Women's Bill: ಲೋಕಸಭೆಯಲ್ಲಿ ಮಸೂದೆ ಸೋಲಿಸಿ ಕಾಂಗ್ರೆಸ್‌ನಿಂದ ಭ್ರೂಣಹತ್ಯೆಯಂಥ ಪಾಪ ಕೃತ್ಯ: ಮೋದಿ ಗರಂ!

Kannadaprabha News   | Kannada Prabha
Published : Apr 19, 2026, 05:26 AM IST
By defeating women s bill in Lok Sabha Congress has committed a sin equivalent to foeticide Modi fumes

ಸಾರಾಂಶ

ಮಹಿಳಾ ಮೀಸಲು ಮಸೂದೆ ವಿಫಲಗೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೊಂದು ಭ್ರೂಣಹತ್ಯೆಗೆ ಸಮಾನವಾದ ಕೃತ್ಯ ಎಂದು ಬಣ್ಣಿಸಿದ ಅವರು, ಮಹಿಳಾ ಸಬಲೀಕರಣದ 'ನಾರಿ ಶಕ್ತಿ' ಮಹಾಯಜ್ಞವನ್ನು ಮುಂದುವರೆಸುವುದಾಗಿ ದೇಶಕ್ಕೆ ಭರವಸೆ ನೀಡಿದ್ದಾರೆ.

ಪಿಟಿಐ ನವದೆಹಲಿ (ಏ.19): ‘ಮಹಿಳಾ ಮೀಸಲು (ಸಾಂವಿಧಾನಿಕ ತಿದ್ದುಪಡಿ) ಮಸೂದೆ ಅಂಗೀಕಾರಕ್ಕೆ ಸರ್ಕಾರ ಸಾಧ್ಯವಿರುವ ತನ್ನೆಲ್ಲಾ ಪ್ರಯತ್ನ ನಡೆಸಿದ ಹೊರತಾಗಿಯೂ ವಿಪಕ್ಷಗಳು ಅದನ್ನು ತಡೆಯುವ ಮೂಲಕ ಮಹಿಳೆಯರ ಕನಸುಗಳನ್ನು ಕರುಣೆ ಇಲ್ಲದೇ ಪುಡಿಗಟ್ಟಿದವು. ಇದು ಭ್ರೂಣಹತ್ಯೆಗೆ ಸಮ. ಆದರೆ ಮಹಿಳಾ ಸಬಲೀಕರಣ ಮಾಡಿಯೇ ಸಿದ್ಧ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಗುಡುಗಿದ್ದಾರೆ.

ಜತೆಗೆ, ‘ಮಹಿಳೆಯರ ಸಬಲೀಕರಣದ ಗುರಿ ಹೊಂದಿರುವ ನಾರಿ ಶಕ್ತಿ ಉಪಕ್ರಮವು ಒಂದು ಮಹಾಯಜ್ಞ. ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ಕುಗ್ಗುವುದಿಲ್ಲ. ನಮ್ಮ ಆಂತಃಶಕ್ತಿ ಶಕ್ತಿ ಅಜೇಯವಾಗಿದೆ. ಇನ್ನಷ್ಟು ಅವಕಾಶಗಳು ನಮ್ಮ ಮುಂದೆ ಬರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಲೋಕಸಭೆಯಲ್ಲಿ ಮಹಿಳಾ ಮೀಸಲು ತಿದ್ದುಪಡಿ ವಿಧೇಯಕಕ್ಕೆ ಸೋಲಾದ ಬೆನ್ನಲ್ಲೇ ಶನಿವಾರ ರಾತ್ರಿ 8:30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಪ್ರಮುಖ ವಿಪಕ್ಷಗಳಾದ ಕಾಂಗ್ರೆಸ್‌, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇದಕ್ಕೂ ಮುನ್ನ ಸಂಪುಟ ಸಭೆ ಹಾಗೂ ತಮಿಳುನಾಡಿನ ಚುನಾವಣಾ ರ್‍ಯಾಲಿಯಲ್ಲೂ ಪ್ರಹಾರ ಮಾಡಿದರು.

ಮೋದಿ ಹೇಳಿದ್ದೇನು?:

ಮಹಿಳಾ ಮೀಸಲು ತಿದ್ದುಪಡಿ ಮಸೂದೆಗೆ ಸೋಲುಣಿಸಿದ ವಿಪಕ್ಷಗಳ ಕ್ರಮವನ್ನು ಭ್ರೂಣಹತ್ಯೆ ಎಂದು ಬಣ್ಣಿಸಿದ ಮೋದಿ, ’ಈ ವಂಚನೆಗಾಗಿ ಮಹಿಳೆಯರು ವಿಪಕ್ಷಗಳನ್ನು ಕಠಿಣವಾಗಿ ಶಿಕ್ಷಿಸಲಿದ್ದಾರೆ. ಶೇ.66ರಷ್ಟು ಮತ ಪಡೆಯುವಲ್ಲಿ ಸರ್ಕಾರ ವಿಫಲವಾಗಿರಬಹುದು, ಆದರೆ ನಾರಿಶಕ್ತಿಯ ಶೇ.100ರಷ್ಟು ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.

‘ಸ್ವಾರ್ಥದ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್‌, ಡಿಎಂಕೆ, ಟಿಎಂಸಿ ಮತ್ತು ಸಮಾಜವಾದಿಯಂಥ ಪಕ್ಷಗಳು ದೇಶದ ಮಹಿಳೆಯರ ಹಿತಾಸಕ್ತಿಯನ್ನು ಬಲಿಗೊಟ್ಟು, ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲು ನೀಡುವ ಸರ್ಕಾರದ ಯತ್ನವನ್ನು ವಿಫಲಗೊಳಿಸಿದವು. ವಿಪಕ್ಷಗಳ ಇಂಥ ಪ್ರಯತ್ನಕ್ಕೆ ನಾನು ದೇಶದ ಎಲ್ಲಾ ಮಹಿಳೆಯರ ಕ್ಷಮೆ ಕೋರುತ್ತೇನೆ’ ಎಂದು ಹೇಳಿದರು.

ಮಹಿಳೆಯರ ಕನಸುಗಳು ಭಗ್ನ:

‘ಮಹಿಳೆಯರಿಗೆ ಮೀಸಲು ನೀಡಲು ರೂಪಿಸಲಾಗಿರುವ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ವಿರೋಧಿಸುವ ಮೂಲಕ ವಿಪಕ್ಷಗಳು, ಮಹಿಳೆಯರ ಅಧಿಕಾರವನ್ನು ಲಘುವಾಗಿ ಪರಿಗಣಿಸಿವೆ. ಭಾರತೀಯ ಮಹಿಳೆಯರ ಪ್ರಯಾಣಕ್ಕೆ ಹೇಗೆ ಅಡ್ಡಿ ಮಾಡಲಾಗಿದೆ ಎಂಬುದನ್ನು ಇಂದು ದೇಶದ ಪ್ರತಿಯೊಬ್ಬ ನಾಗರಿಕರೂ ವೀಕ್ಷಿಸಿದ್ದಾರೆ. ದೇಶದ ಮಹಿಳೆಯರ ಕನಸುಗಳನ್ನು ಅತ್ಯಂತ ನಿರ್ದಾಕ್ಷಿಣ್ಯವಾಗಿ ಹೊಸಕಿಹಾಕಲಾಗಿದೆ. ವಿಧೇಯಕ ಅಂಗೀಕಾರದ ವಿಷಯದಲ್ಲಿ ನಾವು ಸಾಕಷ್ಟು ಪ್ರಯತ್ನ ಪಟ್ಟ ಹೊರತಾಗಿಯೂ ಅದರಲ್ಲಿ ಯಶಸ್ಸು ಕಾಣಲಾಗಲಿಲ್ಲ’ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಶುಕ್ರವಾರ ಲೋಕಸಭೆಯಲ್ಲಿ ವಿಧೇಯಕಕ್ಕೆ ಸೋಲಾದ ಬಳಿಕ ವಿಪಕ್ಷಗಳ ಸಂಭ್ರಮಾಚರಣೆ ಬಗ್ಗೆ ಕಿಡಿಕಾರಿದ ಪ್ರಧಾನಿ ಮೋದಿ, ‘ಕಾಂಗ್ರೆಸ್, ಟಿಎಂಸಿ, ಡಿಎಂಕೆ ಪಕ್ಷಗಳು ತಮ್ಮ ಸ್ವಾರ್ಥದ ರಾಜಕೀಯವನ್ನು ಹೇಗೆ ಸಂಭ್ರಮಿಸಿದವು ಎಂಬುದನ್ನು ಇಡೀ ದೇಶದ ಮಹಿಳೆಯರು ವೀಕ್ಷಿಸಿದ್ದಾರೆ. ಅವರ ಬಣ್ಣ ಇದೀಗ ಬಯಲಾಗಿದೆ. ಮಹಿಳಾ ಮೀಸಲು ವಿರೋಧಿಸುವ ಮೂಲಕ ವಿಪಕ್ಷಗಳು ಅಪರಾಧ ಎಸಗಿವೆ. ಇದಕ್ಕೆ ಅವರು ಖಂಡಿತವಾಗಿಯೂ ಶಿಕ್ಷೆ ಅನುಭವಿಸಲಿದ್ದಾರೆ. ವಿಧೇಯಕಕ್ಕೆ ಸೋಲುಣಿಸುವ ಮೂಲಕ ವಿಪಕ್ಷಗಳು ನಮ್ಮ ಸಂವಿಧಾನವನ್ನು ಅವಮಾನಿಸಿದ್ದಾರೆ’ ಎಂದು ಗುಡುಗಿದರು.

ಕುಟುಂಬವಾದಕ್ಕೆ ಕುಟುಕು:

‘ಯಾರಿಂದಲೂ ಏನನ್ನೂ ಕಸಿದುಕೊಳ್ಳದೆಯೇ, ಮಹಿಳೆಯರಿಗೆ ಸಬಲೀಕರಣದ ರೆಕ್ಕೆಗಳನ್ನು ಕಲ್ಪಿಸುವುದು ವಿಧೇಯಕದ ಉದ್ದೇಶವಾಗಿತ್ತು. ಈ ಹಿಂದೆ ತಾನು ಮಾಡಿದ ತಪ್ಪನ್ನು ಕಾಂಗ್ರೆಸ್‌ ತಿದ್ದಿಕೊಳ್ಳುತ್ತದೆ ಎಂದು ನಾನು ಎಣಿಸಿದ್ದೆ. ಆದರೆ ಅವರು ತಮಗೆ ಸಿಕ್ಕ ಅವಕಾಶವನ್ನು ಕೈಚೆಲ್ಲಿದರು. ಕುಟುಂಬಗಳೇ ಮುನ್ನಡೆಸುವ ರಾಜಕೀಯ ಪಕ್ಷಗಳು, ಬೇರೆ ಮಹಿಳೆಯರು ರಾಜಕೀಯದಲ್ಲಿ ಮುಂದೆ ಬರುವುದನ್ನು ಬಯಸುವುದಿಲ್ಲ. ಏಕೆಂದರೆ ಅಂಥ ಬೆಳವಣಿಗೆ ಸ್ವಾರ್ಥದ ರಾಜಕೀಯಕ್ಕೆ ಕೊನೆ ಹಾಡಬಹುದು ಎಂಬ ಆತಂಕ ಅವರನ್ನು ಕಾಡುತ್ತಿರುತ್ತದೆ’ ಎಂದು ಹೆಸರು ಹೇಳದೆಯೇ ನಾಲ್ಕೂ ಪ್ರಮುಖ ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ಇದೇ ವೇಳೆ ಕಾಂಗ್ರೆಸ್‌ ವಿಭಜಕ ರಾಜಕೀಯ ನೀತಿ ಅನುಸರಿಸುತ್ತಿದೆ ಎಂದು ದೂರಿದ ಮೋದಿ, ‘ವಿಧೇಯಕವು ಉತ್ತರ- ದಕ್ಷಿಣವನ್ನು ವಿಭಜಿಸುತ್ತದೆ ಎಂಬ ಸುಳ್ಳು ಆರೋಪವನ್ನು ವಿಪಕ್ಷ ಮಾಡಿತು. ಮಹಿಳೆ ಯಾವುದನ್ನು ಬೇಕಾದರೂ ಮರೆಯಬಲ್ಲಳು ಆದರೆ ತನಗೆ ಆದ ಅವಮಾನವನ್ನು ಎಂದಿಗೂ ಸಹಿಸಲಾರಳು. ಇದೀಗ ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ಮಾಡಿದ ಅವಮಾನವು ಎಂದೆಂದಿಗೂ ಮಹಿಳೆಯ ಹೃದಯದಲ್ಲಿ ಹಾಗೆಯೇ ಉಳಿದುಕೊಂಡಿರುತ್ತದೆ’ ಎಂದು ಚಾಟಿ ಬೀಸಿದರು.

ನಾರಿ ಶಕ್ತಿ ಉಪಕ್ರಮ ಮಹಾಯಜ್ಞ:

‘21ನೇ ಶತಮಾನದಲ್ಲಿ ಮಹಿಳೆಯರ ಸಬಲೀಕರಣದ ಗುರಿಯನ್ನು ಹೊಂದಿರುವ ನಾರಿ ಶಕ್ತಿ ಉಪಕ್ರಮವು ಮಹಾಯಜ್ಞ. ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಯನ್ನು ಹರಡುತ್ತಿವೆ. ಸಾರ್ವಜನಿಕರಲ್ಲಿ ಗೊಂದಲ ಮೂಡಿಸಲು ದಾರಿತಪ್ಪಿಸುವ ನಿರೂಪಣೆಗಳನ್ನು ಬಳಸುತ್ತಿವೆ. ಇಂದು ನನ್ನ ದೇಶದ ತಾಯಂದಿರು, ಸಹೋದರಿಯರು, ಹೆಣ್ಣುಮಕ್ಕಳು... ನೀವೆಲ್ಲರೂ ದುಃಖಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಾನು ಕೂಡ ನಿಮ್ಮ ದುಃಖದಲ್ಲಿ ಭಾಗಿಯಾಗಿದ್ದೇನೆ. ಆದರೆ ನಮ್ಮ ಪ್ರಯತ್ನ ನಿಲ್ಲುವುದಿಲ್ಲ, ನಮ್ಮ ಪ್ರಯತ್ನ ಕುಗ್ಗುವುದಿಲ್ಲ, ನಮ್ಮ ಆಂತರಿಕ ಶಕ್ತಿ ಅಜೇಯವಾಗಿದೆ. ಹೆಚ್ಚಿನ ಅವಕಾಶಗಳು ನಮ್ಮ ಮುಂದೆ ಬರಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಸುಧಾರಣಾ ವಿರೋಧಿ:

‘ನಾರಿ ಶಕ್ತಿ ವಂದನಾ ಅಧಿನಿಯಮವು, ಈ ಕಾಲದ ಅಗತ್ಯವಾಗಿತ್ತು. ಜೊತೆಗೆ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮದ ನಡುವೆ ಸಮತೋಲಿತ ಸಬಲೀಕರಣದ ಪ್ರಾಮಾಣಿಕ ಪ್ರಯತ್ನವಾಗಿತ್ತು. ಆದರೆ ದೇಶವನ್ನು ಕಟ್ಟುವ ಮತ್ತು ದೇಶದ ಅಭ್ಯುದಯದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್‌ ಎಂದೆಂದಿಗೂ ವಿರೋಧಿಸಿಕೊಂಡೇ ಬಂದಿದೆ. ನಮ್ಮೊಂದಿಗೆ ಇತರ ಹಲವಾರು ದೇಶಗಳು ಸ್ವಾತಂತ್ರ್ಯವನ್ನು ಗಳಿಸಿದವು. ಹೆಚ್ಚಿನ ದೇಶಗಳು ನಮಗಿಂತ ಬಹಳ ಮುಂದೆ ಹೋಗಿವೆ. ಇದರ ಹಿಂದಿನ ಕಾರಣವೆಂದರೆ ಕಾಂಗ್ರೆಸ್ ಎಲ್ಲಾ ಸುಧಾರಣೆಗಳನ್ನು ನಿಲ್ಲಿಸಿತು’ ಎಂದು ಮೋದಿ ಟೀಕಿಸಿದರು.

‘ಲಟ್ಕಾನಾ, ಭಟ್ಕಾನಾ, ಅಟ್ಕಾನಾ’ (ತಡೆಗಳು, ಅಡ್ಡಿ, ತೊಂದರೆ) ಎಂಬುದು ಕಾಂಗ್ರೆಸ್ಸಿನ ತತ್ವ ಮತ್ತು ಕಾರ್ಯವಿಧಾನ. ಅದು ನೆರೆಯ ರಾಷ್ಟ್ರಗಳೊಂದಿಗಿನ ಗಡಿ ಸಮಸ್ಯೆಗಳನ್ನು ಸ್ಥಗಿತಗೊಳಿಸಿತು. ಪಾಕಿಸ್ತಾನದೊಂದಿಗಿನ ಜಲ ವಿವಾದಗಳನ್ನು ಸ್ಥಗಿತಗೊಳಿಸಿತು. 40 ವರ್ಷಗಳ ಕಾಲ ಒಬಿಸಿ ಮೀಸಲಾತಿ ನಿರ್ಧಾರವನ್ನು ಸ್ಥಗಿತಗೊಳಿಸಿತು. 40 ವರ್ಷಗಳ ಕಾಲ ‘ಏಕ ಶ್ರೇಣಿ ಏಕ ಪಿಂಚಣಿ’ಯನ್ನು ಸ್ಥಗಿತಗೊಳಿಸಿತು. ಕಾಂಗ್ರೆಸ್ಸಿನ ಈ ವರ್ತನೆ ಯಾವಾಗಲೂ ದೇಶಕ್ಕೆ ಹಾನಿ ಮಾಡಿದೆ. ಕಾಂಗ್ರೆಸ್ಸಿನ ಎಲ್ಲಾ ವಿರೋಧ, ನಿರ್ಣಯವಿಲ್ಲದಿರುವಿಕೆ ಮತ್ತು ವಂಚನೆಯಿಂದಾಗಿ ದೇಶವು ಸಂಕಷ್ಟಕ್ಕೆ ಸಿಲುಕಿದೆ. ಇಂದು ದೇಶ ಎದುರಿಸುತ್ತಿರುವ ಎಲ್ಲಾ ದೊಡ್ಡ ಸವಾಲುಗಳು ಕಾಂಗ್ರೆಸ್ಸಿನ ಈ ನಡವಳಿಕೆಯಿಂದ ಹುಟ್ಟಿಕೊಂಡಿವೆ’ ಎಂದು ಆಕ್ರೋಶಿಸಿದರು.

ಇದನ್ನು ಒಂದು ದೊಡ್ಡ ಸೈದ್ಧಾಂತಿಕ ಯುದ್ಧ ಎಂದು ಕರೆದ ಪ್ರಧಾನಿ, ‘ಈ ಹೋರಾಟವು ಕೇವಲ ಕಾನೂನಿನ ಕುರಿತಾಗಿ ಇರುವಂಥದ್ದಲ್ಲ. ಬದಲಿಗೆ, ಕಾಂಗ್ರೆಸ್ಸಿನ ಸುಧಾರಣಾ ವಿರೋಧಿ ಮನಃಸ್ಥಿತಿಯ ಬಗ್ಗೆ ಇರುವಂಥದ್ದು. ದೇಶದ ಮಹಿಳೆಯರು ಕಾಂಗ್ರೆಸ್ಸಿನ ಈ ಮನಃಸ್ಥಿತಿಗೆ ಸೂಕ್ತ ಉತ್ತರ ನೀಡುತ್ತಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Women's reservation bill 2026: ದೇಶದ ಮಹಿಳೆಯರು ವಿಪಕ್ಷಗಳನ್ನು ಕ್ಷಮಿಸಲ್ಲ : ಹೆಚ್‌ಡಿಕೆ ಕಿಡಿ
ನಾರಿಶಕ್ತಿ ವಂದನಾ ಮಸೂದೆಗೆ ಸೋಲು: ದೇಶದ ಮಹಿಳೆಯರಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ