ದೇಶದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕ ಸಮಿತಿಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನೇ ದೂರ ಇಡುವ ಅಂಶಗಳನ್ನು ಒಳಗೊಂಡ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿದೆ.
ನವದೆಹಲಿ: ದೇಶದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕ ಸಮಿತಿಯಿಂದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನೇ ದೂರ ಇಡುವ ಅಂಶಗಳನ್ನು ಒಳಗೊಂಡ ಮಸೂದೆಯೊಂದನ್ನು ಕೇಂದ್ರ ಸರ್ಕಾರ ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿದೆ. ವಿಶೇಷವೆಂದರೆ, ಸರ್ಕಾರದ ಈ ನಿರ್ಧಾರ ಕಳೆದ ಮಾರ್ಚ್‌ನಲ್ಲಿ ಇದೇ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಸಂಪೂರ್ಣ ವಿರುದ್ಧವಾಗಿದೆ. ಹೀಗಾಗಿ ಮಸೂದೆಗೆ ವಿಪಕ್ಷಗಳಿಂದ ತೀವ್ರ ವಿರೋಧವಿದೆ. ಅಲ್ಲದೆ, ಇದು 2024ರ ಚುನಾವಣೆಯಲ್ಲಿ ಅಕ್ರಮ ನಡೆಸುವ ಹುನ್ನಾರ ಎಂದು ವಿಪಕ್ಷಗಳು ಆರೋಪಿಸಿವೆ.
ಇತ್ತೀಚೆಗಷ್ಟೇ ದೆಹಲಿ ಸೇವೆಗಳ ಮೇಲಿನ ಅಧಿಕಾರದ ಪ್ರಕರಣದಲ್ಲಿ ಕೇಂದ್ರದ ನಿಲುವಿಗೆ ವಿರುದ್ಧವಾದ ತೀರ್ಪನ್ನು ಸುಪ್ರೀಂಕೋರ್ಚ್ ನೀಡಿತ್ತು. ಅದರ ಬೆನ್ನಲ್ಲೇ ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಸುಗ್ರೀವಾಜ್ಞೆ (Ordinance) ಹೊರಡಿಸಿದ್ದ ಕೇಂದ್ರ ಸರ್ಕಾರ, ಅದನ್ನು ಇತ್ತೀಚೆಗೆ ಮಸೂದೆ ಸ್ವರೂಪದಲ್ಲೂ ಸಂಸತ್‌ನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿತ್ತು. ಇದೀಗ ಸುಪ್ರೀಂಕೋರ್ಟ್ ಅಭಿಮತಕ್ಕೆ ವಿರುದ್ಧವಾದ ನಿರ್ಧಾರವೊಂದನ್ನು ಕೈಗೊಂಡಿದೆ. ಸರ್ಕಾರ ಮಂಡಿಸಿರುವ ಮಸೂದೆ ಅನ್ವಯ, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ನೂತನ ತ್ರಿಸದಸ್ಯ ಸಮಿತಿ ರಚನೆ ಆಗಲಿದೆ. ಸಮಿತಿಗೆ ಪ್ರಧಾನಿ ಮುಖ್ಯಸ್ಥರಾಗಿದ್ದು, ಲೋಕಸಭೆ ವಿಪಕ್ಷ ನಾಯಕ (OppositioN Leader of Loksabha) ಹಾಗೂ ಒಬ್ಬ ಕೇಂದ್ರ ಸಂಪುಟ ಸಚಿವರು ಸದಸ್ಯರಾಗಿರುತ್ತಾರೆ.
ಸುಪ್ರೀಂ ಏನು ಹೇಳಿತ್ತು?:
ಕಳೆದ ಮಾರ್ಚ್‌ನಲ್ಲಿ ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ (Supreme court), ‘ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ನಿಷ್ಪಕ್ಷಪಾತ ರೀತಿಯಲ್ಲಿ ನೇಮಕ ಮಾಡಬೇಕು. ಇಂಥ ನೇಮಕ ಸಂಬಂಧ ಸಂಸತ್ತು ನಿಯಮ ರೂಪಿಸುವವರೆಗೂ ಪ್ರಧಾನಿ, ಲೋಕಸಭೆಯ ವಿಪಕ್ಷ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ರಚಿಸಬೇಕು ಎಂದಿತ್ತು. ಆದರೆ ಇದೀಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನೇ ಹೊರಗಿಟ್ಟು ಅವರ ಬದಲು ಕೇಂದ್ರ ಸಚಿವರನ್ನು ಸಮಿತಿಯಲ್ಲಿ ಸೇರ್ಪಡೆ ಮಾಡಲು ಕೇಂದ್ರ ಸರ್ಕಾರ (central government) ಮುಂದಾಗಿದೆ. ಈವರೆಗೂ ಸರ್ಕಾರದ ಶಿಫಾರಸಿನ ಮೇರೆಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಿಸುತ್ತಿದ್ದರು.
ಆದೇಶ ಪಾಲನೆ ಅನುಮಾನ:
ಇಬ್ಬರು ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಹಾಲಿ ಚುನಾವಣಾ ಆಯುಕ್ತ ಅನೂಪ್‌ಚಂದ್ರ ಪಾಂಡೆ (Anup chandra Pande) ಅವರಿಗೆ ಫೆ.14ಕ್ಕೆ 65 ತುಂಬಲಿದ್ದು, ಅಂದು ಅವರು ನಿವೃತ್ತರಾಗಲಿದ್ದಾರೆ. ಹೀಗಾಗಿ ಆಗ 1 ಹುದ್ದೆ ಖಾಲಿ ಆಗಲಿದೆ. ಈ ವಿದ್ಯಮಾನ 2024ರ ಲೋಕಸಭೆ ಚುನಾವಣೆ (Loksabha election 2024) ಘೋಷಣೆಗೂ ಮುನ್ನ ನಡೆಯಲಿದೆ. ಹೀಗಿದ್ದಾಗ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿ ಹೊಸ ಆಯುಕ್ತರ ನೇಮಕ ಹೇಗೆ ಆಗುತ್ತದೆ ಎಂಬ ಪ್ರಶ್ನೆ ಎದ್ದಿದೆ.
'I.N.D.I.A' ಹೆಸರಿಟ್ಟುಕೊಂಡ ವಿಪಕ್ಷಗಳ ಒಕ್ಕೂಟಕ್ಕೆ ಶಾಕ್: ಒಕ್ಕೂಟದ 26 ಪಕ್ಷಗಳಿಗೂ ಹೈಕೋರ್ಟ್ ನೋಟಿಸ್
ವಿಪಕ್ಷ ಆಕ್ರೋಶ:
ಸರ್ಕಾರದ ನಡೆಗೆ ಕಾಂಗ್ರೆಸ್ ಪಕ್ಷ ಹಾಗೂ ಆಪ್ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರದ ಈ ಕ್ರಮವು ಚುನಾವಣಾ ಆಯೋಗವನ್ನು ದುರ್ಬಲಗೊಳಿಸುತ್ತದೆ. ಸುಪ್ರೀಂ ಕೋರ್ಚ್ ಆದೇಶಕ್ಕೆ ಬೆಲೆ ಇಲ್ಲವಾಗಿದೆ. ಸರ್ಕಾರ ಹೀಗೆ ಮಾಡುತ್ತದೆ ಎಂದು ನಮಗೆ ಅನ್ನಿಸಿತ್ತು’ ಎಂದು ಕಿಡಿಕಾರಿದೆ. ಇನ್ನು 2024ರ ಲೋಕಸಭೆ ಚುನಾವಣೆಯಲ್ಲಿ ರಿಗ್ಗಿಂಗ್ ನಡೆಸಿ ಗೆಲ್ಲುವ ಹುನ್ನಾರವನ್ನು ಎನ್‌ಡಿಎ ನಡೆಸಿದ್ದು, ಅದಕ್ಕೆಂದೇ ಸುಪ್ರೀಂ ಕೋರ್ಚ್ ಮುಖ್ಯ ನ್ಯಾಯಾಧೀಶರಿಲ್ಲದ ಚುನಾವಣಾ ಆಯುಕ್ತರ ನೇಮಕ ಸಮಿತಿ ರಚನೆಗೆ ಮುಂದಾಗಿದೆ’ ಎಂದಿದೆ.