ನೈತಿಕ ಸಮಿತಿಯ ವಿಚಾರಣೆಗೆ ಆಗಮಿಸಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅರ್ಧದಲ್ಲಿಯೇ ಎದ್ದು ಬಂದಿದ್ದಾರೆ. ಸಮಿತಿ ಕೇಳುವ ಪ್ರಶ್ನೆಗಳು ಅಸಂಬದ್ಧವಾಗಿದ್ದವು. ವಿರೋದ ಪಕ್ಷದ ಸಂಸದರೊಬ್ಬರ ಪ್ರಕಾರ, ನೈತಿಕ ಸಮಿತಿ ಅಧ್ಯಕ್ಷ ನಿಯಮ ಬಾಹಿರವಾದ ಪ್ರಶ್ನೆಗಳನ್ನು ಕೇಳಿದರು ಎಂದು ಆರೋಪಿಸಿದ್ದಾರೆ.
ನವದೆಹಲಿ (ನ.2): ಲೋಕಸಭೆಯ ನೈತಿಕ ಸಮಿತಿಯ ವಿಚಾರಣೆಗೆ ಹಾಜರಾಗಿದ್ದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಸಮಿತಿಯ ಅಧ್ಯಕ್ಷರ ವಿರುದ್ಧವೇ ಕೆಂಡಾಮಂಡಲರಾಗಿ ಮಾತನಾಡಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯ ನೈತಿಕ ಸಮಿತಿಯು ಗುರುವಾರ ನವೆಂಬರ್ 2 ರಂದು ಸಂಸತ್ತಿನಲ್ಲಿ ಹಣ ಪಡೆದು ಪ್ರಶ್ನೆಗಳನ್ನು ಕೇಳಿದ ಪ್ರಕರಣದಲ್ಲಿ ವಿಚಾರಣೆ ನಡೆಸಿತು. ಮಹುವಾ ಮೊಯಿತ್ರಾ, ಡ್ಯಾನಿಶ್ ಅಲಿ ಮತ್ತು ಇತರ ವಿರೋಧ ಪಕ್ಷದ ಸಂಸದರು ಕೋಪದಿಂದಲೇ ನೈತಿಕ ಸಮಿತಿಯ ಕಚೇರಿಯಿಂದ ಮಧ್ಯಾಹ್ನ 3:35 ಕ್ಕೆ ಹೊರನಡೆದರು. ಆಕೆಯ ಕೋಪಕ್ಕೆ ಕಾರಣವೇನು ಎಂದು ಪ್ರಶ್ನೆ ಮಾಡಿದಾಗ, ಡ್ಯಾನಿಶ್ ಅಲಿ ಉತ್ತರ ನೀಡಿದ್ದಾರೆ. 'ರಾತ್ರಿ ನೀವು ಯಾರ ಜೊತೆ ಮಾತನಾಡುತ್ತೀರಿ? ಯಾವ ವಿಚಾರವನ್ನು ಮಾತನಾಡುತ್ತೀರಿ? ಎಂದು ಮಹುವಾ ಮೊಯಿತ್ರಾಗೆ ಅಧ್ಯಕ್ಷರು ಅನೈತಿಕವಾಗಿ ಪ್ರಶ್ನೆಗಳನ್ನು ಕೇಳಿದ್ದರು. ಇಂಥ ಪ್ರಶ್ನೆಗಳನ್ನು ಯಾವ ಸಮಿತಿ ಕೇಳುತ್ತದೆ? ವಿರೋಧ ಪಕ್ಷದ ಸದಸ್ಯರು ಮತ್ತು ಟಿಎಂಸಿ ಸಂಸದ ಮಹುವಾ ಅವರ ಗದ್ದಲದ ನಂತರವೂ ನೈತಿಕ ಸಮಿತಿಯು ತನ್ನ ಪ್ರಶ್ನೆಗಳನ್ನು ಮುಂದುವರಿಸಿತ್ತು.
ವಿರೋಧ ಪಕ್ಷದ ಸಂಸದರು ವಿಚಾರಣೆಗೆ ಬಾಯ್ಕಾಟ್ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ನೈತಿಕ ಸಮಿತಿಯ ಅಧ್ಯಕ್ಷ ವಿನೋದ್ ಸೋನ್‌ಕರ್, ಸಂಸದರು ನನ್ನ ವಿರುದ್ಧ ಹಾಗೂ ಸಂಸತ್ತಿನ ಸಮಿತಿಯ ಕಾರ್ಯ ನಿರ್ವಹಣೆಯ ಕುರಿತಾಗಿ ಆಕ್ಷೇಪಾರ್ಹ ಪದಗಳನ್ನು ಹೇಳಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಮಾತನಾಡಿದ್ದು, ದರ್ಶನ್ ಹಿರಾನಂದನಿ ಅವರ ಅಫಿಡವಿಟ್‌ನಲ್ಲಿ ಮಾಡಿದ ಹಕ್ಕುಗಳ ಕುರಿತು ಲೋಕಸಭೆಯ ನೈತಿಕ ಸಮಿತಿಯು ಮಹುವಾ ಮೊಯಿತ್ರಾ ಅವರನ್ನು ಪ್ರಶ್ನಿಸಲು ಹಕ್ಕಿದೆ. ಅದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂದಿದ್ದಾರೆ. ಎಥಿಕ್ಸ್ ಪ್ಯಾನಲ್ ಸದಸ್ಯ ಅಪರಾಜಿತಾ ಸಾರಂಗಿ 'ದರ್ಶನ್ ಅವರ ಅಫಿಡವಿಟ್ ಬಗ್ಗೆ ಕೇಳಿದಾಗ, ಟಿಎಂಸಿ ಸಂಸದ ಮಹುವಾ ಕೋಪದಿಂದ ಮತ್ತು ದುರಹಂಕಾರದಿಂದ ವರ್ತಿಸಿದರು' ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಎಥಿಕ್ಸ್ ಕಮಿಟಿಯ ಮುಂದೆ ಮಹುವಾ ತಾವು ನಿರಪರಾಧಿ ಎಂದು ಹೇಳಿದ್ದರು ಎಂದು ವರದಿಯಾಗಿತ್ತು. ವಕೀಲ ಜೈ ಅನಂತ್ ದೇಹದ್ರಾಯ್ ಅವರೊಂದಿಗಿನ ವೈಯುಕ್ತಿಕ ಸಂಬಂಧ ಹಳಸಿದ ಕಾರಣ ಈ ವಿವಾದ ಉಂಟಾಗಿದೆ ಎಂದಿದ್ದರು. ಮಹುವಾ ಪ್ರಕರಣದಲ್ಲಿ, ಗೃಹ, ಐಟಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು ನೈತಿಕ ಸಮಿತಿಗೆ ವರದಿಗಳನ್ನು ಸಲ್ಲಿಸಿದ್ದು, ಅದರ ಆಧಾರದ ಮೇಲೆ ಮಹುವಾ ಅವರನ್ನು ಪ್ರಶ್ನಿಸಲಾಗಿದೆ.
ಮೋದಿ..ಅದಾನಿ ವಿರುದ್ಧ ಗುಡುಗಿದ್ರೆ ಸಂಸದೆಗೆ ದುಡ್ಡು ಸಿಕ್ತಿತ್ತಾ..? ಬಿಜೆಪಿ ನಾಯಕನಿಂದ ಗಂಭೀರ ಆರೋಪ!
ವರದಿಗಳ ಪ್ರಕಾರ, ಮಹುವಾ ಅವರ ಐಡಿ ದುಬೈನಿಂದ ಕನಿಷ್ಠ 47 ಬಾರಿ ಲಾಗ್ ಇನ್ ಆಗಿದೆ ಎಂದು ಐಟಿ ಸಚಿವಾಲಯ ಸಮಿತಿಗೆ ತಿಳಿಸಿದೆ. ಅಕ್ಟೋಬರ್ 26 ರಂದು ನಡೆದ ಸಭೆಯ ನಂತರ ಸಮಿತಿಯು ಮೂರು ಸಚಿವಾಲಯಗಳಿಂದ ಮಾಹಿತಿ ಕೇಳಿತ್ತು. ಮತ್ತೊಂದೆಡೆ, ದೆಹಲಿಗೆ ಹೊರಡುವ ಮೊದಲು ಮಾತನಾಡಿದ್ದ ಮಹುವಾಮ 'ನಾನು ನವೆಂಬರ್ 2 ರಂದು ಎಲ್ಲಾ ಸುಳ್ಳುಗಳನ್ನು ಕೆಡವುತ್ತೇನೆ. ನಾನು ಒಂದೇ ಒಂದು ರೂಪಾಯಿ ತೆಗೆದುಕೊಂಡಿದ್ದರೆ ಬಿಜೆಪಿಯವರು ನನ್ನನ್ನು ತಕ್ಷಣ ಜೈಲಿಗೆ ಹಾಕುತ್ತಿದ್ದರು. ನನ್ನನ್ನು ಸಂಸತ್ತಿನಿಂದ ಅಮಾನತು ಮಾಡಲು ಬಿಜೆಪಿ ಬಯಸುತ್ತಿದೆ. ನಿಜ ಹೇಳಬೇಕೆಂದರೆ ಅವರಿಗೆ ನನ್ನ ಏನೂ ಮಾಡಲು ಸಾಧ್ಯವಿಲ್ಲ. ನೈತಿಕ ಸಮಿತಿಯು ಕ್ರಿಮಿನಲ್ ನ್ಯಾಯವ್ಯಾಪ್ತಿಯನ್ನು ಹೊಂದಿಲ್ಲ' ಎಂದು ಹೇಳಿದ್ದಾರೆ.
ಸ್ಟೈಲಿಶ್ ಲುಕ್ ಫುಲ್ ಗಿಮಿಕ್: ಮೋದಿ ವಿರುದ್ಧ ಸದಾ ಕಿಡಿಕಾರ್ತಿದ್ದ ಟಿಎಂಸಿ ಸಂಸದೆ ಬಣ್ಣ ಬಯಲು ಮಾಡಿದ್ರಾ ಉದ್ಯಮಿ...!
ಮಹುವಾ ವಿರುದ್ಧ ದೂರು ಸಲ್ಲಿಸಿದ ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್, ವಿಷಯ ಇನ್ನೂ ನ್ಯಾಯಾಲಯದಲ್ಲಿದೆ, ಆದ್ದರಿಂದ ಈ ಬಗ್ಗೆ ಈಗಲೇ ಏನನ್ನೂ ಹೇಳುವುದು ಸರಿಯಲ್ಲ ಎಂದು ಹೇಳಿದರು.