ಬಾಲ್ಯವಿವಾಹ ತಡೆಗೆ ಆಹ್ವಾನ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ| ರಾಜಸ್ಥಾನ ಸರ್ಕಾರದ ಹೊಸ ಆದೇಶ
ಜೈಪುರ(ಏ.10): ಬಾಲ್ಯ ವಿವಾಹ ತಡೆಗೆ ರಾಜಸ್ಥಾನ ಸರ್ಕಾರ ಕಟ್ಟುನಿಟ್ಟಿನ ಅದೇಶ ಹೊರಡಿಸಿದೆ. ಮದುವೆಯ ಆಹ್ವಾನ ಪತ್ರಿಕೆಯಲ್ಲಿ ವರ ಮತ್ತು ವಧುವಿನ ಹೆಸರನ್ನು ಪ್ರಕಟಿಸುವುದರ ಜೊತೆಗೆ ಅವರ ಜನ್ಮ ದಿನಾಂಕವನ್ನೂ ನಮೂದಿಸಬೇಕು ಎಂದು ಅದು ಸೂಚಿಸಿದೆ.
ಈ ಬಾರಿ ಮೇ 14ರಂದು ಅಕ್ಷಯ ತೃತೀಯಾ ಇದೆ. ಬಳಿಕ ಮೇ 26ರಂದು ಶುಕ್ಲ ಪೂರ್ಣಿಮೆ ಇದೆ. ಇವೆರಡು ಶುಭ ದಿನವಾಗಿರುವ ಕಾರಣ ಹೆಚ್ಚಿನ ಮದುವೆ ಸಮಾರಂಭಗಳು ಅಂದೇ ಜರುತ್ತವೆ. ಈ ವೇಳೆ ಬಾಲ್ಯ ವಿವಾಹದ ಸಾಧ್ಯತೆಯೂ ಹೆಚ್ಚಿರುತ್ತದೆ. ಹೀಗಾಗಿ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.
ಬಾಲ್ಯ ವಿವಾಹ ಅಪರಾಧ ಎಂಬುದನ್ನು ಜನರು ಅರಿತಿರಬೇಕು. ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸುವಾಗ ಜನ್ಮದಿನಾಂಕ ಸರ್ಟಿಫಿಕೇಟ್ ನೀಡಬೇಕು. ಜನ್ಮದಿನಾಂಕವು ಲಗ್ನಪತ್ರಿಕೆಯಲ್ಲಿ ಕಡ್ಡಾಯವಾಗಿ ನಮೂದಾಗಿರಬೇಕು.
ಒಂದು ವೇಳೆ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೆ, ಕುಟುಂಬಸ್ಥರು, ಆಯೋಜಕರು, ಅಡುಗೆಭಟ್ಟರು, ಪುರೋಹಿತರು ಹಾಗೂ ಮದುವೆಯ ಅತಿಥಿಗಳೆಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.