ದಿಲ್ಲಿಯಲ್ಲಿ ವೈರಸ್ ನಿಗ್ರಹಕ್ಕೆ ಅಮಿತ್ ಶಾ ಮಾಸ್ಟರ್‌ಪ್ಲಾನ್| ಕೇಜ್ರಿವಾಲ್ ಜತೆ ಸಭೆ ನಡೆಸಿ ನಿರ್ಧಾರ| ಪರೀಕ್ಷೆ ಹೆಚ್ಚಳ, ಚಿಕಿತ್ಸೆಗೆ ರೈಲು ಬೋಗಿ ಸೇರಿ ಅನೇಕ ಕ್ರಮ
ನವದೆಹಲಿ(ಜೂ.15): ಕೊರೋನಾ ಸೋಂಕಿತರ ಸಂಖ್ಯೆ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ರಾಜಧಾನಿ ದೆಹಲಿಯಲ್ಲಿ ವೈರಸ್ ಅಬ್ಬರ ನಿಯಂತ್ರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಖಾಡಕ್ಕೆ ಇಳಿದಿದ್ದು, ಹಲವು ಕ್ರಮಗಳನ್ನು ಪ್ರಕಟಿಸಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಕೊರೋನಾ ಟೆಸ್ಟಿಂಗ್ ಪ್ರಮಾಣವನ್ನು 2 ಪಟ್ಟು, 6 ದಿನದಲ್ಲಿ 3 ಪಟ್ಟು ಏರಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ಕೊರೋನಾ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಹಾಗೂ ಶವಗಳ ನಿರ್ವಹಣೆ ಕುರಿತು ಸುಪ್ರೀಂಕೋರ್ಟ್ ಶುಕ್ರವಾರ ದೆಹಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಅಮಿತ್ ಶಾ ಅವರು ಭಾನುವಾರ ದೆಹಲಿ ಉಪರಾಜ್ಯಪಾಲ ಅನಿಲ್ ಬೈಜಾಲ್ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತಿತರರ ಜತೆ ಸಭೆ ನಡೆಸಿದ್ದಾರೆ. ಅಲ್ಲದೆ ಸೋಮವಾರ ದೆಹಲಿ ಸರ್ವಪಕ್ಷ ನಾಯಕರ ಸಭೆಗೂ ಅಮಿತ್ ಶಾ ನಿರ್ಧರಿಸಿದ್ದಾರೆ.
ದಿಲ್ಲಿ ಕೊರೋನಾ ಬಿಕ್ಕಟ್ಟಿಗೆ ಸಚಿವ ಅಮಿತ್ ಶಾ ಎಂಟ್ರಿ!
ಕಂಟೇನ್ಮೆಂಟ್ ಪ್ರದೇಶಗಳಲ್ಲಿನ ಪ್ರತಿ ಮತಗಟ್ಟೆಯಲ್ಲೂ ಕೊರೋನಾ ಟೆಸ್ಟ್ ನಡೆಸಲಾಗುತ್ತದೆ. ಹಾಟ್‌ಸ್ಪಾಟ್‌ಗಳಲ್ಲಿ ಸಂಪರ್ಕಿತರನ್ನು ಪತ್ತೆ ಹಚ್ಚಲು ಮನೆ ಮನೆಗೂ ತೆರಳಿ ಆರೋಗ್ಯ ಸಮೀಕ್ಷೆ ಕೈಗೆತ್ತಿಕೊಳ್ಳಲಾಗುತ್ತದೆ. ಅದರ ವರದಿ ಒಂದು ವಾರದಲ್ಲಿ ಸಲ್ಲಿಕೆಯಾಗುತ್ತದೆ. ಸೂಕ್ತ ನಿಗಾ ಉದ್ದೇಶದಿಂದ ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಲಾಗುತ್ತದೆ. ದೆಹಲಿಯಲ್ಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಹಾಸಿಗೆಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ ಸಕಲ ಸೌಲಭ್ಯ ಹೊಂದಿದ 500 ರೈಲು ಬೋಗಿಗಳನ್ನು ತಕ್ಷಣವೇ ಒದಗಿಸಲಾಗುತ್ತದೆ. ಇದರಿಂದ ದೆಹಲಿಗೆ 8000 ಹೆಚ್ಚುವರಿ ಹಾಸಿಗೆಗಳು ಲಭಿಸಲಿವೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಕೊರೋನಾದಿಂದ ಮೃತಪಟ್ಟವ್ಯಕ್ತಿಗಳ ಅಂತ್ಯಕ್ರಿಯೆ ಸಂಬಂಧ ಶೀಘ್ರದಲ್ಲೇ ವಿವರವಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು. ಕೊರೋನಾಗೆಂದು ಮೀಸಲಾದ ಆಸ್ಪತ್ರೆಗಳಿಗೆ ಭೇಟಿ ನೀಡಿ ಆರೋಗ್ಯ ವ್ಯವಸ್ಥೆ ಹಾಗೂ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ, ದೆಹಲಿ ಆರೋಗ್ಯ ಇಲಾಖೆ, ಏಮ್ಸ್ ಹಾಗೂ ದೆಹಲಿಯ ಮೂರು ಮಹಾನಗರ ಪಾಲಿಕೆಗಳ ವೈದ್ಯರನ್ನು ಒಳಗೊಂಡ ಜಂಟಿ ತಂಡ ರಚನೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.
ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಶೇ.60ರಷ್ಟುಹಾಸಿಗೆಗಳು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವಂತೆ ನೋಡಿಕೊಳ್ಳಲು ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿ ಕೊರೋನಾ ಚಿಕಿತ್ಸೆ ಹಾಗೂ ಪರೀಕ್ಷೆಗೂ ದರ ನಿಗದಿ ಮಾಡಲಿದೆ. ಸೋಮವಾರದೊಳಗೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ಮಮತಾ ರಾಜಕೀಯ ನಿರಾಶ್ರಿತ ಆಗುವುದು ನಿಶ್ಚಿತ: ಶಾ
ದೆಹಲಿಯಲ್ಲಿ 39 ಸಾವಿರ ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 1200 ಮಂದಿ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಹಾಗೂ ತಮಿಳುನಾಡು ಬಳಿಕ ದೆಹಲಿ 3ನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 40 ಲ್ಯಾಬ್‌ಗಳಿದ್ದು ನಿತ್ಯ 8600 ಕೊರೋನಾ ಟೆಸ್ಟ್ ನಡೆಯುತ್ತಿದೆ.
ಈ ನಡುವೆ, ಅಮಿತ್ ಶಾ ನಡೆಸಿದ ಸಭೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರ ಹಾಗೂ ದೆಹಲಿ ಸರ್ಕಾರಗಳು ಒಗ್ಗೂಡಿ ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ವಿರುದ್ಧ ಹೋರಾಟ ನಡೆಸಲಿವೆ. ಅಮಿತ್ ಶಾ ಅವರು ನಡೆಸಿದ ಸಭೆ ಫಲಪ್ರದವಾಗಿದ್ದು, ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.