ಉದ್ಯಮ ಕಟ್ಟಬೇಕೆಂಬ ಹಂಬಲ ಆದರೆ ಬಡತನದ ಬೇಗೆಯಿಂದ ತಂದೆಯ ಆಟೋ ರಿಕ್ಷಾ ಚಾಲನೆ ದಾರಿ ಅನಿವಾರ್ಯವಾಗಿತ್ತು. ಆಟೋ ನಿಲ್ಲಿಸಿದರೆ ಜೀವನವೆ ನಿಲ್ಲುವ ಆತಂಕ, ಕೊನೆಗೆ ಇದೇ ಆಟೋದಲ್ಲೇ ಹೈಟೆಕ್ ಬದುಕು ಕಟ್ಟಿಕೊಂಡ ಯುವಕನ ಸಾಧನೆ ನಿಮಗೂ ಪ್ರೇರಣೆಯಾಗುವುದರಲ್ಲಿ ಅನುಮಾನವಿಲ್ಲ.
ಚೆನ್ನೈ(ಸೆ.20) ಬಡತನದಿಂದ ಉತ್ತಮ ಅಂಕವಿದ್ದರೂ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಅಪ್ಪನ ಆಟೋ ರಿಕ್ಷಾ ಹಾದಿ ಆಯ್ಕೆ ಮಾಡಿದರೂ ಉದ್ಯಮಿಯಾಗಬೇಕೆಂಬ ಕನಸು ಗಟ್ಟಿಯಾಗಿ ಬೇರೂರಿತ್ತು. ಆದರೆ ಆಟೋ ಬಿಟ್ಟು ಇಳಿದರೆ ಬದುಕು ಮುಂದೆ ಸಾಗುವುದೇ ದುಸ್ತರ. ಅತ್ತ ಆಟೋ ಬಿಡಲಾಗದೆ, ಕನಸು ಈಡೇರಿಸಲಾಗದ ತೊಳಲಾಟದಲ್ಲಿ ಹುಟ್ಟಿಕೊಂಡ ಒಂದು ಸಣ್ಣ ಐಡಿಯಾ ಇದೀಗ ಯುವಕನನ್ನು ಹೈಟೆಕ್ ಆಟೋ ಚಾಲಕನಾಗಿ, ಸಣ್ಣ ಉದ್ಯಮಿಯಾಗಿ, ಹೊಸತನದ ರೂವಾರಿಯಾಗಿ ಬೆಳೆಸಿದೆ. ಈ ಯುವಕನ ಸಾಧನೆಯ ಪಥ ಹಲವರಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗಿದೆ.
ಈ ಯುವಕನ ಹೆಸರು ಅಣ್ಣಾದೊರೆೈ. ಚೆನ್ನೈನಲ್ಲಿ ಆಟೋ ರಿಕ್ಷಾದಲ್ಲಿ ಹೊಸ ಕ್ರಾಂತಿ ಮಾಡಿ ಇದೀಗ ದೇಶದಲ್ಲೇ ಭಾರಿ ಸದ್ದು ಮಾಡುತ್ತಿರುವ ಹೈಟೆಕ್ ಆಟೋ ಚಾಲಕ. ಈ ಯುವಕನ ಸ್ಪೂರ್ತಿಯ ಜೀವನದ ಪ್ರತಿಯೊಂದು ಸಾಲು ಬಹುತೇಕರ ಜೀವನದಲ್ಲಿ ನಡೆಯುವ ಘಟನೆಗಳೇ. ಏನೋ ಮಾಡಬೇಕು, ಯಶಸ್ಸು ಗಳಿಸಬೇಕು ಅನ್ನೋದು ಎಲ್ಲರ ಬಯಕೆ. ಆದರೆ ಬಡತನ, ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಅನಿವಾರ್ಯವಾಗಿ ತಮ್ಮ ಕನಸು ನನಸಾಗದೇ ಉಳಿಯಲಿದೆ. ಆದರೆ ಇದ್ದಲ್ಲಿಯೇ ಸುಂದರ ಬದುಕು ಕಟ್ಟಿಕೊಳ್ಳಲು ಭಿನ್ನ ಆಲೋಚನೆ ಹಾಗೂ ಗಟ್ಟಿ ಮನಸ್ಸು ಬೇಕು ಅನ್ನೋದು ಸ್ಪಷ್ಟ.
ಕೆಲಸ ಕಳೆದುಕೊಂಡು ಡೆಲಿವರಿ ಬಾಯ್ ಆದ ಟೆಕ್ಕಿ, ಬೀದಿಗೆ ಬಿದ್ದು ಬೀದಿಯಿಂದ ಕಟ್ಟಿದ ಜೀವನ ನೆನೆದು ಭಾವುಕ!
ಅಣ್ಣಾದೊರೆ ಹೇಳಿಕೊಂಡಿರುವ ರೀತಿ, ನನ್ನ ತಂದೆ ಆಟೋ ಚಾಲಕ. ಬಡತನ ಕಾರಣ ನನ್ನ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ನಾನು ಉತ್ತಮ ಅಂಕಗಳಿಸಿದ್ದರು ಶಿಕ್ಷಣದಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾನೂ ಕೂಡ ಆಟೋ ಚಕ್ರದ ಮೇಲೆ ಬದುಕು ಆರಂಭಿಸಬೇಕಾಯಿತು ಎಂದು ಅಣ್ಣಾದೊರೇ ಹೇಳಿಕೊಂಡಿದ್ದಾರೆ. ಮನೆ, ಪೋಷಕರು ನೋಡಿಕೊಳ್ಳಲು ಆಟೋ ಚಾಲನೆ ಅನಿವಾರ್ಯವಾಗಿತ್ತು. ಆದರೆ ನನಗೆ ಉದ್ಯಮಿಯಾಗುವ ಕನಸು, ತುಡಿತ ಹಾಗೇ ಇತ್ತು ಎಂದಿದ್ದಾರೆ.
ಆಟೋ ರಿಕ್ಷಾ ಬಿಟ್ಟು ಕೆಳಗೆ ಇಳಿಯುವಂತ ಆರ್ಥಿಕ ಪರಿಸ್ಥಿತಿ ಇರಲಿಲ್ಲ. ಹೀಗಾಗಿ ಆಟೋದಲ್ಲೇ ಕುಳಿತು ಭಿನ್ನವಾಗಿ ಯೋಚಿಸಲು ಆರಂಭಿಸಿದೆ. ಮಾರ್ಕೆಟಿಂಗ್ ಮ್ಯಾನೇಜರ್ ರೀತಿ ಯೋಚಿಸಿ, ಕೆಲಸ ಮಾಡಲು ನಿರ್ಧರಿಸಿದೆ. ಆಟೋದಲ್ಲಿ ಬರುವ ಪ್ರಯಾಣಿಕರು ನನ್ನಿಂದ ಏನು ನಿರೀಕ್ಷಿಸುತ್ತಾರೆ? ಈ ಕುರಿತು ಪ್ರಯಾಣಿಕರಲ್ಲಿ ಕೇಳುತ್ತಿದ್ದೆ. ಈ ವೇಳೆ ಸುರಕ್ಷತೆ, ಗೌರವ ಸೇರಿದಂತೆ ಕೆಲ ಉತ್ತರಗಳನ್ನು ಪ್ರಯಾಣಿಕರು ನೀಡಿದ್ದರು ಎಂದು ತನ್ನ ಸಾಧನೆ ಪಥ ಕುರಿತು ವಿವರಿಸಿದ್ದಾನೆ.
ಒಂದು ಘಟನೆ ಬಳಿಕ ನಾನು ಆಟೋ ರಿಕ್ಷಾದಲ್ಲಿ ನ್ಯೂಸ್ ಪೇಪರ್ ಇಡಲು ಆರಂಭಿಸಿದೆ. ಕೆಲವರು ಓದುತ್ತಿದ್ದರು. ಹೆಚ್ಚಿನವರು ಫೋನ್‌ನಲ್ಲಿ ಬ್ಯೂಸಿಯಾಗಿರುತ್ತಿದ್ದರು. ಹೀಗಾಗಿ ಈಗನ ಜನರೇಶನ್ ಇದೀಗ ಫೋನ್ ಮೂಲಕವೇ ಎಲ್ಲವನ್ನೂ ಓದುತ್ತಾರೆ, ನೋಡುತ್ತಾರೆ. ಹೀಗಾಗಿ ಆಟೋದಲ್ಲಿ ಉಚಿತ ವೈಫೈ ಸಂಪರ್ಕ ನೀಡಿದೆ. ಇದು ಕೆಲ ಬದಲಾವಣೆ ತಂದಿತು. ಆಟೋದಲ್ಲಿ ಪ್ರಯಾಣಿಕರು ಉಚಿತ ವೈಫೈ ಅನುಭವಿಸಿ ಸಂತೋಷ ಪಟ್ಟಿದ್ದಾರೆ.
ಹಲವರು ಸೆಲ್ಫಿ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ನಾನು 9 ಭಾಷೆಯಲ್ಲಿ ಪ್ರಯಾಣಿಕರ ಜೊತೆ ಮಾತನಾಡುತ್ತೇನೆ. ಹೀಗಾಗಿ ಬೇರೆ ರಾಜ್ಯದಿಂದ ಬಂದವವರು ಸುಲಭವಾಗಿ ನನ್ನ ಜೊತೆ ಮಾತನಾಡುತ್ತಾರೆ. ಅವರ ಕತೆಗಳನ್ನು ಹೇಳುತ್ತಾರೆ. ಇದೇ ವೇಳೆ ಸ್ಕ್ರಾನ್ ಪೇ, ಕಾರ್ಡ್ ಸ್ವೈಪ್ ಮೂಲಕವೂ ಹಣ ಪಡೆಯುವ ವಿಧಾನ ಗ್ರಾಹಕರಿಗೆ ನೆರವಾಗಿತ್ತು. ಆಟೋದಲ್ಲಿ ಐಪ್ಯಾಡ್ ಫಿಕ್ಸ್ ಮಾಡಿ ನೆಟ್‌ಫ್ಲಿಕ್ಸ್ ಹಾಕಿಸಿಕೊಂಡೆ. ಹಲವು ಸೀರಿಸ್ ನೋಡುತ್ತಾ, ಇನ್ನೊಂದು ರೌಂಡ್ ಹೋಗೋಣ, ಈ ವೇಳೆ ಸೀರಿಸ್ ಮುಗಿಸುತ್ತೇನೆ ಎಂದವರೂ ಇದ್ದಾರೆ.
ಕ್ಯಾನ್ಸರ್ ಸೋಲಿಸಿ 17ನೇ ವಯಸ್ಸಿಗೆ ಕೆಲಸ ಆರಂಭಿಸಿ ವಿಮಾನಯಾನ ಸಂಸ್ಥೆಯ ಒಡತಿಯಾದ ಕನಿಕಾ ಯಶಸ್ಸಿನ ಕಥೆ!
ಇದೇ ವೇಳೆ ನನ್ನ ಆಟೋದಲ್ಲಿ 40 ರೈಡ್ ಪೂರೈಸಿದವರಿಗೆ 1,000 ರೂಪಾಯಿ ಬಹಮಾನ ಘೋಷಿಸಿದ್ದೇನೆ. ನನಗೊಬ್ಬ ಗೆಳೆಯ ಸಿಕ್ಕಿದ್ದಾನೆ ಎಂದು ಹಲವು ಪ್ರಯಾಣಿಕರು ಹೇಳಿದ್ದಾರೆ. ನಾನೊಬ್ಬ ಉದ್ಯಮಿಯಾಗಬೇಕು ಅನ್ನೋ ಕನಸು ಪೂರೈಸಿಲ್ಲ ಅನ್ನೋ ಕೊರಗು ನನಗಿಲ್ಲ. ನನ್ನ ಪರಿಸ್ಥಿತಿ, ಸಂದರ್ಭವನ್ನೇ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡಿದ್ದೇನೆ. ಹಲವರು ಕರೆ ಮಾಡುತ್ತಾರೆ. ನನ್ನ ಆಟೋವನ್ನೇ ಬುಕ್ ಮಾಡುತ್ತಾರೆ. ಇತರ ಉದ್ಯಮಿಗಳಂತೆ ನಾನೂ ಬದುಕಿನಲ್ಲಿ ಸಣ್ಣ ಮಟ್ಟಿನ ಯಶಸ್ಸು, ನಗು ಕಂಡಿದ್ದೇನೆ ಎಂದು ಅಣ್ಣಾದೊರೈ ತನ್ನ ಬದಕಿನ ಕತೆ ವಿವರಿಸಿದ್ದಾರೆ.