Winter Session: ನೀವಾಗೇ ಬದಲಾಗಿ, ಇಲ್ಲದಿದ್ದರೆ ದೊಡ್ಡ ಬದಲಾವಣೆಯಾಗುತ್ತದೆ: ಸಂಸದರಿಗೆ ಮೋದಿ ವಾರ್ನಿಂಗ್!

By Suvarna NewsFirst Published Dec 7, 2021, 1:01 PM IST
Highlights

* ಚಳಿಗಾಲದ ಅಧಿವೇಶನಕ್ಕೆ ಗೈರಾದ ಬಿಜೆಪಿ ಸಂಸದರು

* ಬಿಜೆಪಿ ಸಂಸದರ ನಡೆಗೆ ಮೋದಿ ಕಿಡಿ

* ಗೈರಾದ ನಾಯಕರಿಗೆ ವರ್ತನೆ ಬದಲಾಯಿಸಿಕೊಳ್ಳುವಂತೆ ಖಡಕ್ ವಾರ್ನಿಂಗ್

ನವದೆಹಲಿ(ಡಿ.07): ಸಂಸತ್ ಅಧಿವೇಶನದ ವೇಳೆ ಸಂಸದರ ಗೈರುಹಾಜರಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಠಿಣ ನಿಲುವು ತಳೆದಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಎಲ್ಲ ಸಂಸದರು ಸದನದಲ್ಲಿಯೇ ಇರಬೇಕು ಎಂದು ಹೇಳಿದ್ದಾರೆ. ಬಿಲ್ ಇದೆಯೋ ಇಲ್ಲವೋ, ಆದರೆ ಸಂಸದರು ಸಂಸತ್ತಿನಲ್ಲಿರಬೇಕೆಂದು ಎಚ್ಚರಿಸಿದ್ದಾರೆ. ಅಲ್ಲದೇ ಸಂಸದರು ತಮ್ಮಲ್ಲಿ ಬದಲಾವಣೆ ತರಬೇಕು, ಇಲ್ಲದಿದ್ದರೆ ಬದಲಾವಣೆ ತಾನಾಗಿಯೇ ಆಗುತ್ತದೆ ಎಂದು ಪ್ರಧಾನಿ ಕಟ್ಟುನಿಟ್ಟಾಗಿ ಹೇಳಿದರು. ಅಲ್ಲದೇ 'ದಯವಿಟ್ಟು ಸಂಸತ್ತಿನಲ್ಲಿ ಮತ್ತು ಸಭೆಗಳಲ್ಲಿ ನಿಯಮಿತವಾಗಿ ಹಾಜರಾಗಿ. ಮಗುವಿನಂತೆ ನಿರಂತರವಾಗಿ ಅದರ ಬಗ್ಗೆ ಒತ್ತಡ ಹೇರುವುದು ನನಗೆ ಒಳ್ಳೆಯದನಿಸುವುದಿಲ್ಲ. ನೀವು ನಿಮ್ಮನ್ನು ಬದಲಾಯಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬದಲಾವಣೆಗಳು ಸಂಭವಿಸುತ್ತವೆ' ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪ್ರತಿಪಕ್ಷಗಳು ನಿರಂತರವಾಗಿ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ಸಮಯದಲ್ಲಿ ಪ್ರಧಾನಿಯವರ ಈ ಕಠಿಣ ನಿಲುವು ಮುನ್ನೆಲೆಗೆ ಬಂದಿದೆ. ನಾಗಾಲ್ಯಾಂಡ್ ಗೋಲಿಬಾರ್, ಸಂಸದರ ಅಮಾನತು ಸೇರಿದಂತೆ ವಿವಿಧ ವಿಷಯಗಳಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ಸುತ್ತುವರೆದಿವೆ. ಈ ಹಿಂದೆ ಸಂಸತ್ತಿನ ಮುಂಗಾರು ಅಧಿವೇಶನದ ವೇಳೆಯೂ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಗೈರುಹಾಜರಿಯ ಬಗ್ಗೆ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. 

ಇನ್ನು ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಹಿರಿಯ ಸಚಿವರು ಉಪಸ್ಥಿತರಿದ್ದರು. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ಹಾಜರಿದ್ದರೆಂಬುವುದು ಉಲ್ಲೇಖನೀಯ.

ಇನ್ನು ಮುಂಗಾರು ಅಧಿವೇಶನದ ವೇಳೆ, ಮೇಲ್ಮನೆಯಲ್ಲಿ ಮಸೂದೆ ಅಂಗೀಕಾರವಾದಾಗ ಹಲವು ಸಂಸದರು ಹಾಜರಿರಲಿಲ್ಲ, ಈ ಬಗ್ಗೆ ಪ್ರಧಾನಿ ಕಟ್ಟುನಿಟ್ಟಿನ ನಿಲುವು ತಳೆದಿದ್ದರು. ಅಷ್ಟೇ ಅಲ್ಲ, ಸಂಸದೀಯ ಪಕ್ಷದ ಸಭೆಯಲ್ಲಿ ರಾಜ್ಯಸಭೆಗೆ ಗೈರು ಹಾಜರಾಗಿರುವ ಸಂಸದರ ಹೆಸರುಗಳನ್ನೂ ಕೇಳಿದ್ದರು ಎಂದು ಮೂಲಗಳು ತಿಳಿಸಿವೆ. 

ಸರ್ಕಾರಕ್ಕೆ ತಲೆನೋವಾದ ಹನ್ನೆರಡು ಸಂಸದರ ಅಮಾನತು

ಈ ಅಧಿವೇಶನದಿಂದ ಈಗಾಗಲೇ 12 ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ. ಹೀಗಿರುವಾಗ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ನಿರಂತರವಾಗಿ ಕಿಡಿ ಕಾರುತ್ತಿವೆ ಎಂಬುವುದೂ ಉಲ್ಲೇಖನೀಯ. ಇನ್ನು ಈ ಬಗ್ಗೆ ಮಾತನಾಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಸಂಸದರ ವರ್ತನೆ ಇಂತಹ ಕ್ರಮ ಕೈಗೊಳ್ಳುವಂತೆ ಮಾಡಿದೆ. ಆದರೆ ಅಮಾನತುಹಗೊಂಡ ಸಂಸದರು ಕ್ಷಮೆ ಯಾಚಿಸಿದರೆ ಅಮಾನತು ಹಿಂತೆಗೆದುಕೊಳ್ಳುವ ಬಗ್ಗೆ ಪರಿಗಣಿಸಲು ಸಿದ್ಧ ಎಂದು ಹೇಳಿದ್ದರು.

ಹೀಗಿದ್ದರೂ ಅಮಾನತುಗೊಂಡ ಸಂಸದರು ಕ್ಷಮೆ ಯಾವಚಿಸುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ. ಅಲ್ಲದೇ ತಮ್ಮನ್ನು ಸಂಸತ್ತಿನಿಂದ ಅಮಾನತುಗೊಳಿಸಿರುವುದು ಸದನದ ನಿಯಮಗಳಿಗೆ ವಿರುದ್ಧವಾಗಿದ್ದು, ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಕರೆದಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನವು ನವೆಂಬರ್ 29 ರಂದು ಪ್ರಾರಂಭವಾಗಿದ್ದು, ಡಿಸೆಂಬರ್ 23 ರವರೆಗೆ ಮುಂದುವರಿಯುತ್ತದೆ, ಆದರೆ ಉಭಯ ಸದನಗಳು ಗದ್ದಲದಿಂದಾಗಿ ಇಲ್ಲಿಯವರೆಗೆ ನಿರಂತರವಾಗಿ ಮುಂದೂಡಿಕೆಗೆ ಸಾಕ್ಷಿಯಾಗಿದೆ. 

click me!