ದೆಹಲಿ ಪೌರತ್ವದ ಹಿಂಸಾಚಾರ : ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ

By Kannadaprabha NewsFirst Published Dec 16, 2019, 7:21 AM IST
Highlights

ದೆಹಲಿಯಲ್ಲಿ ಪೌರತ್ವ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆ ವೇಳೆ ಭಾರೀ ಹಿಂಸಾಚಾರ ಸಂಭವಿಸಿದ್ದು 4 ಬಸ್‌, 2 ಅಗ್ನಿಶಾಮಕ ವಾಹನಗಳಿಗೆ ಬೆಂಕಿ ಹಚ್ಚಿದ್ದು ಮಾತ್ರವಲ್ಲದೇ, ಪೊಲೀಸರ ಮೇಲೂ ದಾಳಿ ನಡೆಸಲಾಗಿದೆ. ಈ ವೇಳೆ ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರು ನಡೆಸಿದ ಲಾಠಿಚಾಜ್‌ರ್‍ನಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ನವದೆಹಲಿ/ಕೋಲ್ಕತಾ/ಗುವಾಹಟಿ [ಡಿ.16]:  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಶಾನ್ಯ ಭಾರತ, ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ ಹಿಂಸಾತ್ಮಕ ಹೋರಾಟ ಭಾನುವಾರ ತಣ್ಣಗಾದ ಬೆನ್ನಲ್ಲೇ, ಇತ್ತ ದೆಹಲಿ ಮತ್ತು ಉತ್ತರಪ್ರದೇಶದ ಅಲಿಗಢದಲ್ಲಿ ಭಾನುವಾರ ಹಿಂಸಾಚಾರ ಭುಗಿಲೆದ್ದಿದೆ. ದೆಹಲಿಯಲ್ಲಿ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆ ವೇಳೆ ಭಾರೀ ಹಿಂಸಾಚಾರ ಸಂಭವಿಸಿದ್ದು 4 ಬಸ್‌, 2 ಅಗ್ನಿಶಾಮಕ ವಾಹನಗಳಿಗೆ ಬೆಂಕಿ ಹಚ್ಚಿದ್ದು ಮಾತ್ರವಲ್ಲದೇ, ಪೊಲೀಸರ ಮೇಲೂ ದಾಳಿ ನಡೆಸಲಾಗಿದೆ. ಈ ವೇಳೆ ಹಿಂಸಾಚಾರ ನಿಯಂತ್ರಣಕ್ಕೆ ಪೊಲೀಸರು ನಡೆಸಿದ ಲಾಠಿಚಾಜ್‌ರ್‍ನಲ್ಲಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಇದೇ ವೇಳೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ವಶಕ್ಕೆ ಪಡೆಯಲಾದ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ವಕೀಲರಿಗೆ ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ. ಈ ಸುದ್ದಿ ಹಬ್ಬುತ್ತಲೇ, ಭಾನುವಾರ ರಾತ್ರಿ ವೇಳೆಗೆ ದೆಹಲಿ ಪೊಲೀಸ್‌ ಆಯುಕ್ತರ ಕಚೇರಿ ಬಳಿ ಭಾರೀ ಪ್ರಮಾಣದಲ್ಲಿ ವಿದ್ಯಾರ್ಥಿಗಳು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಹಿಂಸಾಚಾರದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ದೆಹಲಿಯ 15 ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ಬಂದ್‌ ಮಾಡಲಾಯಿತು. ಮತ್ತೊಂದೆಡೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.

ಮತ್ತೊಂದೆಡೆ ಅಲಿಗಢ ಮುಸ್ಲಿಂ ವಿವಿಯಲ್ಲೂ ಪೌರತ್ವ ವಿರೋಧಿಸಿ ನಡೆಸಲಾದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ. ಉತ್ತರಪ್ರದೇಶದ 6 ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಹಿಂಸಾಚಾರ:  ಪೌರತ್ವ ಮಸೂದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಎನ್‌ಎಸ್‌ಯುಐ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಕೆಲ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೆ ಸ್ಥಳದಲ್ಲಿದ್ದ ಖಾಸಗಿ ಬಸ್‌, ಪೊಲೀಸ್‌ ವಾಹನ ಮತ್ತು ಅಗ್ನಿಶಾಮಕದ ದಳದ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುತ್ತಿದ್ದಂತೆ ಪಕ್ಕದಲ್ಲೇ ಇದ್ದ ಜಾಮಿಯಾ ವಿವಿ ಆವರಣದ ಒಳಗಡೆಯಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿವಿಯ ಮುಂಭಾಗದ ಗೇಟ್‌ಗಳನ್ನು ಬಂದ್‌ ಮಾಡಿ, ವಿವಿಯ ಒಳಗಿಂದ ಕಲ್ಲು ತೂರಾಟ ನಡೆಸುತ್ತಿದ್ದ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಪರಿಸ್ಥಿತಿಯ ಲಾಭ ಪಡೆಯಲು ಕೆಲ ಸಮಾಜಘಾತುಕ ಶಕ್ತಿಗಳು ವಿವಿಯ ಒಳಗಡೆಯಿಂದ ನಮ್ಮ ಮೇಲೆ ಕಲ್ಲು ತೂರಾಟ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಿ ಆವರಣದೊಳಕ್ಕೆ ನುಗ್ಗಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಹಿಂಸಾಚಾರದಲ್ಲಿ ವಿವಿ ವಿದ್ಯಾರ್ಥಿಗಳು ಭಾಗಿಯಾಗಿಲ್ಲ. ಪರೀಕ್ಷೆಗಳು ಮುಂದೂಡಿದ್ದ ಕಾರಣ ಈಗಾಗಲೇ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಮನೆಗೆ ತೆರಳಿದ್ದಾರೆ. ಆದರೆ ಪೊಲೀಸರು ನಮ್ಮ ಪೂರ್ವಾನುಮತಿ ಇಲ್ಲದೆಯೇ ವಿವಿ ಆವರಣದೊಳಕ್ಕೆ ನುಗ್ಗಿದ್ದಾರೆ ಎಂದು ವಿವಿಯ ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ.

ಆಪ್‌ ಕೈವಾಡ:  ಇದೇ ವೇಳೆ ಭಾನುವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಆಮ್‌ಆದ್ಮಿ ಪಕ್ಷದ ಶಾಸಕ ಅಮಾನುತುಲ್ಲಾ ಖಾನ್‌ ಭಾಗಿಯಾಗಿದ್ದಾರೆ. ಹಿಂಸಾಚಾರಕ್ಕೆ ಪಕ್ಷ ಉತ್ತೇಜನ ನೀಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ ಈ ಆರೋಪಗಳನ್ನು ಆಪ್‌ ತಳ್ಳಿಹಾಕಿದೆ.

ಬಂಗಾಳ, ಅಸ್ಸಾಂ ಶಾಂತ:  ಪೌರತ್ವ ಕಾಯ್ದೆ ವಿರೋಧಿಸಿ ವ್ಯಾಪಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಭಾನುವಾರ ಬಹುತೇಕ ಶಾಂತಿಯ ವಾತಾವರಣ ಕಂಡುಬಂದಿದೆ. ಬಂಗಾಳದಲ್ಲಿ ಪ್ರತಿಭಟನೆ ಮುಂದುವರಿದಿವೆಯಾದರೂ ಶನಿವಾರದ ರೀತಿ ಬಸ್‌, ರೈಲು, ರೈಲು ನಿಲ್ದಾಣಗಳಿಗೆ ಬೆಂಕಿ ಹಚ್ಚುವಂತಹ ಘಟನೆಗಳು ನಡೆದಿಲ್ಲ. ರಸ್ತೆ ತಡೆ ನಡೆಸಿ, ರಸ್ತೆಯಲ್ಲಿ ಬೆಂಕಿ ಹೆಚ್ಚಿ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ವದಂತಿ ಹಬ್ಬುವುದನ್ನು ತಡೆಯುವ ಉದ್ದೇಶದಿಂದ ಬಂಗಾಳದ 5 ಜಿಲ್ಲೆಯಲ್ಲಿ ಇಂಟರ್ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ನಡುವೆ, ಹೋರಾಟದ ಕೇಂದ್ರ ಬಿಂದುವಿನಂತಾಗಿದ್ದ ಅಸ್ಸಾಂನ ಗುವಾಹಟಿ ಹಾಗೂ ದಿಬ್ರೂಗಢದಲ್ಲಿ ಕರ್ ಫ್ಯೂ ಹೇರಲಾಗಿರುವುದರಿಂದ ಪ್ರತಿಭಟನೆಗಳಿಗೆ ಬ್ರೇಕ್‌ ಬಿದ್ದಿದೆ. ಭಾನುವಾರ ಕರ್ ಫ್ಯೂ ಸಡಿಲಿಸಿದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿಬಿದ್ದಿದ್ದಾರೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಗುರುವಾರ ನಡೆದ ಪೊಲೀಸ್‌ ಗೋಲಿಬಾರ್‌ ವೇಳೆ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಅಸ್ಸಾಂನಲ್ಲಿ ಪೌರತ್ವ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಗೆ ಬಲಿಯಾದವರ ಸಂಖ್ಯೆ ಆರಕ್ಕೇರಿಕೆಯಾಗಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಚಿಕನ್‌ ಕೇಜಿಗೆ 500 ರು.!

ಗುವಾಹಟಿ: ಹಿಂಸಾಚಾರಕ್ಕೆ ಸಾಕ್ಷಿಯಾದ ಅಸ್ಸಾಂನ ಪ್ರಮುಖ ನಗರ ಗುವಾಹಟಿಯಲ್ಲಿ ಕರ್ ಫ್ಯೂ ಹೇರಲಾಗಿದೆ. ಭಾನುವಾರ ಸಡಿಲಿಸಿದ ಕಾರಣ ಅಗತ್ಯ ವಸ್ತುಗಳ ಖರೀದಿಗೆ ಬಂದ ಜನರಿಗೆ ಬೆಲೆ ಏರಿಕೆಯ ಬಿಸಿ ಭರ್ಜರಿಯಾಗಿಯೇ ತಟ್ಟಿದೆ. ಬೇಡಿಕೆ ಹೆಚ್ಚಾದ ಕಾರಣ ಬೆಲೆ ಕೂಡ ಏರಿಕೆಯಾಗಿದೆ. ಕೇಜಿ ಚಿಕನ್‌ ಬೆಲೆ 500 ರು.ಗೆ ಏರಿದೆ. ರೋಹು ಮೀನು ಕೇಜಿಗೆ 420 ರು.ನಂತೆ ಮಾರಾಟವಾಗಿದೆ. ಪಾಲಕ್‌ ಸೊಪ್ಪು ಒಂದು ಕಂತೆಗೆ 10 ರು.ಗೆಲ್ಲ ಸಿಗುತ್ತಿತ್ತು. ಅದು 60 ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಲೆ ಕೇಜಿಗೆ 250 ರು.ಗೆ ಹಾಗೂ ಆಲೂಗಡ್ಡೆ 60 ರು.ಗೆ ಜಿಗಿದಿದೆ.

click me!