿಶ್ವದಲ್ಲಿ ಲಭ್ಯವಿರುವ ಶೇ.90ರಷ್ಟು ದುರ್ಲಭ ಅಯಸ್ಕಾಂತ ಹೊಂದಿರುವ ಚೀನಾ ಅದರ ರಫ್ತನ್ನು ನಿಲ್ಲಿಸಿಬಿಟ್ಟರೆ, ಇದರಿಂದ ಭಾರತ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ಇವಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ