
ನವದೆಹಲಿ (ಅ.9): ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್‌ಗಳಿಂದ 20 ಮಕ್ಕಳ ಸಾವು ಸಂಭವಿಸಿದೆ ಎಂಬ ವರದಿಗಳ ಬೆನ್ನಲ್ಲೇ, ದೇಶದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ), ಎಲ್ಲ ರಾಜ್ಯಗಳಲ್ಲಿನ ಕೆಮ್ಮಿನ ಔಷಧಗಳ ಸಮಗ್ರ ತಪಾಸಣೆ ನಡೆಸಬೇಕು ಎಂದು ಸೂಚಿಸಿದೆ. 'ಪ್ರತಿ ಬ್ಯಾಚ್ ಕಚ್ಚಾ ವಸ್ತು ಮತ್ತು ಸಿದ್ದಪಡಿಸಿದ ಸೂತ್ರೀಕರಣವನ್ನು (ಫಾರ್ಮುಲೇಶನ್) ಬಳಕೆ ಅಥವಾ ಮಾರಾಟ ಮಾಡುವ ಮೊದಲು ಸರಿಯಾಗಿ ಪರೀಕ್ಷಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು' ಎಂದು ತಾಕೀತು ಮಾಡಿದೆ.
'ಸದ್ಯ ಉತ್ಪಾದಕರು ಸರಿಯಾದ ತಪಾಸಣೆ ಮಾಡದೇ ಮಾರುಕಟ್ಟೆಗೆ ಔಷಧ ಬಿಡುಗಡೆ ಮಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ರಾಜ್ಯ ಔಷಧ ನಿಯಂತ್ರಕರು ತಪಾಸಣೆ ತೀವಗೊಳಿಸಬೇಕು ಮತ್ತು ಸರಿಯಾದ ಪರೀಕ್ಷೆಯಿಲ್ಲದೆ ಯಾವುದೇ ಬ್ಯಾಚ್ ಔಷಧ ಬಿಡುಗಡೆ ಅಗದಂತೆ ನೋಡಿಕೊಳ್ಳಬೇಕು' ಎಂದು ಪತ್ರ ಸೂಚಿಸಿದೆ.
ವಿದೇಶಕ್ಕೆ ರಫ್ತಾಗಿದೆಯೆ- ಡಬ್ಲ್ಯುಎಚ್‌ಒ: ಕೋಲ್ಡ್ರಿಫ್ ಸಿರಪ್ ಅನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆಯೇ ಎಂದು ಭಾರತದಿಂದ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ಕೋರಿದೆ. ಈ ನಡುವೆ, ಮಧ್ಯಪ್ರದೇಶ ಅರೋಗ್ಯ ಸಚಿವರು ಮಾತನಾಡಿ, 'ಇಂದಿನ ಎಲ್ಲ ಸಮಸ್ಯೆಗೆ ತಮಿಳುನಾಡು ಸರ್ಕಾರದ ನಿರ್ಲಕ್ಷ್ಯಕಾರಣ. ಕೋಲ್ಡ್ರಿಫ್ ಘಟಕ ಚೆನ್ನೈ ಸನಿಹದಲ್ಲಿದೆ. ಅಲ್ಲಿ ಸೂಕ್ತ ತಪಾಸಣೆ ಮಾಡಿದ್ದರೆ ಸಾವುಗಳು ಸಂಭವಿಸುತ್ತಿಲಿಲ್ಲ' ಎಂದು ಹೇಳಿದ್ದಾರೆ.
ಹೈದರಾಬಾದ್: ಕೋಲ್ಡ್ರಿಫ್ ಮಾತ್ರವಲ್ಲ, ಇನ್ನೂ 2 ಕೆಮ್ಮಿನ ಸಿರಪ್‌ಗಳು ಅಪಾಯಕಾರಿ. ಅವುಗಳು ವಿಷಕಾರಿ ವಸ್ತುವಾದ ಡೈಥಿಲೀನ್ ಕಾಲ್ (ಡಿಇಜಿ) ನೊಂದಿಗೆ ಕಲಬೆರಕೆಯಾಗಿವೆ ಎಂದು ಮಧ್ಯಪ್ರದೇಶ ಸರ್ಕಾರದ ಔಷಧ ಪರೀಕ್ಷಾ ಪ್ರಯೋಗಾಲಯದಿಂದ ಎಚ್ಚರಿಕೆ ಬಂದಿದೆ. ಹೀಗಾಗಿ ಅವುಗಳ ಬಳಕೆ ನಿಲ್ಲಿಸುವಂತೆ ಸಾರ್ವಜನಿಕರಿಗೆ ತೆಲಂಗಾಣ ಔಷಧ ನಿಯಂತ್ರಣ ಸಂಸ್ಥೆ ಸೂಚಿಸಿದೆ. 'ರಿಲೈಫ್' (ಬ್ಯಾಚ್ ಸಂಖ್ಯೆ : LSL25160) ಮತ್ತು 'ರೆಸ್ಪಿಫ್ರೆಶ್ ಟಿಆರ್' (ಬ್ಯಾಚ್ ಸಂಖ್ಯೆ: R01GL2523) ಎಂಬ ಕೆಮ್ಮಿನ ಸಿರಪ್‌ಗಳನ್ನು ಗುಜರಾತ್ ಮೂಲದ ಔಷಧ ಕಂಪನಿಗಳು ತಯಾರಿಸಿವೆ. ಇವುಗಳ ಬಳಕೆ ನಿಲ್ಲಿಸಲು ಸೂಚಿಸಲಾಗಿದೆ.
ಇಟಾನಗರ: ಕೋಲ್ಡ್ರಿಫ್‌ನಿಂದ ಮಕ್ಕಳ ಸಾವಾಗಿರುವ ಬಗ್ಗೆ ಎಚ್ಚೆತ್ತುಕೊಂಡಿರುವ ಅರುಣಾಚಲ ಪ್ರದೇಶ, ರಾಜ್ಯದಲ್ಲಿ ಔಷಧದ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಯಾವುದೇ ವ್ಯಾಪಾರಿಗಳು ಕೋಲ್ಡ್ರಿಫ್ ದಾಸ್ತಾನು ಹೊಂದಿದ್ದರೆ ಕೂಡಲೇ ಸ್ಥಳೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ವರದಿ ಮಾಡಬೇಕು ಎಂದು ನಿರ್ದೇಶಿಸಿದೆ. ಈಗಾಗಲೇ ತಮಿಳುನಾಡು, ಗುಜರಾತ್ ಸೇರಿ 6 ರಾಜ್ಯಗಳು ಕೋಲ್ಡ್ರಿಫ್ ಔಷಧ ನಿಷೇಧಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ