ಪೌರತ್ವ ಕಾಯ್ದೆಗೆ ವಿದೇಶಗಳಲ್ಲೂ ಬೆಂಬಲ ಕ್ರೋಡೀಕರಣ | ವಿವಿಧ ದೇಶಗಳಿಗೆ ಸಿಎಎ, ಎನ್‌ಆರ್‌ಸಿ ಕುರಿತು ಮಾಹಿತಿ ಕೊಟ್ಟಭಾರತ ಸರ್ಕಾರ | ಬೆಂಬಲ ಕ್ರೋಡೀಕರಿಸಲು ಬಿಜೆಪಿಯಿಂದ ‘ಮಿಸ್ಡ್ ಕಾಲ್ ಅಭಿಯಾನ’ | ಇಂದು ಟೋಲ್ ಫ್ರೀ ಸಂಖ್ಯೆ ಬಿಡುಗಡೆ
ನವದೆಹಲಿ (ಜ. 03): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಲ್ಲಿ ಹಿಂಸಾತ್ಮಕ ಹೋರಾಟಗಳು ನಡೆದ ಬೆನ್ನಲ್ಲೇ, ಈ ಕಾಯ್ದೆ ಪರ ದೇಶ ವಿದೇಶಗಳಲ್ಲಿ ಬೆಂಬಲ ಕ್ರೋಡೀಕರಿಸಲು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮುಂದಾಗಿವೆ.
ಭಾರತ ಸರ್ಕಾರವು ವಿವಿಧ ದೇಶಗಳನ್ನು ಸಂಪರ್ಕಿಸಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಯತ್ನಿಸಿದೆ. ಇನ್ನೊಂದೆಡೆ ಪೌರತ್ವ ಕಾಯ್ದೆಗೆ ಬೆಂಬಲ ಯಾಚಿಸಿ ಭಾರತದಲ್ಲಿ ‘ಮಿಸ್ಡ್ ಕಾಲ್ ಆಂದೋಲನ’ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಟೋಲ್ ಫ್ರೀ ಸಂಖ್ಯೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಮಂಗಳೂರು ಗಲಭೆ : ಹೊರಬಿತ್ತು ಕಮ್ಮಕ್ಕು ನೀಡಿದ ಸ್ಫೋಟಕ ಮಾಹಿತಿ !
ವಿದೇಶಗಳಿಗೆ ಕಾಯ್ದೆ ಮಾಹಿತಿ:
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ವಕ್ತಾರ ರವೀಶ್ ಕುಮಾರ್, ‘ಜಗತ್ತಿನ ವಿವಿಧ ದೇಶಗಳನ್ನು ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ಕುರಿತಂತೆ ನಾವು ಸಂಪರ್ಕಿಸಿದೆವು. ಪೌರತ್ವ ತಿದ್ದುಪಡಿ ಕಾಯ್ದೆಯು ಕೇವಲ ಅಕ್ಕಪಕ್ಕದ ದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದವರಿಗೆ ಪೌರತ್ವ ನೀಡುವ ಉದ್ದೇಶ ಹೊಂದಿದೆ. ಇದರಿಂದ ಭಾರತದ ಸಂವಿಧಾನದ ಮೂಲ ತಳಹದಿಗೆ ಧಕ್ಕೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದೆವು’ ಎಂದರು.
ಮಿಸ್ಡ್ ಕಾಲ್ ಆಂದೋಲನ
‘ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಕ್ರೋಡೀಕರಿಸಲು ಬಿಜೆಪಿ, ಶುಕ್ರವಾರ ಟೋಲ್ ಫ್ರೀ ಸಂಖ್ಯೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡಲು ಇಚ್ಛಿಸುವವರು ಯಾವುದೇ ಶುಲ್ಕ ಇಲ್ಲದೇ ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಹೇಳಿದರು.
ಪರಿಶೀಲನೆಗೆ ಬಂದು ನಿಂತಲ್ಲೇ ನಿಂತಿದ್ದ ರೈಲ್ವೇ ಸಚಿವ, ಅಂಡರ್‌ಪಾಸ್ ಠುಸ್
ಇನ್ನು ಜನವರಿ 5ರಿಂದ 10 ದಿನ ಇದೇ ಕಾಯ್ದೆಗೆ ಬೆಂಬಲ ಯಾಚಿಸಿ ಬಿಜೆಪಿ ದೇಶಾದ್ಯಂತ ಜನಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನವರಿ 5ರ ಭಾನುವಾರ ಅಮಿತ್ ಶಾ ಅವರು ದಿಲ್ಲಿಯ ಮನೆಯೊಂದಕ್ಕೆ ಭೇಟಿ ನೀಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಿ ಬೆಂಬಲ ಕೋರುವ ಸಾಧ್ಯತೆ ಇದೆ.