ನವದೆಹಲಿ(ಡಿ.31): ಮುಂಜಾಗ್ರತಾ ಲಸಿಕೆ ಅಥವಾ ಬೂಸ್ಟರ್ ಡೋಸ್(Booster Dose) ನೀಡುವ ಸಂದರ್ಭದಲ್ಲಿ ಮೊದಲು ಪಡೆದಿದ್ದ ಕಂಪನಿಯ ಲಸಿಕೆಯನ್ನೇ ನೀಡಬೇಕೇ ಅಥವಾ ಬೇರೊಂದು ಲಸಿಕೆ ನೀಡಬೇಕೇ ಎಂಬ ಬಗ್ಗೆ ಜನವರಿ 10ರ ಒಳಗಾಗಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಗುರುವಾರ ಕೋವಿಡ್ ಸ್ಥಿತಿಗತಿ ಕುರಿತಂತೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ, ‘ಮುಂಜಾಗ್ರತಾ ಡೋಸ್‌ನಿಂದ ಸೋಂಕಿನ ಗಂಭೀರತೆ, ಆಸ್ಪತ್ರೆ ಸೇರುವ ಪ್ರಮಾಣ ಮತ್ತು ಸಾವಿನ ದರವನ್ನು ತಗ್ಗಿಸಬಹುದು. ಮೂರನೇ ಡೋಸ್ ವಿತರಣೆ ವೇಳೆ ಮೊದಲು ಪಡೆದ ಲಸಿಕೆ ಬದಲಾಗಿ ಬೇರೊಂದು ಲಸಿಕೆ ನೀಡಬೇಕೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗೆಯೇ ಮುಂಜಾಗ್ರತಾ ಲಸಿಕೆಯಾಗಿ ಯಾವ ಕಂಪನಿಯ ಲಸಿಕೆ ನೀಡಬೇಕು, ಯಾವ ಲಸಿಕೆ ಲಭ್ಯವಿದೆ, ಹೊಸ ಲಸಿಕೆಯಾದರೆ ಯಾವುದನ್ನು ನೀಡಬೇಕು ಎಂಬ ಬಗ್ಗೆಯೂ ಚರ್ಚೆ ಪ್ರಗತಿಯಲ್ಲಿದೆ. ಎಲ್ಲಾ ಅಂಕಿಅಂಶಗಳನ್ನು ಅವಲೋಕಿಸಲಾಗುತ್ತಿದೆ. ಈ ಬಗ್ಗೆ ಜ.10ರೊಳಗೆ ವಿವರವಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದೆ.
undefined
ಲಸಿಕೆ ಪಡೆಯಲು 5.25 ಲಕ್ಷ ಜನರಿಗೆ ಅರ್ಹತೆ
ಒಮಿಕ್ರೋನ್ ಭೀತಿ ಹಿನ್ನೆಲೆಯಲ್ಲಿ ಆರೋಗ್ಯ ಕಾರ‍್ಯಕರ್ತರು, ಮುಂಚೂಣಿ ಕಾರ‍್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟರೋಗಪೀಡಿತರಿಗೆ ಜ.10ರಿಂದ ಮೂರನೇ ಡೋಸ್ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಡಿ.25ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
60+ ಬೂಸ್ಟರ್ ಡೋಸ್:
ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವ್ಯಕ್ತಿಗಳು ಮುಂಜಾಗ್ರತಾ ಲಸಿಕೆ ಪಡೆಯಲು, ವೈದ್ಯರಿಂದ ಪ್ರಮಾಣಪತ್ರ ಪತ್ರ ತರುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ವಯೋವೃದ್ಧರ ಪ್ರಮಾಣಪತ್ರಕ್ಕಾಗಿ ಆಸ್ಪತ್ರೆಗಳಿಗೆ ಅಲೆಯುವ ಕೆಲಸವನ್ನು ತಪ್ಪಿಸಿದೆ. ಆದರೆ ಮುಂಜಾಗ್ರತಾ ಲಸಿಕೆ ಪಡೆಯುವ ಮುನ್ನ ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ಹೇಳಿದೆ.
ಈ ಕುರಿತು ಎಲ್ಲಾ ರಾಜ್ಯಗಳಿಗೆ ಮಾಹಿತಿ ರವಾನಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಜ.10ರಿಂದ 60 ವರ್ಷ ಮೇಲ್ಪಟ್ಟವರು ಮುಂಜಾಗ್ರತಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ಹೀಗೆ ಲಸಿಕೆ ಪಡೆಯಲು ಅರ್ಹರಾದವರು, ಲಸಿಕೆ ನೋಂದಣಿ ವೇಳೆ ಅಥವಾ ಲಸಿಕೆ ಪಡೆಯುವ ವೇಳೆ ತಮಗೆ ಯಾವುದೇ ಆರೋಗ್ಯ ಸಮಸ್ಯೆ ಇರುವ ಬಗ್ಗೆ ವೈದ್ಯರಿಂದ ಪ್ರಮಾಣ ಪತ್ರ ಸಲ್ಲಿಸಬೇಕಿಲ್ಲ. ಅದರೆ ಅವರು ತಾವು ಲಸಿಕೆ ಪಡೆಯಬಹುದೇ ಎಂಬುದರ ಕುರಿತು ವೈದ್ಯರೊಂದಿಗೆ ಪೂರ್ವ ಸಮಾಲೋಚನೆ ನಡೆಸುವುದು ಸೂಕ್ತ. ಎಲ್ಲಾ ಅರ್ಹರಿಗೂ ಲಸಿಕೆ ಪಡೆಯುವ ಸಮಯದ ಕುರಿತು ಎಸ್‌ಎಂಎಸ್ ಮೂಲಕ ಮಾಹಿತಿ ರವಾನಿಸಲಾಗುವುದು ಎಂದು ಹೇಳಿದೆ.
ದೇಶದಲ್ಲಿ ಸದ್ಯ ಲಭ್ಯವಿರೋ ಲಸಿಕೆ:
ದೇಶದಲ್ಲಿ ಕೊರೋನಾ ನಿಯಂತ್ರಣದ ನಿಟ್ಟಿನಲ್ಲಿ ಕೇಂದ್ರ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆ(ಸಿಡಿಎಸ್‌ಸಿಒ) ಮತ್ತೆರಡು ಲಸಿಕೆಗಳು ಮತ್ತು ಔಷಧಕ್ಕೆ ನಿಯಂತ್ರಿತ ತುರ್ತು ಬಳಕೆಗೆ ಅವಕಾಶ ನೀಡಿದೆ. ತನ್ಮೂಲಕ ಭಾರತದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಒಟ್ಟಾರೆ 8 ಲಸಿಕೆಗಳು ಮತ್ತು 4 ಚಿಕಿತ್ಸಕ ಮದ್ದುಗಳು ಲಭ್ಯವಿವೆ.
ಆಕ್ಸ್‌ಫರ್ಡ್ ವಿವಿ ಮತ್ತು ಅಸ್ಟ್ರಾಜೆನಿಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಕೋವಿಶೀಲ್ಡ್, ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್, ರಷ್ಯಾದ ಸ್ಪುಟ್ನಿಕ್-ವಿ, ಭಾರತದ್ದೇ ಆದ 3 ಡೋಸ್‌ನ ಸೂಜಿರಹಿತ ಲಸಿಕೆ ಝೈಡಸ್ ಕ್ಯಾಡಿಲಾ, ಅಮೆರಿಕದ ಮಾಡೆæರ್ನಾ, ಜಾನ್ಸನ್ ಅಂಡ್ ಜಾನ್ಸನ್, ಕೋವೋವ್ಯಾಕ್ಸ್, ಹೈದರಾಬಾದ್‌ನ ಬಯೋಲಾಜಿಕಲ್-ಇ ಸಂಸ್ಥೆಯ ಕೋರ್ಬೆವ್ಯಾಕ್ಸ್ ಸೇರಿ ಒಟ್ಟಾರೆ 8 ಲಸಿಕೆಗಳು ಲಭ್ಯವಿವೆ.