
ನವದೆಹಲಿ(ಏ.10): ಕರ್ನಾಟಕದ ಬಿಟ್ ಕಾಯಿನ್ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದ ಈ ಪ್ರಕರಣ ಇದೀಗ ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ತಂಡ ತನಿಖೆ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಭಾರತದ ಸಿಬಿಐ, ಈ ರೀತಿಯ ಯಾವುದೇ ತನಿಖೆ ನಡೆಯುತ್ತಿಲ್ಲ. ಇದು ಸತ್ಯಕ್ಕೆ ದೂರವಾದ ಹೇಳಿಕೆ ಎಂದು ಸಿಬಿಐ ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೆವಾಲಾ, ಕರ್ನಾಟಕದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಭಾರತದ ನೆಲದಲ್ಲಿ ಅಮೆರಿಕದ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ ಎಂದರೆ ಭಾರತದ ತನಿಖಾ ಸಂಸ್ಥೆ ಮೇಲಿನ ಸಾಮರ್ಥ್ಯ ಪ್ರಶ್ನಿಸುವಂತಿದೆ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ಇನ್ನು ಕಾಂಗ್ರೆಸ್ ಆರೋಪ ಹೆಚ್ಚಾಗುತ್ತಿದ್ದಂತೆ ಸ್ವತಃ ಸಿಬಿಐ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. ಎಫ್‌ಬಿಐ ಯಾವುದೇ ತಂಡವನ್ನು ತನಿಖೆ ಮಾಡಲು ಭಾರತಕ್ಕೆ ಕಳುಹಿಸಿಲ್ಲ. ಈ ಕುರಿತು ಯಾವದೇ ಮನವಿ ಮಾಡಿಲ್ಲ ಎಂದಿದೆ.
ಮೋದಿ ವ್ಯಾಲೆಟ್‌ಗೆ ಬಿಟ್ಕಾಯಿನ್ ಹೋಗಿದೆಯೇ?: ಸಿದ್ದು ಪ್ರಶ್ನೆ
ರಂದೀಪ್ ಸಿಂಗ್ ಸುರ್ಜೆವಾಲ ಮಾಡಿದ ಟ್ವೀಟನ್ನು ಕರ್ನಾಟಕ ಕಾಂಗ್ರೆಸ್ ಕನ್ನಡದಲ್ಲಿ ಟ್ವೀಟ್ ಮಾಡಿದೆ. ಕರ್ನಾಟಕದಲ್ಲಿ ನಡೆದಿರುವ ಬಿಟ್‌ಕಾಯಿನ್ ಹಗರಣವನ್ನು ತನಿಖೆ ಮಾಡಿ ಒಳಸುಳಿಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಕೇಂದ್ರ ಗೃಹ ಸಚಿವರು ಹಾಗೂ ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಈ ಪ್ರಶ್ನೆಗಳಿಗೆ ಉತ್ತರಿಸಲಿ, ಕರ್ನಾಟಕ ಬಿಜೆಪಿ ಸರ್ಕಾರ ಅಡಿಯಲ್ಲಿ ನಡೆದ ಅತೀ ದೊಡ್ಡ ಹಗರಣ ಬಿಟ್‌ಕಾಯಿನ್ ಹಗರಣದ ತನಿಖೆ ಮಾಡಲು ಎಫ್‌ಬಿಐ ತಂಡ ಭಾರತದಲ್ಲಿದೆಯೇ? ಹಾಗಿದ್ದರೆ, ತನಿಖೆ ಹಾಗೂ ರಾಜಕೀಯ ವ್ಯಕ್ತಿಗಳು ಸೇರಿದಂತೆ ಶಂಕಿತ ವಿವರಗಳನ್ನು ಬಿಡುಗಡೆ ಮಾಡವಿರಾ? ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಇದೇ ಮಾಹಿತಿಯನ್ನು ರಂದೀಪ್ ಸುರ್ಜೆವಾಲ ಇಂಗ್ಲೀಷ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಇತ್ತ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಭಾರತ ನೆಲದಲ್ಲಿ ಅಮೆರಿದ ಎಫ್‌ಬಿಐ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ ಅನ್ನೋದು ಗಂಭೀರವಿಚಾರ. ಇದರಿಂದ ಭಾರತೀಯ ತನಿಖಾ ಸಂಸ್ಥೆಗಳ ಮೇಲೆ ಅನುಮಾನ ಮೂಡುವಂತೆ ಮಾಡಿದೆ ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಸಮರ್ಥನೆ ನೀಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ದೇಶದ ಅತಿ ದೊಡ್ಡ ಹಗರಣವಾದ ಬಿಟ್‌ಕಾಯಿನ್ ಹಗರಣದ ಕೊನೆಗೂ ತೆರೆದುಕೊಳ್ಳುತ್ತಿದ್ದು, ಪ್ರಕರಣದ ಬಗ್ಗೆ ಎಫ್‌ಬಿಐ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ತನಿಖೆ ನಡೆಸುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ನೇರವಾಗಿ ಸಿಬಿಐ ಉತ್ತರ ನೀಡಿದೆ.
ಭಾರತಕ್ಕೆ ತನ್ನದೇ ಆದ ಡಿಜಿಟಲ್ ಕರೆನ್ಸಿ, ಇದರ ಬಗ್ಗೆ ಏನಿದೆ ಮಾಹಿತಿ?
ಬಿಲಿಯನ್ ಡಾಲರ್ ಬಿಟ್‌ಕಾಯಿನ್ ಹಗರಣದ ಬಗ್ಗೆ ತನಿಖೆಗೆ ಎಫ್‌ಬಿಐ ದೆಹಲಿಗೆ ಬಂದಿದೆ ಎಂದು ನಂಬಿದ್ದೇನೆ. ನಾನು ಮೊದಲೇ ತಿಳಿಸಿದಂತೆ ರಾಜ್ಯವು ಶ್ರದ್ಧೆಯಿಂದ ತನಿಖೆ ನಡೆಸಿದ್ದರೆ ಬಿಜೆಪಿಯ ಹಲವು ಅಸ್ಥಿಪಂಜರಗಳು ಹೊರಬರುತ್ತಿದ್ದವು ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಬಿಜೆಪಿ ಸದಸ್ಯ ಪಿ.ರಾಜೀವ್ ನೀಡಿದ್ದ ಬಿಟ್‌ಕಾಯಿನ್ ಹೇಳಿಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಕೆಸರೆರಾಚಾಟಕ್ಕೆ ಕಾರಣವಾಗಿತ್ತು. ಬಿಟ್‌ಕಾಯಿನ್ ಹಗರಣದ ರೂವಾರಿ ಶ್ರೀಕಿಯನ್ನು ಯುಬಿ ಸಿಟಿ ಗಲಾಟೆ ಪ್ರಕರಣದಲ್ಲಿ ಪೊಲೀಸರಿಂದ ರಕ್ಷಿಸಲು ಕಾಂಗ್ರೆಸ್ ಪಕ್ಷದ ಮೊಹಮದ್ ನಲಪಾಡ್ ಸಹೋದರನ ಜತೆ ಖಾಸಗಿ ವಿಮಾನದಲ್ಲಿ ಓಡಾಡಿಸಲಾಗಿತ್ತು ಎಂದು ಬಿಜೆಪಿ ಸದಸ್ಯ ಪಿ.ರಾಜೀವ್ ನೀಡಿದ ಹೇಳಿಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಜಟಾಪಟಿಗೆ ಕಾರಣವಾಗಿತ್ತು.
ಸದನದಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾ ನಿರ್ಣಯದ ಚರ್ಚೆ ವೇಳೆ ಪಿ.ರಾಜೀವ್ ಅವರು, ಬಿಟ್‌ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್ ಯಾವುದೇ ದಾಖಲೆ ಇಲ್ಲದೆ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಬಿಜೆಪಿ ಸರ್ಕಾರ ಡ್ರಗ್ಸ್ ಜಾಲವನ್ನು ಮಟ್ಟಹಾಕಲು ಸಮರ ಸಾರಿತು. ಬಿಟ್ ಕಾಯಿನ್ ಪ್ರಕರಣ ಕುರಿತು ತನಿಖೆ ನಡೆಸಿದ ವೇಳೆ ಆರೋಪಿ ಶ್ರೀಕಿ ಸಿಕ್ಕಿಬಿದ್ದಿದ್ದನು. ವಿಚಾರಣೆ ವೇಳೆ ನೀಡಿದ ಯು ಸಿಟಿ ಗಲಾಖೆ ಪ್ರಕರಣದಲ್ಲಿ ಶಾಸಕರೊಬ್ಬರ ಪುತ್ರ ಜೈಲಿನಲ್ಲಿದ್ದರೆ, ಮತ್ತೊಬ್ಬ ಪುತ್ರನ ಜತೆ ಆರೋಪಿ ಶ್ರೀಕಿ ಖಾಸಗಿ ವಿಮಾನದಲ್ಲಿರುವ ಬಗ್ಗೆ ಹೇಳಿಕೆಯಲ್ಲಿ ದಾಖಲಾಗಿದೆ. ಯಾವ ಕಾರಣಕ್ಕಾಗಿ ಆತನನ್ನು ರಕ್ಷಿಸಲಾಗಿತ್ತು ಎಂದು ಪ್ರಶ್ನಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ