
ಆಸಿಫಾಬಾದ್: ಮನುಷ್ಯತ್ವ ಮರೆಯಾಗುತ್ತಿದೆಯೇ? ಕೇವಲ 20 ರೂಪಾಯಿಗಾಗಿ ಮನುಷ್ಯನ ಪ್ರಾಣ ತೆಗೆಯುವಷ್ಟು ಕ್ರೌರ್ಯ ಸಮಾಜದಲ್ಲಿ ಬೆಳೆಯುತ್ತಿದೆಯೇ? ಇಂತಹದ್ದೇ ಒಂದು ಬೆಚ್ಚಿಬೀಳಿಸುವ ಘಟನೆ ತೆಲಂಗಾಣದ ಕೊಮುರಂ ಭೀಮ್ ಆಸಿಫಾಬಾದ್ ಜಿಲ್ಲೆಯ ರೆಬ್ಬೆನ ಮಂಡಲದಲ್ಲಿ ನಡೆದಿದೆ. ಚಹಾ ಕುಡಿಯಲು 20 ರೂಪಾಯಿ ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ವೃದ್ಧನ ತಲೆಯನ್ನೇ ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಆಸಿಫಾಬಾದ್ ಮಂಡಲದ ಪರ್ಸನಂಬಾಲ ಗ್ರಾಮದ ನಿವಾಸಿ ಮಸಾದಿ ಸೋಮಯ್ಯ (65) ಹತ್ಯೆಯಾದ ದುರ್ದೈವಿ. ಸೋಮಯ್ಯ ಅವರು ತಮ್ಮ ಪತ್ನಿಯೊಂದಿಗೆ ರೆಬ್ಬೆನ ಮಂಡಲದ ನಂಬಾಲ ಗ್ರಾಮದಲ್ಲಿರುವ ತಮ್ಮ ಕಿರಿಯ ಮಗಳ ಮನೆಗೆ ಅತಿಥಿಯಾಗಿ ಬಂದಿದ್ದರು. ಶುಕ್ರವಾರ ಮಧ್ಯಾಹ್ನ ರೆಬ್ಬೆನ ರೈಲ್ವೇ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಸೋಮಯ್ಯ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಎದುರಾದ ತುಂಗೆಡ ಗ್ರಾಮದ ನಿವಾಸಿ ಬೋಗಾರಪು ನಾಗೇಶ್ ಎಂಬಾತ, ಸೋಮಯ್ಯ ಅವರನ್ನು ತಡೆದು ಚಹಾ ಕುಡಿಯಲು 20 ರೂಪಾಯಿ ಕೊಡುವಂತೆ ಕೇಳಿದ್ದಾನೆ. ಸೋಮಯ್ಯ ಅವರು ನನ್ನ ಬಳಿ ಹಣವಿಲ್ಲ ಎಂದು ಹೇಳಿ ಮುಂದೆ ಸಾಗಿದ್ದಾರೆ.
ಸೋಮಯ್ಯ ಹಣ ನೀಡದಿದ್ದಕ್ಕೆ ಆಕ್ರೋಶಗೊಂಡ ನಾಗೇಶ್, ಅವರನ್ನು ಬೆನ್ನಟ್ಟಿದ್ದಾನೆ. ಹಣ ನೀಡದಿದ್ದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆದರೂ ಸೋಮಯ್ಯ ನಡೆದು ಹೋಗುತ್ತಿದ್ದಾಗ, ನಾಗೇಶ್ ತನ್ನ ಬಳಿಯಿದ್ದ ಕೊಡಲಿಯಿಂದ ಕುತ್ತಿಗೆಗೆ ಬಲವಾಗಿ ಏಟು ನೀಡಿದ್ದಾನೆ. ದಾಳಿಯ ತೀವ್ರತೆಗೆ ಸೋಮಯ್ಯ ಅವರ ತಲೆ ಮತ್ತು ದೇಹ ಬೇರ್ಪಟ್ಟಿದೆ. ಪಟ್ಟಹಗಲೇ ರಸ್ತೆಯಲ್ಲೇ ನಡೆದ ಈ ಭೀಕರ ದೃಶ್ಯವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಜನರು ಕಿರುಚಾಡಲು ಆರಂಭಿಸುತ್ತಿದ್ದಂತೆ ಆರೋಪಿ ನಾಗೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಆಸಿಫಾಬಾದ್ ಡಿಎಸ್‌ಪಿ ಅಶೋಕ್, ಸಿಐ ಸಂಜಯ್ ಮತ್ತು ಎಸ್‌ಐ ವೆಂಕಟಕೃಷ್ಣ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸೋಮಯ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸಿಫಾಬಾದ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಬೋಗಾರಪು ನಾಗೇಶ್‌ಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕೇವಲ 20 ರೂಪಾಯಿಗಾಗಿ ನಡೆದ ಈ ಅಮಾನವೀಯ ಹತ್ಯೆ ಇಡೀ ಜಿಲ್ಲೆಯನ್ನೇ ನಡುಗಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ