
ಶ್ರೀರಾಂಪುರ (ಪಶ್ಚಿಮ ಬಂಗಾಳ): ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಶ್ರೀಮಂತರಿಗೆ ಸಹಾಯ ಮಾಡುತ್ತಿದ್ದಾರೆ, ಬಡವರಿಗಲ್ಲ. ಇಬ್ಬರಿಗೂ ಅಧಿಕಾರ ಬೇಕು. ಆದರೆ ಅವರು ಜನರಿಗಾಗಿ ಕೆಲಸ ಮಾಡುವುದಿಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ.
ಅಲ್ಲದೆ, ‘ನಾರದ ಹಗರಣ, ರೋಸ್ ವ್ಯಾಲಿ ಸೇರಿ ಅನೇಕ ಹಗರಣಗಳಲ್ಲಿ ಟಿಎಂಸಿ ಭಾಗಿ ಆಗಿದೆ. ಗೂಂಡಾ ಟ್ಯಾಕ್ಸ್ ಸಂಗ್ರಹಿಸುತ್ತಾರೆ. ನನ್ನ ಮೇಲೆ ಕೇಸು ಹಾಕಿಸಿ ಇ.ಡಿ. ವಿಚಾರಣೆ ನಡೆಸಿದ ಮೋದಿ, ಮಮತಾ ಮೇಲೆ ಏಕೆ ಕೇಸು ಹಾಕಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
ಹೂಗ್ಲಿ ಜಿಲ್ಲೆಯ ಶ್ರೀರಾಂಪುರದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಮೋದಿ ತಾನೊಬ್ಬ ದೇಶಭಕ್ತ ಎಂದು ಹೇಳಿಕೊಳ್ಳುತ್ತಾರೆ, ಆದರೆ ದೇಶವನ್ನೇ ಮಾರುತ್ತಿದ್ದಾರೆ. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಬಡವರ ಬದಲು, ಶ್ರೀಮಂತರಿಗೆ ಸಹಾಯ ಮಾಡುತ್ತಿದ್ದಾರೆ. ಆದರೆ ಮೋದಿ ದೇಶಾದ್ಯಂತ ಅದನ್ನೇ ಮಾಡುತ್ತಿದ್ದಾರೆ. ಅವರಿಬ್ಬರೂ ಅಧಿಕಾರವನ್ನು ಬಯಸುತ್ತಾರೆ, ಆದರೆ ಜನರಿಗಾಗಿ ಕೆಲಸ ಮಾಡುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.
‘ಪ್ರಧಾನಿ ಎಲ್ಲೇ ಹೋದರೂ ಜನರಲ್ಲಿ ದ್ವೇಷ ಮತ್ತು ಭಯವನ್ನು ಹರಡುತ್ತಾರೆ. ದೇಶವು 2 ಸಿದ್ಧಾಂತಗಳ ನಡುವಿನ ಹೋರಾಟವನ್ನು ನೋಡುತ್ತಿದೆ. ಅದು ಬಿಜೆಪಿ-ಆರ್‌ಎಸ್‌ಎಸ್‌ನ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಕಾಂಗ್ರೆಸ್‌ನ ಏಕತೆ ಮತ್ತು ಸಹೋದರತ್ವದ ಹೋರಾಟ’ ಎಂದು ಬಣ್ಣಿಸಿದರು.
ರಾಹುಲ್ ಗಾಂಧಿ ಸುಳ್ಳು ಹೇಳುವುದನ್ನು ಬಿಡಬೇಕು. ಚುನಾವಣೆ ವೇಳೆಯೂ ಟಿಎಂಸಿ ನಾಯಕರ ಮೇಲೆ ಇ.ಡಿ. ಹಾಗೂ ಸಿಬಿಐ ದಾಳಿ ನಡೆದಿವೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ತೃಣಮೂಲ ಕಾಂಗ್ರೆಸ್ ತಿರುಗೇಟು ನೀಡಿದೆ.
‘ಪಶ್ಚಿಮ ಬಂಗಾಳದ ಜನರು ಗುಂಡಿಗೆ ಮತಗಳ ಮೂಲಕ ಉತ್ತರ ನೀಡುತ್ತಾರೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿರುವ ಸಿಎಂ ಮಮತಾ ಬ್ಯಾನರ್ಜಿ, ಇಂತಹ ಹಿಂಸಾತ್ಮಹ ಹೇಳಿಕೆ ನೀಡಿದ ಶಾ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
‘ಟಿಎಂಸಿಯ ಗೂಂಡಾಗಳು ಸ್ಫೋಟಗಳ ಮೂಲಕ ರಾಜ್ಯದಲ್ಲಿನ್ನು ಭಯ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಕಾರಣ, ಬಾಂಬ್‌ಗೆ ಜನ ಬ್ಯಾಲೆಟ್ (ಮತ) ಮೂಲಕ ಹಾಗೂ ಭಯಕ್ಕೆ ನಂಬಿಕೆಯ ಮೂಲಕ ಉತ್ತರ ನೀಡುತ್ತಾರೆ’ ಎಂದು ಶಾ ಹೇಳಿದ್ದರು. ಇದಕ್ಕೆ ಹೂಗ್ಲಿಯಲ್ಲಿ ಸಭೆಯನ್ನುದ್ದೇಶಿಸಿ ಪ್ರತಿಕ್ರಿಯಿಸಿದ ಮಮತಾ, ‘ಗೃಹ ಸಚಿವರಾಗಿ ಅವರು ಅಂತಹ ಭಾಷೆಯನ್ನು ಬಳಸಬಾರದು. ನಾವು ಶಾ ವಿರುದ್ಧ ಕೇಸ್ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ