
Delhi CJP Protest: ದೆಹಲಿಯಲ್ಲಿಂದು(ಅಕ್ಟೋಬರ್ 10) ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿರುವ ಪ್ರತಿಭಟನೆಯಲ್ಲಿ ಭಾಗಿಯಾಗದೆ ದೂರ ಇರುವಂತೆ ಭಾರತದ ಪ್ರಮುಖ ಮುಸ್ಲಿಮರು ತಮ್ಮ ಸಮುದಾಯದ ಜನರಿಗೆ ಮನವಿ ಮಾಡಿದ್ದಾರೆ.
ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ.ಇಮಾಮ್ ಉಮರ್ ಅಹಮದ್ ಇಲ್ಯಾಸಿ ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಶಾಂತವಾಗಿರುವ ನಮ್ಮ ದೇಶದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಹೀಗಾಗಿ ದೇಶದಲ್ಲಿ ಉದ್ವಿಗ್ನತೆ, ಸೌಹರ್ದತೆಗೆ ಭಂಗ ತರುವ ಯಾವುದೇ ಪ್ರತಿಭಟನೆ, ಸಭೆಗಳಲ್ಲಿ ಭಾಗಿಯಾಗದಂತೆ ಮನವಿ ಮಾಡಿದ್ದಾರೆ.
ಪ್ರತಿಯೊಬ್ಬರಲ್ಲೂ ನಾನು ಮನವಿ, ಪ್ರಾರ್ಥನೆ ಮಾಡಿಕೊಳ್ಳುವುದೇನೆಂದರೆ ದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ ಎಂಬುದು ನಿಮ್ಮೆಲ್ಲರಿಗೂ ತಿಳಿದೇ ಇದೆ ಅಲ್ಲವೇ? ಕೆಲವು ದೇಶವಿರೋಧಿ ಶಕ್ತಿಗಳು ಜನರನ್ನು ಅದರಲ್ಲೂ ಯುವ ಸಮೂಹವನ್ನು ದಾರಿ ತಪ್ಪಿಸುವ ಮೂಲಕ ನಮ್ಮ ದೇಶದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿವೆ. ದೇಶದಲ್ಲಿ ಸೌಹಾರ್ದಯುತ ವಾತಾವರಣವನ್ನು ಹಾಳುಮಾಡಲು ದೊಡ್ಡ ಸಂಚು ರೂಪಿಸಲಾಗುತ್ತಿದೆ. ಇಂದು(ಅಕ್ಟೋಬರ್ 10) ರಂದು ನಡೆಯುತ್ತಿರುವ ಪ್ರತಿಭಟನೆ ವಿದ್ಯಾರ್ಥಿ ಪ್ರತಿಭಟನೆಯಲ್ಲ, ಇದು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನೆಯಲ್ಲಿ ಭಾಗಯಾಗಲು ಕರೆ ನೀಡಿರುವ ರಾಜಕೀಯ ಪಕ್ಷಗಳು ಸರ್ಕಾರವನ್ನು ವಿರೋಧಿಸಲು ಜನರನ್ನು ಕರೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನಾನು ಎಲ್ಲಾ ಮುಸ್ಲಿಮರಿಗೆ ಹೇಳಲು ಬಯಸುವುದೇನೆಂದರೆ ನಾವು ಯಾರ ಕೈಯಲ್ಲೂ ದಾಳಗಳಾಗಿ ಬಳಕೆಯಾಗಬಾರದು ಸಲಹೆ ನೀಡಿದ್ದಾರೆ.
'ಇಲ್ಲಿಯವರೆಗೆ ಮುಸ್ಲಿಮರಾದ ನಮ್ಮನ್ನು ಕೇವಲ ತಮ್ಮ ಅಧಿಕಾರ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಾಗಿದೆಯಷ್ಟೇ. ಹೀಗಾಗಿ ಇದು ಧೈರ್ಯ ಮತ್ತು ವಿವೇಕದಿಂದ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ. ಕೇವಲ ಭಾವನೆಗಳಿಗೆ ಒಳಗಾಗಿ ತೆಗೆದುಕೊಳ್ಳುವ ನಿರ್ಧಾರ ಸರಿ ಅಲ್ಲ. ಧೈರ್ಯದಿಂದ ನಿರ್ಧಾರ ತಗೊಳ್ಳಿ, ಏಕೆಂದರೆ ಧೈರ್ಯದ ನಿರ್ಧಾರಗಳೇ ಅತ್ಯುತ್ತಮ ಫಲಿತಾಂಶ ನೀಡುತ್ತವೆ. ರಾಜಕೀಯ ಪಕ್ಷಗಳು ನಮ್ಮನ್ನು ಕೇವಲ ಸ್ವಾರ್ಥಕ್ಕಾಗಿ ಬಳಸಿಕೊಂಡಿವೆ. ಹಿಂದಿನ ಪ್ರತಿಭಟನೆಗಳ ಸಮಯದಲ್ಲೂ ನಾನು ಹೀಗೆಯೇ ಮನವಿ ಮಾಡಿದ್ದೆ. ಅನೇಕರು ಜನರು ಅದಕ್ಕೆ ಸ್ಪಂದಿಸಿದರೂ ಕೂಡ. ಇನ್ನು ಕೆಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು. ಅವರು ಇಂದಿಗೂ ಜೈಲಿನಲ್ಲಿದ್ದಾರೆ. ಅವರ ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಅವರನ್ನು ಜಾಮೀನಿನ ಮೇಲೆ ಹೊರತರಲು ಯಾರೂ ಇಲ್ಲ ಎಂದರು.
ಆದ್ದರಿಂದ ನಾನು ಎಲ್ಲಾ ಮುಸ್ಲಿಮರಲ್ಲಿ ವಿನಂತಿಸುತ್ತೇನೆ, ಯಾವುದೇ ರಾಜಕೀಯ ಪಕ್ಷದ ಮಾತು ಕೇಳಿ ದಾರಿ ತಪ್ಪಬೇಡಿ, ಈ ಪ್ರತಿಭಟನೆಗಳಲ್ಲಿ ಭಾಗವಹಿಸಬೇಡಿ. ಇದರಿಂದ ನಮಗೆ ಯಾವುದೇ ಪ್ರಯೋಜನವಿಲ್ಲ. ಈ ರಾಜಕೀಯ ಪಕ್ಷಗಳಿಗೆ ತಮ್ಮ ಸ್ವಂತ ಲಾಭಕ್ಕಾಗಿ ನಮ್ಮನ್ನು ಬಳಸಿಕೊಳ್ಳುವ ಉದ್ದೇಶವಷ್ಟೇ ಇದೆ. ನೀವು ಹೋಗಬಾರದು, ನಿಮ್ಮ ಮಕ್ಕಳನ್ನೂ ಕಳುಹಿಸಬಾರದು. ಅನೇಕರು ಅಲ್ಲಿ ಏನಾಗುತ್ತಿದೆ ಎಂದು ನೋಡಲು ಹೋಗಿ, ಕೊನೆಗೆ ಬಂಧನಕ್ಕೊಳಗಾಗಿದ್ದಾರೆ.
ದೆಹಲಿಯಲ್ಲಿ 144ನೇ ಕಾಯ್ದೆ ಜಾರಿಯಲ್ಲಿದೆ ಎಂಬುದು ನಿಮಗೂ ತಿಳಿದಿದೆ. ಈ ಪ್ರತಿಭಟನೆಯಲ್ಲಿ ಬಂಧನಕ್ಕೊಳಗಾಗುವ ಯಾರೇ ಆದರೂ ಗಂಭೀರ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂಬುದು ತಿಳಿದಿರಲಿ. ಜಾಮೀನು ಕೂಡ ಸಿಗುವುದಿಲ್ಲ. ನೀವು ಮತ್ತು ನಿಮ್ಮ ಕುಟುಂಬ ದೊಡ್ಡ ಸಂಕಷ್ಟಕ್ಕೆ ಸಿಲುಕಿ ನಾಶವಾಗಬೇಕಾಗುತ್ತದೆ. ಆದ್ದರಿಂದ ಎಲ್ಲಾ ಇಮಾಮ್‌ಗಳು ಇಂದೇ ತಮ್ಮ ಮಸೀದಿಗಳಿಂದ ಈ ಬಗ್ಗೆ ಘೋಷಣೆ ಮಾಡಿ. ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಸಲಹೆ ನೀಡಬೇಕೆಂದು ಇಮಾಮ್ ಮುಸ್ಲಿಂ ಸಮುದಾಯಕ್ಕೆ ವಿನಂತಿಸಿದ್ದಾರೆ.
ಪ್ರಸ್ತುತ ದೆಹಲಿಯಲ್ಲಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು. ದೇಶದ ವಾತಾವರಣ ಹಾಳುಮಾಡಲು ದೇಶವಿರೋಧಿ ಶಕ್ತಿಗಳು ಸಕ್ರಿಯವಾಗಿದ್ದು ಇದಕ್ಕೆ ಅವಕಾಶ ಕೊಡಬಾರದು. ಆದ್ದರಿಂದ ದೇವರಿಗಾಗಿ (ಅಲ್ಲಾಹನ ಹೆಸರಿನಲ್ಲಿ) ನಾನು ಮತ್ತೊಮ್ಮೆ ಎಲ್ಲಾ ಮುಸ್ಲಿಮರಲ್ಲಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ ಎಂದು ವಿನಂತಿಸುತ್ತೇನೆ. ಇದಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡುವಾಗ ಕೋಮುಗಲಭೆ ಆಗದಂತೆ ಯಾವುದೇ ವಿಷಯದಲ್ಲೂ ಎಚ್ಚರಿಕೆಯಿಂದ ಬರೆಯಿರಿ. ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ದೇಶದ ಶಾಂತಿಯನ್ನು ಕದಡುವಂತಹ ಯಾವುದೇ ಸಂದೇಶಗಳನ್ನು ಯಾರಿಗೂ ಫಾರ್ವರ್ಡ್ ಮಾಡಬೇಡಿ. ನೀವು ಈ ಪ್ರತಿಭಟನೆಯ ಭಾಗವಲ್ಲ, ನೀವು ಈ ದೇಶದ ಸೌಹಾರ್ದತೆ, ಶಾಂತಿಯ ಸಂಕೇತ. ಆದ್ದರಿಂದ, ಯಾರಾದರೂ ನಿಮ್ಮನ್ನು ಅಥವಾ ನಿಮ್ಮ ಮಕ್ಕಳನ್ನು ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರಚೋದಿಸಲು ಯತ್ನಿಸಿದರೆ, ಯಾವುದೇ ಕಾರಣಕ್ಕೂ ಹೋಗಬೇಡಿ ಎಂದು ಇಮಾಮ್ ಮನವಿ ಮಾಡಿದ್ದಾರೆ.
ಇದೇ ವೇಳೆ ಇನ್ನೊಬ್ಬರು ಪ್ರಮುಖ ಮುಸ್ಲಿಂ ಮುಖಂಡರಾದ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಕೂಡ ಜಂತರ್ ಮಂತರ್‌ನಲ್ಲಿ ನಡೆಯುವ ಹಿಂಸಾತ್ಮಕ ಪ್ರತಿಭಟನೆಗಳಿಂದ ದೂರವಿರಲು ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.
ಪ್ರತಿಭಟನೆ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು. ಅದು ನಮ್ಮ ಕಾನೂನಾತ್ಮಕ ಹಕ್ಕು. ಆದರೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗಬಾರದು. ದೇಶದ ಕಾನೂನಿನಲ್ಲಿ ಯಾರೊಬ್ಬರಿಗೂ ಹಿಂಸೆಗೆ ಇಳಿಯಲು ಅವಕಾಶ ನೀಡಲಾಗುವುದಿಲ್ಲ. ದೆಹಲಿಯಲ್ಲಿ ಅಥವಾ ಉತ್ತರ ಪ್ರದೇಶದಲ್ಲಿ ವಾಸಿಸುವ ಎಲ್ಲಾ ಮುಸ್ಲಿಂ ಯುವಕರಲ್ಲಿ ನಾನು ಮನವಿ ಮಾಡುವುದೇನೆಂದರೆ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸಲಿರುವ ಇಂದಿನ ಧರಣಿ ಪ್ರತಿಭಟನೆಯಿಂದ ದೂರವಿರಿ, ಯಾವುದೇ ಕಾರಣಕ್ಕೂ ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಕಾರಣಗಳನ್ನು ಸಹ ಕೊಟ್ಟಿರುವ ರಜ್ವಿ, ಏಕೆಂದರೆ ಕಳೆದ ಬಾರಿ ಕಾಕ್ರೋಚ್ ಪಾರ್ಟಿಯ ಪ್ರತಿಭಟನೆಯ ಸಮಯದಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿವೆ. ಮುಸ್ಲಿಮರು ಸಮಾಜದ ಸೂಕ್ಷ್ಮ ಭಾಗವಾಗಿದ್ದಾರೆ. ಆ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ಮುಸ್ಲಿಮರು ನಂತರ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು. ಹೀಗಾಗಿ ನಾನು ಪ್ರತಿಯೊಬ್ಬರಲ್ಲೂ ಮನವಿ ಮತ್ತು ಪ್ರಾರ್ಥನೆ ಮಾಡುತ್ತಿದ್ದೇನೆ. ಕೆಲವು ದೇಶವಿರೋಧಿ ಶಕ್ತಿಗಳು ಜನರನ್ನು ಹಾದಿತಪ್ಪಿಸುವ ಮೂಲಕ ನಮ್ಮ ದೇಶದ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡಲು ಯತ್ನಿಸುತ್ತಿವೆ. ದೇಶದಲ್ಲಿ ಸೌಹಾರ್ದಯುತ ವಾತಾವರಣವನ್ನು ಹಾಳುಮಾಡಲು ದೊಡ್ಡ ಸಂಚು ರೂಪಿಸಲಾಗುತ್ತಿದೆ. ಇದು ವಿದ್ಯಾರ್ಥಿ ಪ್ರತಿಭಟನೆಯಲ್ಲ, ರಾಜಕೀಯ, ದೇಶ ವಿರೋಧಿ ಶಕ್ತಿಗಳ ಸಂಚಿನಿಂದ ಕೂಡಿದೆ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ