* ಹೆಣ್ಮಗುವನ್ನು ಬೀದಿಗೆಸೆದ ತಾಯಿ
* ಕಂದನನ್ನು ರಾತ್ರಿ ಇಡೀ ನೋಡಿಕೊಂಡ ಶ್ವಾನ
* ಮನುಕುಲವೇ ತಲೆತಗ್ಗಿಸುವಂತಹ ಅಮಾನವೀಯ ಘಟನೆ
ರಾಯ್ಪುರ(ಡಿ.21):
ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯ ಲೋರ್ಮಿಯಲ್ಲಿ ಮನುಕುಲವೇ ತಲೆತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ನವಜಾತ ಹೆಣ್ಣು ಶಿಶುವನ್ನು ಜನ್ಮ ಕೊಟ್ಟ ತಾಯಿಯೇ ಬೀದಿಗೆಸೆದಿದ್ದಾಳೆ. ಆದರೆ ಕಂದನ ಕಂಡ ನಾಯಿಗಳು ಖುದ್ದಿ ಸುತ್ತಲೂ ನಿಂತು ರಕ್ಷಣೆ ನೀಡಿವೆ. ಕೆಲ ಸಮಯದ ಬಳಿಕ ಈ ವಿಚಾರ ಗ್ರಾಮಸ್ಥರ ಗಮನಕ್ಕೆ ಬಂದಿದ್ದು, ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಾಣಿಗಳ ನಡುವೆ ಇದ್ದರೂ ಈ ಮುಗ್ಧ ನವಜಾತ ಶಿಶು ಸಂಪೂರ್ಣವಾಗಿ ಆರೋಗ್ಯಕರ ಮತ್ತು ಸುರಕ್ಷಿತವಾಗಿತ್ತು.
ಹೌದು ಈ ಇಡೀ ಘಟನೆಯು ಲೋರ್ಮಿಯ ಸರಿಸ್ಟಾಲ್ ಗ್ರಾಮದಲ್ಲಿ ನಡೆದಿದೆ. ಗ್ರಾಮ ನವಜಾತ ಹೆಣ್ಣು ಶಿಶುವೊಂದು ಗುಡ್ಡ ಭಾಗದಲ್ಲಿ ನಾಯಿಗಳ ನಡುವೆ ಅಳುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಹತ್ತಿರದ ನಿವಾಸಿಯ ಕಣ್ಣಂಚು ಒದ್ದೆಯಾಗಿದೆ. ಕೂಡಲೇ ಮನೆ ಸದಸ್ಯ ಭೈಯಾಲಾಲ್ ಸಾಹು ಗ್ರಾಮದ ಸರಪಂಚ್‌ಗೆ ಮಾಹಿತಿ ನೀಡಿದ್ದಾರೆ.
ಸರಪಂಚ್ ತಡ ಮಾಡದೆ ಶಿಶುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವಿಷಯ ತಿಳಿದು ಪೊಲೀಸರು ಕೂಡ ಆಸ್ಪತ್ರೆಗೆ ಆಗಮಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಕಂದನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಅದೇ ಸಮಯದಲ್ಲಿ, ಗ್ರಾಮದಲ್ಲಿ ನಡೆದ ಇಂತಹ ಘಟನೆಯಿಂದ ಜನರು ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. ಏಕೆಂದರೆ ಮುಗ್ಧ ಮಗು ರಾತ್ರಿ ಇಡೀ ಮೈಕೊರೆಯುವ ಚಳಿ ಹಾಗೂ ಪ್ರಾಣಿಗಳ ನಡುವೆ ಬದುಕುಳಿದಿದ್ದು ಪವಾಡಕ್ಕಿಂತ ಕಡಿಮೆಯಿಲ್ಲ. ಈ ಪ್ರಾಣಿಗಳು ನವಜಾತ ಶಿಶುವಿಗೆ ಹಾನಿ ಮಾಡುವ ಸಾಧ್ಯತೆಯೂ ಇತ್ತು. ಆದರೆ ಹಾಗಾಗಲಿಲ್ಲ, ಬದಲಾಗಿ ಅವುಗಳೇ ಖುದ್ದು ಕಂದನಿಗೆ ರಕ್ಷಣೆ ನೀಡಿವೆ. ನಾಯಿಗಳು ಕಂದನನ್ನು ನಾಲಿಗೆಯಿಂದ ನೆಕ್ಕಿ ಸ್ವಚ್ಛಗೊಳಿಸಿವೆ. ಮನುಷ್ಯರಿಗಿಂತ ಈ ಮೂಕಪ್ರಾಣಿಗಳಲ್ಲಿ ಹೆಚ್ಚು ಮಾನವೀಯತೆ ಇರುವುದು ಇದರಿಂದ ಸ್ಪಷ್ಟವಾಗುತ್ತದೆ.
ಅದೇ ಸಮಯದಲ್ಲಿ, ಪ್ರಕರಣದ ತನಿಖೆಯಲ್ಲಿ ತೊಡಗಿರುವ ಲೋರ್ಮಿ ಪೊಲೀಸ್‌ನ ತನಿಖಾಧಿಕಾರಿ ಚಿಂತಾರಾಮ್ ಬಿಜ್ವರ್ ಅವರು ಈ ಬಗ್ಗಡ ಮಾಹಿತಿ ನೀಡುತ್ತಾ ಅಮಾಯಕ ಕಂದನನ್ನು ಚೈಲ್ಡ್ ಲೈನ್‌ಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ. ನವಜಾತ ಶಿಶು ಜನಿಸಿ 24 ಗಂಟೆಯೂ ಪೂರ್ಣಗೊಂಡಿಲ್ಲ ಎಂದು ಹೇಳಲಾಗುತ್ತಿದೆ. ಬಾಲಕಿಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಇರಿಸಲಾಗಿದೆ. ವೈದ್ಯರ ಪ್ರಕಾರ, ಹೆಣ್ಣು ಮಗುವಿನ ಸ್ಥಿತಿ ಸಾಮಾನ್ಯವಾಗಿದೆ ಮತ್ತು ಸಂಪೂರ್ಣವಾಗಿ ಆರೋಗ್ಯಯುತವಾಗಿದೆ. ಸದ್ಯ ಯಾರು, ಯಾವ ಸಂದರ್ಭಗಳಲ್ಲಿ ೀ ಕುಕೃತ್ಯ ಎಸಗಿದ್ದಾರೆಂದು ಕಂಡುಹಿಡಿಯಲು ಲೋರ್ಮಿ ಪೊಲೀಸರು ಈಗ ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ಮಾಡುವ ಅವಮಾನವೇ ಈ ಭಯಾನಕ ಹೆಜ್ಜೆಗೆ ಕಾರಣವಾಗಿರಬಹುದೇ ಅಥವಾ ಹೆಣ್ಮಗು ಎಂಬ ಕಾರಣಕ್ಕಾಗಿ ಇಂತಹ ಹೆಜ್ಜೆ ಇಟ್ಟಿದ್ದಾರೆಯೇ ಎಂಬುವುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ. ಈ ಎಲ್ಲ ವಿಷಯಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.