ಕೇಂದ್ರದಿಂದ ‘ನನ್ನ ಪಡಿತರ’ ಆ್ಯಪ್‌ ಬಿಡುಗಡೆ: ಆ್ಯಪ್‌ನಲ್ಲೇನಿರುತ್ತೆ? ಇಲ್ಲಿದೆ ವಿವರ

By Kannadaprabha NewsFirst Published Mar 13, 2021, 7:48 AM IST
Highlights

ಕೇಂದ್ರದಿಂದ ‘ನನ್ನ ಪಡಿತರ’ ಆ್ಯಪ್‌ ಬಿಡುಗಡ| ಒಂದು ದೇಶ, ಒಂದು ಪಡಿತರ ಚೀಟಿ ಯೋಜನೆಗೆ ಅನುಕೂಲ| ಹೊಸ ಆ್ಯಪ್‌ನಲ್ಲಿ ಪಡಿತರ ಕುರಿತ ಎಲ್ಲಾ ಮಾಹಿತಿಯೂ ಲಭ್ಯ

ನವದೆಹಲಿ(ಮಾ.13): ‘ಏಕ ದೇಶ, ಏಕ ಪಡಿತರ ಚೀಟಿ’ ಯೋಜನೆಯನ್ನು ರೂಪಿಸಿರುವ ಕೇಂದ್ರ ಸರ್ಕಾರ ಈಗ ‘ಮೇರಾ ರೇಶನ್‌ ಕಾರ್ಡ್‌’ (ನನ್ನ ಪಡಿತರ ಚೀಟಿ) ಎಂಬ ಮೊಬೈಲ್‌ ಆ್ಯಪ್‌ ಬಿಡುಗಡೆ ಮಾಡಿದೆ.

ಒಂದೇ ಪಡಿತರ ಚೀಟಿ ಇಟ್ಟುಕೊಂಡು ದೇಶದ ಯಾವ ಭಾಗದಲ್ಲಾದರೂ ಪಡಿತರ ಪಡೆಯುವ ಯೋಜನೆ ಇದಾಗಿದೆ. ವಿಶೇಷವಾಗಿ ರಾಜ್ಯದಿಂದ ರಾಜ್ಯಗಳಿಗೆ ವಲಸೆ ಹೋಗುವ ವಲಸಿಗರಿಗೆ ಈ ಆ್ಯಪ್‌ನಿಂದ ನೆರವಾಗಲಿದ್ದು, ಸಮೀಪದ ರೇಶನ್‌ ಅಂಗಡಿಯನ್ನು ಆ್ಯಪ್‌ ಮೂಲಕ ಸುಲಭವಾಗಿ ಗುರುತಿಸಬಹುದಾಗಿದೆ.

ಈ ಕುರಿತಂತೆ ಬಿಡುಗಡೆ ಮಾಡಲಾಗಿರುವ ಆ್ಯಪ್‌ ಈಗ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಲಭ್ಯವಿದೆ. ಶೀಘ್ರದಲ್ಲೇ 14 ಭಾಷೆಗಳಲ್ಲಿ ಲಭ್ಯವಾಗಲಿದೆ. ವಲಸಿಗರು ಹೆಚ್ಚು ಎಲ್ಲಿದ್ದಾರೆ ಎಂದು ಗುರುತಿಸಿ ಭಾಷೆಗಳನ್ನು ನಿರ್ಧರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಕೇಂದ್ರ ಸರ್ಕಾರವು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 81 ಕೋಟಿ ಜನರಿಗೆ ರಿಯಾಯಿತಿ ದರದಲ್ಲಿ ನಾನಾ ರೀತಿಯ ಆಹಾರ ಧಾನ್ಯಗಳನ್ನು ವಿತರಿಸುತ್ತದೆ. ಆದರೆ ವಲಸೆ ಕಾರ್ಮಿಕರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಿದಾಗ ಪಡಿತರ ಪಡೆಯಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲೆಂದೇ ಯಾವುದೇ ವಲಸಿಗ ವ್ಯಕ್ತಿ ದೇಶದ ಯಾವುದೇ ಪಡಿತರ ಅಂಗಡಿಯಿಂದ ಅಗತ್ಯವಿರುವ ಪಡಿತರ ಪಡೆಯಲು ಒಂದು ದೇಶ, ಒಂದು ಪಡಿತರ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ.

ಆ್ಯಪ್‌ನಲ್ಲೇನಿರುತ್ತೆ?:

ಸಮೀಪದ ರೇಶನ್‌ ಅಂಗಡಿ ಎಲ್ಲಿದೆ ಎಂದು ಮಾಹಿತಿ ನೀಡುತ್ತದೆ. ಅಲ್ಲಿ ಯಾವ ಧಾನ್ಯ ಸಿಗಲಿವೆ ಎಂಬುದನ್ನು ನೋಡಬಹುದು. ಇತ್ತೀಚಿನ ವಹಿವಾಟು, ಆಧಾರ್‌ ಸಂಯೋಜನೆ ಮಾಹಿತಿ ಲಭ್ಯವಿರುತ್ತದೆ. ವಲಸಿಗರು ತಮ್ಮ ವಿವರವನ್ನು ಆ್ಯಪ್‌ ಮೂಲಕ ನೀಡಬಹುದು. ಸೇವೆಯ ಪ್ರತಿಕ್ರಿಯೆ/ಸಲಹೆಯನ್ನೂ ನೀಡಬಹುದು.

click me!