
ನವದೆಹಲಿ (ಜನವರಿ 1, 2024): ಆದಾಯ ಮೀರಿ ಆಸ್ತಿ ಗಳಿಕೆ ಮಾಡಿದ ಆರೋಪದಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಕೇರಳದ ಜೈಹಿಂದ್ ಎಂಬ ಟೀವಿ ಚಾನಲ್‌ನಲ್ಲಿ ಅವರು ಮಾಡಿರುವ ಹೂಡಿಕೆಯ ವಿವರ ಕೇಳಿ ಕಾಂಗ್ರೆಸ್ ನಾಯಕನೂ ಆಗಿರುವ ಜೈಹಿಂದ್ ಚಾನಲ್‌ನ ಮ್ಯಾನೇಜಿಂಗ್ ಡೈರೆಕ್ಟರ್‌ಗೆ ಸಿಬಿಐ ನೋಟಿಸ್ ಜಾರಿಗೊಳಿಸಿದೆ.
ಜೈಹಿಂದ್ ಕಮ್ಯುನಿಕೇಷನ್ಸ್ ಪ್ರೈ.ಲಿ. ಎಂ.ಡಿ. ಬಿ.ಎಸ್.ಶಿಜು ಅವರಿಗೆ ಜನವರಿ 11ರಂದು ಎಲ್ಲಾ ದಾಖಲೆಗಳೊಂದಿಗೆ ವಿಚಾರಣೆಗೆ ಬರುವಂತೆ ಸಿಬಿಐ ತನಿಖಾಧಿಕಾರಿ ನೋಟಿಸ್ ನೀಡಿದ್ದಾರೆ. ಸಿಆರ್‌ಪಿಸಿ ಸೆಕ್ಷನ್ 91ರಡಿ ನೋಟಿಸ್ ನೀಡಲಾಗಿದ್ದು, ಡಿ.ಕೆ.ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಅವರು ಚಾನಲ್‌ನಲ್ಲಿ ಮಾಡಿರುವ ಹೂಡಿಕೆಗಳ ದಾಖಲೆ, ಅದಕ್ಕೆ ಪಡೆದಿರುವ ಡಿವಿಡೆಂಡ್, ಷೇರು ವಹಿವಾಟು, ಹಣಕಾಸು ವಹಿವಾಟು, ಬ್ಯಾಂಕ್ ವಿವರ, ಲೆಡ್ಜರ್ ಅಕೌಂಟ್‌ಗಳು, ಗುತ್ತಿಗೆ ಕರಾರು ಮುಂತಾದ ಎಲ್ಲಾ ವಿವರಗಳನ್ನು ನೀಡುವಂತೆ ಸೂಚಿಸಲಾಗಿದೆ. ಅದೇ ರೀತಿ, ಚಾನಲ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರ ಪುತ್ರ ಹಾಗೂ ಕುಟುಂಬದ ಇತರ ಸದಸ್ಯರು ಮಾಡಿರುವ ಹೂಡಿಕೆಯ ವಿವರವನ್ನೂ ನೀಡುವಂತೆ ಸಿಬಿಐ ಸೂಚಿಸಿದೆ.
ಇದನ್ನು ಓದಿ: ಡಿ.ಕೆ.ಶಿವಕುಮಾರ್ ಚಿಕ್ಕವನಾದ್ರೂ ಸಂಘಟನೆಯಲ್ಲಿ ನನಗಿಂತಲೂ ಮುಂದಿದ್ದಾರೆ: ಸಿಎಂ ಸಿದ್ದರಾಮಯ್ಯ
ಸಿಬಿಐನಿಂದ ತಮಗೆ ನೋಟಿಸ್ ಬಂದಿರುವುದನ್ನು ಚಾನಲ್‌ನ ಎಂ.ಡಿ. ಶಿಜು ಖಚಿತಪಡಿಸಿದ್ದು, ಎಲ್ಲಾ ದಾಖಲೆಗಳನ್ನು ತನಿಖಾ ಸಂಸ್ಥೆಗೆ ನೀಡುವುದಾಗಿ ತಿಳಿಸಿದ್ದಾರೆ. ‘ನಮ್ಮ ವ್ಯವಹಾರದಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ. ಸಿಬಿಐ ಅಧಿಕಾರಿಗಳ ನೋಟಿಸ್ ರಾಜಕೀಯ ದುರುದ್ದೇಶದಿಂದ ಕೂಡಿದೆ. ಕೇಂದ್ರದ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಹಿಂದೆ ಕರ್ನಾಟಕದ ಬಿಜೆಪಿ ಸರ್ಕಾರ ಕೂಡ ಈ ಬಗ್ಗೆ ತನಿಖೆ ನಡೆಸಿತ್ತು. ಯಾವುದೇ ಅಕ್ರಮ ಪತ್ತೆಯಾಗದೆ ಕೇಸು ಮುಕ್ತಾಯವಾಗಿತ್ತು. ಈಗ ಮತ್ತೆ ತನಿಖೆ ಪುನಾರಂಭಿಸಿರುವುದು ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಿರುವ ಕಿರುಕುಳವಾಗಿದೆ’ ಎಂದು ಶಿಜು ಆರೋಪಿಸಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ 2020ರಲ್ಲಿ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿದ್ದು, 74 ಕೋಟಿ ರೂ .ಗಳಷ್ಟು ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆ ತನಿಖೆ ನಡೆಸುತ್ತಿದೆ.
ತಿಹಾರ್ ಜೈಲಿನಲ್ಲಿದ್ದಾಗ ಸೋನಿಯಾಗಾಂಧಿ ಹೇಳಿದಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದೇನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ