CDS Helicopter Crash: ಬಯಲಾಯ್ತು ರಾವತ್ ಹೆಲಿಕಾಪ್ಟರ್ ದುರಂತದ ರಹಸ್ಯ, ಶೀಘ್ರವೇ ತನಿಖಾ ವರದಿ ಸಲ್ಲಿಕೆ!

By Suvarna NewsFirst Published Dec 31, 2021, 10:53 AM IST
Highlights

* ಬಿಪಿನ್ ರಾವತ್ ಸೇರಿ 14 ಮಂದಿ ಬಲಿ ಪಡೆದಿದ್ದ ಹೆಲಿಕಾಪ್ಟರ್ ದುರಂತ

* ತ್ರಿಸೇವಾ ತನಿಖೆಗೆ ಆದೇಶಿಸಿದ ರಕ್ಷಣಾ ಸಚಿವಾಲಯ

* ಶೀಘ್ರದಲ್ಲೇ ವರದಿ ಸಲ್ಲಿಸಲಿದೆ ತನಿಖಾ ತಂಡ

ನವದೆಹಲಿ(ಡಿ,31): ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದುರಂತದ ತನಿಖೆಗಾಗಿ ರಚಿಸಲಾಗಿರುವ ತನಿಖಾ ಸಮಿತಿ ತನ್ನ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ. ಹೆಲಿಕಾಪ್ಟರ್ ಪತನಕ್ಕೆ ಕಾರಣ ತಿಳಿಯಲು ರಕ್ಷಣಾ ಸಚಿವಾಲಯ ತ್ರಿಸೇವಾ ತನಿಖೆಗೆ ಆದೇಶಿಸಿತ್ತು.

ಹೌದು ಡಿಸೆಂಬರ್ 8 ರಂದು ಸೇನಾ ದಂಡನಾಯಕ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ದುರಂತದಲ್ಲಿ ಚಾಪರ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದರು. ದುರಂತದ ಬಳಿಕ ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ಹಲವರನ್ನು ಕಾಡಿತ್ತು. ಈ ಕಾರಣಕ್ಕಾಗಿಯೇ ಅಪಘಾತದ ಕಾರಣವನ್ನು ತನಿಖೆ ಮಾಡಲು ನ್ಯಾಯಾಲಯದ ವಿಚಾರಣೆ ಸ್ಥಾಪಿಸಲಾಗಿದೆ ಹಾಗೂ ಭಾರತೀಯ ವಾಯುಪಡೆಯ ತರಬೇತಿ ವಿಭಾಗದ ಕಮಾಂಡಿಂಗ್-ಇನ್-ಚೀಫ್ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ, ವಿಚಾರಣೆ ನಡೆಸಲಾಗಿದೆ. IAF ನ Mi-17V5 ಪತನದ ಕಾರಣಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿವೆ. 

ತನಿಖಾ ಸಮಿತಿಯು ಸೇನೆ ಮತ್ತು ಐಎಎಫ್ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ. ಅಪಘಾತದ ಸ್ಥಳದ ಬಳಿ ಇದ್ದ ಸ್ಥಳೀಯರೊಂದಿಗೂ ಮಾತುಕತೆ ನಡೆಸಿ ಮಾಹಿತಿ ಪಡೆಯಲಾಗಿದೆ. ಅಪಘಾತಕ್ಕೂ ಮುನ್ನ ಹೆಲಿಕಾಪ್ಟರ್‌ ವಿಡಿಯೋ ರೆಕಾರ್ಡ್ ಆಗಿದ್ದ ಮೊಬೈಲ್ ಫೋನ್ ಅನ್ನು ಕೂಡ ಪರಿಶೀಲಿಸಲಾಗಿದೆ. ಅಲ್ಲದೇ ಬ್ಲ್ಯಾಕ್ ಬಾಕ್ಸ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಫ್ಲೈಟ್ ಡೇಟಾ ರೆಕಾರ್ಡ್ ಮಾಡಲಾಗಿದ್ದು, ಮಾಹಿತಿಯನ್ನು ವರದಿಯಲ್ಲಿ ಸೇರಿಸಲಾಗಿದೆ.

ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅವರು ಪ್ರಸ್ತುತ ನಾಲ್ಕು ದಿನ ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಆಗಮಿಸಲಿದ್ದಾರೆ. ಅವರು ಮರಳಿ ಬಂದ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. CDS ಜನರಲ್ ಬಿಪಿನ್ ರಾವತ್ ಅವರು ಡಿಸೆಂಬರ್ 8 ರಂದು Mi-17V5 ಹೆಲಿಕಾಪ್ಟರ್‌ನಲ್ಲಿದ್ದರು, ಅದು ಸೂಲೂರ್ ವಾಯುನೆಲೆಯಿಂದ ಟೇಕ್ ಆಫ್ ಆಗಿದ್ದು, ವೆಲ್ಲಿಂಗ್ಟನ್‌ನಲ್ಲಿರುವ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜ್ ಕಡೆಗೆ ಹೊರಟಿತ್ತು.

ಹೆಲಿಕಾಪ್ಟರ್ ಕೂನೂರು ಪ್ರದೇಶದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮೊದಲು ಪತನಗೊಂಡಿದ್ದು, ಜನರಲ್ ರಾವತ್, ಅವರ ಪತ್ನಿ ಮತ್ತು ಇತರ 12 ಸೇನಾ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡಿತ್ತು.

click me!