ಕೇವಲ 1.50 ರೂಪಾಯಿಗಾಗಿ ಗ್ಯಾಸ್‌ ಏಜೆನ್ಸಿ ವಿರುದ್ಧ 7 ವರ್ಷ ಹೋರಾಟ ಮಾಡಿ ಯಶಸ್ಸು ಕಂಡ ಗ್ರಾಹಕ!

By Santosh Naik  |  First Published Jan 4, 2025, 4:33 PM IST

ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ₹1.50 ಬಾಕಿ ಹಣಕ್ಕಾಗಿ 7 ವರ್ಷಗಳ ಕಾಲ ಗ್ಯಾಸ್ ಏಜೆನ್ಸಿ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದಾರೆ. ಗ್ರಾಹಕ ನ್ಯಾಯಾಲಯವು ಗ್ಯಾಸ್ ಏಜೆನ್ಸಿಗೆ ಬಡ್ಡಿಸಹಿತ ಹಣ ವಾಪಸ್ ನೀಡುವಂತೆ ಮತ್ತು ಪರಿಹಾರವಾಗಿ ಹಣ ನೀಡುವಂತೆ ಆದೇಶಿಸಿದೆ.


ಭೋಪಾಲ್‌ (ಜ.4): ಈಗಿನ ಬ್ಯುಸಿ ಜಗತ್ತಿನಲ್ಲಿ ಒಂದೂವರೆ ರೂಪಾಯಿ ಬಗ್ಗೆ ಯಾರೂ ಗಮನ ನೀಡೋದೇ ಇಲ್ಲ. ಹಾಗೇನಾದರೂ ಬಸ್‌ನಲ್ಲಿ, ಟ್ರೇನ್‌ನಲ್ಲಿ ಟಿಕೆಟ್‌ಕೊಳ್ಳುವಾಗ ಒಂದೂವರೆ ರೂಪಾಯಿ ಹಣವನ್ನು ಚಿಲ್ಲರೆ ಇಲ್ಲದೇ ಇದ್ದಾಗ ರೌಂಡ್‌ಆಫ್‌ ಕೂಡ ಮಾಡ್ತಾರೆ. ಆದರೆ, ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯ ಚಕ್ರೇಶ್‌ ಜೈನ್‌ ಎನ್ನುವ ವ್ಯಕ್ತಿ ಬರೀ 1.50 ರೂಪಾಯಿಗಾಗಿ ಬರೋಬ್ಬರಿ 7 ವರ್ಷಗಳ ಕಾಲ ಗ್ಯಾಸ್‌ ಏಜೆನ್ಸಿ ವಿರುದ್ಧ ಹೋರಾಟ ಮಾಡಿದ್ದಾರೆ. ಇದು ಸಣ್ಣ ಅಮೌಂಟ್‌ ಆಗಿರಬಹುದು. ಆದರೆ, ಗ್ರಾಹಕರ ಹಕ್ಕುಗಳ ವಿಚಾರದಲ್ಲಿ ಇದು ದೊಡ್ಡ ಗೆಲುವು ಎಂದಿದ್ದಾರೆ. ಇಷ್ಟು ಸಣ್ಣ ಮೊತ್ತಕ್ಕಾಗಿ ಅವರು ಗ್ಯಾಸ್‌ ಏಜೆನ್ಸಿಯನ್ನು ಕೋರ್ಟ್‌ ಮೆಟ್ಟಿಲಿಗೆ ಏರಿಸಿದ್ದಾರೆ. ಕೇಸ್‌ನ ವಿಚಾರದಲ್ಲಿ ಅತ್ಯಂತ ಬದ್ಧತೆಯಿಂದ ನಡೆದುಕೊಂಡಿದ್ದು ಚಕ್ರೇಶ್‌ ಜೈನ್‌ಗೂ ಫಲ ನೀಡಿದ್ದು, ಗ್ರಾಹಕ ನ್ಯಾಯಾಲಯನ ಇವರ ಪರವಾಗಿಯೇ ತೀರ್ಪು ನೀಡಿದೆ. ತೀರ್ಪಿನಲ್ಲಿ ಬರುವ ಹಣಕ್ಕಿಂತ ಗ್ಯಾಸ್‌ ಏಜೆನ್ಸಿ ವಿರುದ್ಧ ಗೆದ್ದಿದ್ದು ಚಕ್ರೇಶ್‌ಗೆ ಖುಷಿ ನೀಡಿದೆ.

2017ರ ನವೆಂಬರ್‌ 14 ರಂದು ಭಾರತ್‌ ಗ್ಯಾಸ್‌ ಏಜೆನ್ಸಿಯಿಂದ ಚಕ್ರೇಶ್‌ ಜೈನ್‌ ಗ್ಯಾಸ್‌ಬುಕ್‌ ಮಾಡಿದ್ದರು. ಸಿಲಿಂಡರ್‌ನ ಬಿಲ್‌ 753.50 ರೂಪಾಯಿ ಆಗಿತ್ತು. ಆದರೆ, ಗ್ಯಾಸ್‌ ಡೆಲಿವರಿ ಮಾಡಲು ಬಂದಿದ್ದ ವ್ಯಕ್ತಿ 755 ರೂಪಾಯಿ ಕಲೆಕ್ಟ್‌ ಮಾಡಿದ್ದ. ಚಿಲ್ಲರೆ ಇಲ್ಲ ಎನ್ನುವ ಕಾರಣಕ್ಕೆ ಒಂದೂವರೆ ರೂಪಾಯಿ ಬಾಕಿ ಹಣವನ್ನು ಕೊಡಲು ನಿರಾಕರಿಸಿದ್ದ. ಆದರೆ, ಚಕ್ರೇಶ್‌ ಜೈನ್‌ ಈ ಹಣವನ್ನು ಕೊಡಲೇಬೇಕು ಎಂದು ಹೇಳಿದಾಗ, ಡೆಲಿವರಿ ಏಜೆಂಟ್‌, ಹಾಗಿದ್ದಲ್ಲಿ ನೀವು ಏಜೆನ್ಸಿಯನ್ನೇ ಸಂಪರ್ಕಿಸಿ ಎಂದು ತಿಳಿಸಿದ್ದ. ತಡಮಾಡದೇ ಚಕ್ರೇಶ್‌ ಜೈನ್‌, ಗ್ಯಾಸ್‌ ಏಜನ್ಸಿ ಹಾಗೂ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಆ ಮೂಲಕ 7 ವರ್ಷದ ಹೋರಾಟ ಆರಂಭವಾಗಿತ್ತು.

ಚಕ್ರೇಶ್‌ ಜೈನ್ ನೀಡಿದ ಆರಂಭಿಕ ದೂರಿಗೆ ಮೊದಲು ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಬಳಿಕ 2019ರ ಜುಲೈ 15 ರಂದು ಜಿಲ್ಲಾ ಗ್ರಾಹಕ ನ್ಯಾಯಲಯದಲ್ಲಿ ಚಕ್ರೇಶ್‌ ಜೈನ್‌ ಕೇಸ್‌ ದಾಖಲು ಮಾಡಿದ್ದರು. ಗ್ಯಾಸ್‌ ಏಜೆನ್ಸಿ ಇದೊಂದು ಕ್ಷುಲ್ಲಕ ಪ್ರಕರಣ ಎಂದಿದ್ದಲ್ಲದೆ, ಕೇಸ್‌ ದಾಖಲು ಮಾಡಿದ್ದ ಚಕ್ರೇಶ್‌ ಜೈನ್‌ರನ್ನು ಅಪಹಾಸ್ಯ ಮಾಡಿತ್ತು. ಆದರೆ, ಚಕ್ರೇಶ್‌ ಮಾತ್ರ ತನ್ನ ವಕೀಲ ರಾಜೇಶ್‌ ಸಿಂಗ್‌ ಬೆಂಬಲದೊಂದಿಗೆ ಈ ಕೇಸ್‌ನಲ್ಲಿ ಅಚಲವಾಗಿ ನಿಂತಿದ್ದರು.

Tap to resize

Latest Videos

ಅಂದಾಜು ಐದು ವರ್ಷಗಳ ವಿಚಾರಣೆಯ ಬಳಿಕ, ಈ ವಿಚಾರದಲ್ಲಿ ಗ್ಯಾಸ್‌ ಏಜೆನ್ಸಿ ಸೇವೆಯಲ್ಲಿ ನಿಲ್ಷಕ್ಯ ತೋರಿದೆ ಎಂದು ಹೇಳಿದ್ದಲ್ಲದೆ, ಮಹತ್ವದ ತೀರ್ಪು ಕೂಡ ಪ್ರಕಟಿಸಿದೆ. ಎರಡು ತಿಂಗಳ ಒಳಗಾಗಿ ಚಕ್ರೇಶ್‌ ಜೈನ್‌ ಅವರ 1.50 ರೂಪಾಯಿ ಹಣವನ್ನು ವಾರ್ಷಿಕ ಶೇ. 6ರ ಬಡ್ಡಿಯೊಂದಿಗೆ ವಾಪಾಸ್‌ ನೀಡಬೇಕು. ಅದರೊಂದಿಗೆ ಜೈನ್‌ ಅವರ ಮಾನಸಿಕ, ಆರ್ಥಿಕ ಮತ್ತು ಸೇವಾ ಸಂಬಂಧಿತ ಸಂಕಷ್ಟಗಳಿಗೆ ಪರಿಹಾರವಾಗಿ 2,000 ರೂಪಾಯಿಗಳನ್ನು ಮತ್ತು ಅವರ ಕಾನೂನು ವೆಚ್ಚವನ್ನು ಭರಿಸಲು ಇನ್ನೊಂದು 2,000 ರೂಪಾಯಿಗಳನ್ನು ಪಾವತಿಸಲು ಏಜೆನ್ಸಿಗೆ ಸೂಚಿಸಲಾಗಿದೆ.

ಖಾಸಗಿ ಬಸ್‌ನಲ್ಲಿ ತಿಗಣೆ ಕಾಟ, ಗೀತಾ ಸೀರಿಯಲ್‌ ನಟನ ಪತ್ನಿಗೆ 1.29 ಲಕ್ಷ ನೀಡುವಂತೆ ಕೋರ್ಟ್‌ ಆದೇಶ!

ಈ ಪ್ರಕರಣವು ಗ್ರಾಹಕರ ಹಕ್ಕುಗಳ ಮಹತ್ವವನ್ನು ಒತ್ತಿಹೇಳುತ್ತದೆ. ಚಕ್ರೇಶ್ ಜೈನ್ ಅವರ ಹೋರಾಟವು ವ್ಯವಹಾರಗಳಿಗೆ ಎಚ್ಚರಿಕೆಯಾಗಿ ಕಾರ್ಯನಿರ್ವಹಿಸುತ್ತದೆ, ಗ್ರಾಹಕರನ್ನು ನ್ಯಾಯಯುತವಾಗಿ ಪರಿಗಣಿಸುವ ಮತ್ತು ನೈತಿಕ ಅಭ್ಯಾಸಗಳನ್ನು ಎತ್ತಿಹಿಡಿಯುವ ಅವರ ಜವಾಬ್ದಾರಿಯನ್ನು ನೆನಪಿಸುತ್ತದೆ. “ಇದು ಕೇವಲ 1.50 ರೂ ಆಗಿರಲಿಲ್ಲ; ಇದು ನಮ್ಮ ಹಕ್ಕುಗಳು ಮತ್ತು ಸ್ವಾಭಿಮಾನದ ಹೋರಾಟವಾಗಿತ್ತು," ಜೈನ್ ಹೇಳಿದ್ದಾರೆ.

 

 

50 ಪೈಸೆ ನೀಡದೇ ರೌಂಡ್‌ ಆಫ್‌ ಮಾಡಿದ್ದ ಅಂಚೆ ಇಲಾಖೆಗೆ ಶೇ.2999900 ರಷ್ಟು ದಂಡ ವಿಧಿಸಿದ ಕೋರ್ಟ್‌!

click me!