ಕೊರೋನಾ ಅಬ್ಬರ: ಶವಾಗಾರದಲ್ಲಿ ಹೆಣಗಳ ರಾಶಿ, ಶವ ಸಂಸ್ಕಾರಕ್ಕೆ 48 ಗಂಟೆ ಕಾಯಬೇಕು!

By Suvarna NewsFirst Published Apr 12, 2021, 9:32 AM IST
Highlights

ಛತ್ತೀಸ್‌ಗಢ: ಕೊರೋನಾ ಶವ ಸಂಸ್ಕಾರ ಮಾಡಲಾಗದೆ ಪರದಾಟ| ಆಸ್ಪತ್ರೆಯ ಶವಾಗಾರದಲ್ಲೇ ಬಿದ್ದಿವೆ ಮೃತರ ಶರೀರಗಳು| ಸ್ಮಶಾನ, ವಿದ್ಯುತ್‌ ಚಿತಾಗಾರಗಳಲ್ಲಿ ಇಡೀ ದಿನ ಕೆಲಸ| ಸಂಸ್ಕಾರ ಮಾಡಬೇಕು ಎಂದರೆ 48 ಗಂಟೆ ಕಾಯಬೇಕು| ಕೋವಿಡ್‌ ಪ್ರಕರಣಗಳಲ್ಲಿ ಛತ್ತೀಸ್‌ಗಢ ಈಗ ದೇಶದಲ್ಲೇ ನಂ.2

ರಾಯ್‌ಪುರ(ಏ.12): ದೇಶದಲ್ಲಿ ಮಹಾರಾಷ್ಟ್ರದ ನಂತರ ನಿತ್ಯ ಅತಿಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗುತ್ತಿರುವ ಛತ್ತೀಸ್‌ಗಢದಲ್ಲಿ ಈಗ ಕೊರೋನಾದಿಂದ ಮೃತಪಟ್ಟವರ ಶವಸಂಸ್ಕಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನ ಹಾಗೂ ವಿದ್ಯುತ್‌ ಚಿತಾಗಾರಗಳಲ್ಲಿ ಇಡೀ ದಿನ ಶವಸಂಸ್ಕಾರ ನಡೆಸುತ್ತಿದ್ದರೂ ಆಸ್ಪತ್ರೆಯ ಶವಾಗಾರ ಹಾಗೂ ಮನೆಗಳಲ್ಲಿ ಕೊರೋನಾದಿಂದ ಮೃತಪಟ್ಟವರ ಶವಗಳು ಸಂಸ್ಕಾರಕ್ಕಾಗಿ ಕಾಯುತ್ತಾ ಬಿದ್ದಿವೆ.

ಕಳೆದ ತಿಂಗಳು ಕೇವಲ 100-200 ಪ್ರಕರಣಗಳು ವರದಿಯಾಗುತ್ತಿದ್ದ ಛತ್ತೀಸ್‌ಗಢದಲ್ಲಿ ಈಗ ನಿತ್ಯ 10 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಡುತ್ತಿದೆ. ಹೀಗಾಗಿ ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು, ಕಳೆದೊಂದು ವಾರದಲ್ಲಿ 170ಕ್ಕೂ ಹೆಚ್ಚು ಜನರು ಕೊರೋನಾದಿಂದ ಮೃತಪಟ್ಟಿದ್ದಾರೆ. ರಾಯ್‌ಪುರದ ಎಲೆಕ್ಟ್ರಿಕ್‌ ಚಿತಾಗಾರದಲ್ಲಿ ದಿನಕ್ಕೆ 20 ಶವ ದಹಿಸಬಹುದು. ನಗರದಲ್ಲಿ ಕೊರೋನಾದಿಂದ ಮೃತಪಟ್ಟವರು ಹಾಗೂ ಇತರ ಕಾರಣಗಳಿಂದ ಮೃತಪಟ್ಟವರು ಸೇರಿದಂತೆ ದಿನಕ್ಕೆ 55ಕ್ಕೂ ಹೆಚ್ಚು ಶವಗಳ ಸಂಸ್ಕಾರ ಮಾಡಲಾಗುತ್ತಿದೆ. ಆದರೂ ಅಂಬೇಡ್ಕರ್‌ ಆಸ್ಪತ್ರೆಯ ಶವಾಗಾರದಲ್ಲಿ ಶವಗಳ ಬ್ಯಾಕ್‌ಲಾಗ್‌ ಹೆಚ್ಚಾಗುತ್ತಲೇ ಸಾಗಿದೆ. ಜೊತೆಗೆ, ಮನೆಯಲ್ಲೇ ಐಸೋಲೇಶನ್‌ನಲ್ಲಿದ್ದು ಮೃತಪಟ್ಟವರ ಶವಕ್ಕೂ ಅಂತ್ಯ ಸಂಸ್ಕಾರ ನಡೆಸಬೇಕಿದೆ.

ಕೊರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಡೆಸಲು ಸಾಕಷ್ಟುಸರ್ಕಾರಿ ಪ್ರಕ್ರಿಯೆಗಳಿರುತ್ತವೆ. ಅವು ವಿಳಂಬವಾಗುವುದರ ಜೊತೆಗೆ ಸ್ಮಶಾನ ಮತ್ತು ವಿದ್ಯುತ್‌ ಚಿತಾಗಾರದಲ್ಲಿ ಜಾಗವಿಲ್ಲದೆ ಇನ್ನಷ್ಟುವಿಳಂಬವಾಗುತ್ತಿದೆ. ಹೀಗಾಗಿ ಹೊಸ ಸ್ಮಶಾನಗಳನ್ನು ಗುರುತಿಸಲಾಗುತ್ತಿದ್ದು, ಅಲ್ಲಿಯವರೆಗೆ ಶವಗಳನ್ನು ಫ್ರೀಜರ್‌ನಲ್ಲಿ ಇರಿಸಿಕೊಳ್ಳುವಂತೆ ಸರ್ಕಾರಿ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಿಗೆ ಮನವಿ ಮಾಡುತ್ತಿವೆ. ಆದರೂ ಕಳೆದ 48 ಗಂಟೆಗಳಲ್ಲಿ ಅಂತ್ಯಸಂಸ್ಕಾರಕ್ಕೆ ಕಾಯುತ್ತಿರುವ ಶವಗಳ ಸಂಖ್ಯೆ ಹೆಚ್ಚುತ್ತಾ ಸಾಗಿದೆ. 40 ಶವ ದಹಿಸಲು 48 ಗಂಟೆ ಹಿಡಿದಿದೆ ಎಂದು ಮೂಲಗಳು ಹೇಳಿವೆ.

ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ಸಾವಿರಾರು ಜನರನ್ನು ಸೇರಿಸಿ ದೊಡ್ಡ ಪ್ರಮಾಣದಲ್ಲಿ ‘ಹಿರಿಯರ ಕ್ರಿಕೆಟ್‌ ಪಂದ್ಯಾವಳಿ’ ಆಯೋಜಿಸಲಾಗಿತ್ತು. ಅಲ್ಲಿಂದ ಹೆಚ್ಚುತ್ತಾ ಸಾಗಿದ ಕೊರೋನಾ ಪ್ರಕರಣಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ.

click me!