
ನವದೆಹಲಿ: ಆಫ್ರಿಕಾದಿಂದ ಭಾರತಕ್ಕೆ ತರಲಾಗಿರುವ ಚೀತಾಗಳಲ್ಲಿ ಬೆಳವಣಿಗೆಯಾಗುತ್ತಿರುವ ತುಪ್ಪಳದ ಕಾರಣದಿಂದಾಗಿ ಅವು ಮಾರಣಾಂತಿಕ ಸೋಂಕಿಗೆ ತುತ್ತಾಗಿ ಸಾವಿಗೀಡಾಗುತ್ತಿವೆ ಎಂದು ಚೀತಾ ಯೋಜನೆಯ ತಜ್ಞರು ಹೇಳಿದ್ದಾರೆ. ಅಲ್ಲದೇ ಈ ತುಪ್ಪಳವನ್ನು ಶೇವ್ ಮಾಡುವ ಮೂಲಕ ಚೀತಾಗಳನ್ನು ಕಾಪಾಡಿಕೊಳ್ಳಬಹುದು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ಈ ಸಮಯದಲ್ಲಿ ಆಫ್ರಿಕಾದಲ್ಲಿ ಚಳಿಗಾಲ ಆರಂಭವಾಗುವುದರಿಂದ ಅದರಿಂದ ರಕ್ಷಣೆ ಪಡೆದುಕೊಳ್ಳಲು ಚೀತಾಗಳು ಈ ತುಪ್ಪಳವನ್ನು ಬೆಳೆಸಿಕೊಳ್ಳುತ್ತವೆ. ಆದರೆ ಇದು ಭಾರತದಲ್ಲಿ ಅವುಗಳಿಗೆ ಸೋಂಕಿಗೆ ಕಾರಣವಾಗುತ್ತಿದೆ. ಚೀತಾಗಳು ತಮ್ಮ ಹಿಂಗಾಲುಗಳ ಮೇಲೆ ಕುಳಿತಾಗ ಬೆನ್ನುಮೂಳೆಯ ಮೂಲಕ ಈ ಸೋಂಕು ಕೆಳಭಾಗದವರೆಗೂ ಹರಿಯುವುದರಿಂದ ಸೋಂಕು ಹೆಚ್ಚಾಗಿ ಸಾವಿಗೀಡಾಗುತ್ತಿವೆ. ಆದರೆ ಉದ್ದಕೂದಲು ಹೊಂದಿಲ್ಲದ ಚೀತಾಗಳು ಈ ಸಮಸ್ಯೆಗೆ ತುತ್ತಾಗಿಲ್ಲ ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.
5 ತಿಂಗಳಲ್ಲಿ 9 ಚೀತಾ ಸಾವು
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಿನ್ನೆ ಮತ್ತೊಂದು ಚೀತಾ ಸಾವನ್ನಪ್ಪಿತ್ತು. ಇದರೊಂದಿಗೆ ಕಳೆದ ಮಾರ್ಚ್‌ನಿಂದ ಈವರೆಗೆ ಸಾವನ್ನಪ್ಪಿದ ಚೀತಾಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬುಧವಾರ ಮುಂಜಾನೆ ಧಾತ್ರಿ ಎಂಬ ಹೆಣ್ಣು ಚೀತಾ ಶವವಾಗಿ ಪತ್ತೆಯಾಗಿದೆ. ಇದರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಚೀತಾದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಈಗ ಸಾವಿಗೆ ತುಪ್ಪಳ ಹೆಚ್ಚಾಗಿ ಉಂಟಾದ ಸೋಂಕು ಕಾರಣ ಎಂದು ತಜ್ಞರು ಹೇಳುತ್ತಿದ್ದಾರೆ.
Breaking: ಮಧ್ಯಪ್ರದೇಶದಲ್ಲಿ ಮತ್ತೊಂದು ಚೀತಾ ಮರಣ ಈವರೆಗೂ 9 ಸಾವು!
ಇದೀಗ ಕುನೋ ಅರಣ್ಯದಲ್ಲಿ 7 ಗಂಡು, 6 ಹೆಣ್ಣು ಚೀತಾ ಮತ್ತು 1 ಹೆಣ್ಣು ಚೀತಾ ಮರಿ ಸೇರಿದಂತೆ ಒಟ್ಟು 14 ಚೀತಾಗಳಿದ್ದು 1 ಹೆಣ್ಣು ಚೀತಾ ಅರಣ್ಯದಿಂದ ಆಚೆ ಸಾಗಿದ್ದು ಅದನ್ನು ತೀವ್ರ ನಿಗಾದಲ್ಲಿರಿಸಲಾಗಿದೆ. ವನ್ಯಜೀವಿ ಪಶುವೈದ್ಯರು ಹಾಗೂ ನಮೀಬಿಯಾದ ತಜ್ಞರ ತಂಡವು ಅವುಗಳ ಆರೋಗ್ಯದ ಮೇಲ್ವಿಚಾರಣೆಯನ್ನು ನಿಯಮಿತವಾಗಿ ನಡೆಸುತ್ತಿದೆ. ಈ ಬಗ್ಗೆ ಮಾತನಾಡಿರುವ ಚೀತಾ ಯೋಜನೆಯ ತಜ್ಞರು ಭಾರೀ ಮಳೆ, ವಿಪರೀತ ಶಾಖ ಮತ್ತು ತೇವಾಂಶ ತೊಂದರೆಯುಂಟು ಮಾಡಬಹುದು. ಚೀತಾಗಳ ಕುತ್ತಿಗೆಗೆ ಅಳವಡಿಸಲಾದ ರೇಡಿಯೋ ಕಾಲರ್‌ಗಳಿಂದಲೂ ಹೆಚ್ಚಿನ ತೊಡಕಾಗಬಹುದು ಎಂದಿದ್ದಾರೆ. ಕಳೆದ ಸೆಪ್ಟೆಂಬರ್ ಮತ್ತು ಫೆಬ್ರ ವರಿಯಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ 20 ಚೀತಾಗಳಲ್ಲಿ ಒಂದು ಚೀತಾ 4 ಮರಿ ಹಾಕಿ ಒಟ್ಟು ಚೀತಾಗಳ ಸಂಖ್ಯೆ 24ಕ್ಕೆ ಏರಿಕೆಯಾಗಿತ್ತು. ಇದರಲ್ಲಿ 3 ಮರಿಗಳು ಸೇರಿ 6 ದೊಡ್ಡ ಚೀತಾಗಳು ಈವರೆಗೆ ಸಾವನ್ನಪ್ಪಿವೆ. ಇದೀಗ 15 ಚೀತಾ ಉಳಿದುಕೊಂಡಿವೆ.
ಸರಣಿ ಸಾವು ಹಿನ್ನೆಲೆ: ಚೀತಾಗಳ ರೇಡಿಯೋ ಕಾಲರ್ ತೆಗೆದು ಆರೋಗ್ಯ ತಪಾಸಣೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ