
ಬೆಂಗಳೂರು (ಆ.5): ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಗೆ ನಿಜವಾಗಿಯೂ ಭಾರತೀಯರೇ ಎಂದು ಪ್ರಶ್ನೆ ಮಾಡಿದ್ದು ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ. ನನ್ನ ಸಹೋದರ ಭಾರತೀಯನೇ ಅಲ್ಲವೇ ಅನ್ನೋದು ನಿರ್ಧಾರ ಮಾಡೋದು ಜಡ್ಜ್‌ಗಳಲ್ಲ ಎಂದು ಹೇಳುವ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಕೂಡ ಸುಪ್ರೀಂ ಕೋರ್ಟ್ ಅಭಿಪ್ರಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ದೇಶದ ಶ್ಯಾಡೋ ಪ್ರೈಮ್ ಮಿನಿಸ್ಟರ್ ರಾಹುಲ್ ಗಾಂಧಿಗೆ ಕೋರ್ಟ್ ಮಾಡಿದ ಅಪಮಾನ ಎಂದು ಹೇಳಿದ್ದಾರೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು "ನೀವು ನಿಜವಾದ ಭಾರತೀಯರಾ" ಎಂದು ಸುಪ್ರೀಕೋರ್ಟಿನ ನ್ಯಾಯಾಧೀಶರು ಪ್ರಶ್ನಿಸಿರುವುದು ದೇಶದಲ್ಲಿ ನ್ಯಾಯಾಂಗದ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಗೆ ನೀಡಿದ ಬೆಂಬಲ...!
ಭಾರತದ ವಿಪಕ್ಷ ನಾಯಕರನ್ನು ಈ ದೇಶದ ಸಂವಿಧಾನ "shadow prime minister" ಎಂದು ಗುರುತಿಸುತ್ತದೆ. ಈ ದೇಶದ "shadow prime minister" ಆಗಿರುವ ರಾಹುಲ್ ಗಾಂಧಿಯಂತಹ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು, ಮತ್ತೊಬ್ಬ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ "ನೀವು ಭಾರತೀಯರಾ? ಎಂದು ಪ್ರಶ್ನಿಸಿರುವುದು ದುರಾದೃಷ್ಟಕರ. ಇದು ದೇಶದ ಸಾಂವಿಧಾನಿಕ ಹುದ್ದೆಗೆ ಮಾಡಿದ ಅಪಚಾರ.
ಚೀನಾ ದೇಶ ಗಾಲ್ವಾಮಾ ಕಣಿವೆಯಲ್ಲಿ ಎರಡು ಸಾವಿರ ಚದರ ಕಿಲೋಮೀಟರ್ ಕ್ಕಿಂತ ಹೆಚ್ಚು ಭೂಪ್ರದೇಶವನ್ನ ಆಕ್ರಮಿಸಿಕೊಂಡಿರುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರು ಸ್ಪಷ್ಟನೆ ಕೇಳಲಾಗಿತ್ತು. ಈ ಕುರಿತು ಸಂಸತ್ತಿನಲ್ಲೇ ಸುಧೀರ್ಘ ಚರ್ಚೆ ನಡೆಸಲಾಗಿದೆ. 38 ಸಾವಿರ ಚದರ ಕಿಲೋಮೀಟರ್ ಭೂಪ್ರದೇಶ ಆಕ್ರಮಿಸಿಕೊಂಡಿರುವುದನ್ನು ಸದನದಲ್ಲೇ ಕೇಂದ್ರದ ವಿದೇಶಾಂಗ ರಾಜ್ಯ ಸಚಿವರಾಗಿದ್ದ ಮುರುಳಿಧರನ್ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಇದೇ ವಿಷಯದಲ್ಲಿ ಸುಪ್ರೀಕೋರ್ಟ್ ನ ನ್ಯಾಯಾಧೀಶರು ರಾಜಕೀಯ ನಾಯಕರಂತೆ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ.
ದೇಶದ ಸಂವಿಧಾನ ನೀಡಿದ ಸಾಂವಿಧಾನಿಕ ಹುದ್ದೆಯಲ್ಲಿರುವವರು, ಪ್ರಜಾಪ್ರಭುತ್ವದಡಿಯಲ್ಲಿ ಜನರಿಂದ ಆಯ್ಕೆಯಾದ ಸಂಸದರನ್ನು ಸುಪ್ರೀಂಕೋರ್ಟ್ ಅತ್ಯಂತ ಕೀಳುಮಟ್ಟದಿಂದ ವರ್ತಿಸಿರುವುದು ಶೋಭೆಯಲ್ಲ. ಆಳುವ ಸರ್ಕಾರವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕರು ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತುವುದೇ ಪ್ರಜಾಪ್ರಭುತ್ವದ ಸೌಂದರ್ಯ. ಸಂವಿಧಾನದ ಪರವಾಗಿ ಹೋರಾಡುತ್ತಾ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುತ್ತಿರುವ ರಾಹುಲ್ ಗಾಂಧಿ ಅವರ ಹೋರಾಟಕ್ಕ ಸುಪ್ರೀಂಕೋರ್ಟ್ ಬೆನ್ನಿಗೆ ನಿಲ್ಲಬೇಕಿತ್ತು.
ಸುಪ್ರೀಂಕೋರ್ಟ್ ಸೇರಿದಂತೆ ಇತ್ತೀಚಿಗೆ ಕೆಲವು ಹೈಕೋರ್ಟ್ ಗಳು ರಾಜಕೀಯ ಪ್ರೇರಿತ ನಿರ್ದೇಶನ ಹಾಗೂ ನೀಡುತ್ತಿರುವ ತೀರ್ಪುಗಳ ವಿರುದ್ಧ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸಂವಿಧಾನ ಹಾಗೂ ನ್ಯಾಯಂಗ ವ್ಯವಸ್ಥೆಯ ನಂಬಿಕೆ ಉಳಿಸಲಿ ಎಂದು ಒತ್ತಾಯಿಸುತ್ತೇನೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?: ಆಗಸ್ಟ್ 4 ರಂದು, ಸೈನ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯ ವಿಷಯದ ವಿಚಾರಣೆ ವೇಳೆ ರಾಹುಲ್ ಗಾಂಧಿ ಬಗ್ಗೆ ಕೋರ್ಟ್ ಬೇಸರ ವ್ಯಕ್ತಪಡಿಸಿತ್ತು.2022 ಡಿಸೆಂಬರ್ 16ರಂದು ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.'ಜನರು ಭಾರತ್ ಜೋಡೋ ಯಾತ್ರೆಯ ಬಗ್ಗೆ ಕೇಳುತ್ತಾರೆ, ಆದರೆ ಚೀನಾ 2000 ಚದರ ಕಿ.ಮೀ ಭಾರತೀಯ ಭೂಮಿಯನ್ನು ಆಕ್ರಮಿಸಿಕೊಂಡಿದೆ, 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು ಮತ್ತು ನಮ್ಮ ಸೈನಿಕರನ್ನು ಅರುಣಾಚಲದಲ್ಲಿ ಥಳಿಸಲಾಗುತ್ತಿದೆ, ಅವರು ಅದರ ಬಗ್ಗೆ ಮಾತನಾಡುತ್ತಿಲ್ಲ' ಎಂದು ಹೇಳಿದ್ದರು.
ಇದರ ಬಗ್ಗೆ ಪ್ರಶ್ನಿಸಿದ ಕೋರ್ಟ್, ಚೀನಾ 2 ಸಾವಿರ ಚದರ ಕಿಲೋಮೀಟರ್ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದೀರಿ? ಅದು ನಿಮಗೆ ಹೇಗೆ ಗೊತ್ತು? ನಿಜವಾದ ಭಾರತೀಯ ಹೀಗೆ ಹೇಳಲು ಸಾಧ್ಯವಿಲ್ಲ ಎಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ