ಬ್ರಿಟಿಷರ ರೀತಿ ದೇಶದಲ್ಲಿ ಬಿಜೆಪಿ ಆಡಳಿತ: ರಾಹುಲ್‌ ಗಾಂಧಿ

By Govindaraj S  |  First Published Sep 8, 2022, 6:26 AM IST

ಈ ಹಿಂದೆ ಬ್ರಿಟಿಷರ ಆಡಳಿತದಲ್ಲಿ ಈಸ್ಟ್‌ ಇಂಡಿಯಾ ಕಂಪನಿಯ ಹಿಡಿತದಲ್ಲಿದ್ದ ಭಾರತ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೆರವಿನಿಂದಾಗಿ ಕೆಲವೇ ಕೆಲವು ಉದ್ಯಮಿಗಳ ಪಾಲಾಗಿದೆ. ಇಡೀ ದೇಶವನ್ನು ಕೆಲವೇ ವ್ಯಕ್ತಿಗಳು ನಿಯಂತ್ರಿಸುತ್ತಿದ್ದಾರೆ. 


ಕನ್ಯಾಕುಮಾರಿ (ಸೆ.08): ಈ ಹಿಂದೆ ಬ್ರಿಟಿಷರ ಆಡಳಿತದಲ್ಲಿ ಈಸ್ಟ್‌ ಇಂಡಿಯಾ ಕಂಪನಿಯ ಹಿಡಿತದಲ್ಲಿದ್ದ ಭಾರತ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೆರವಿನಿಂದಾಗಿ ಕೆಲವೇ ಕೆಲವು ಉದ್ಯಮಿಗಳ ಪಾಲಾಗಿದೆ. ಇಡೀ ದೇಶವನ್ನು ಕೆಲವೇ ವ್ಯಕ್ತಿಗಳು ನಿಯಂತ್ರಿಸುತ್ತಿದ್ದಾರೆ. ದೇಶದ ಆರ್ಥಿಕತೆ ಅತ್ಯಂತ ಗಂಭೀರ ಸ್ಥಿತಿಯಲ್ಲಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಧರ್ಮ ಮತ್ತು ಭಾಷೆಯ ಹೆಸರಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ರಾಹುಲ್‌ ಗಾಂಧಿ ಅವರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. 

ಈ ಮೂಲಕ 2024ರ ಲೋಕಸಭಾ ಚುನಾವಣೆಗೆ ಪಕ್ಷದ ರಣಕಹಳೆ ಮೊಳಗಿಸಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಪುನಶ್ಚೇತನ ನೀಡಲು ಹಮ್ಮಿಕೊಂಡಿರುವ ‘ಭಾರತ್‌ ಜೋಡೋ’ ಪಾದಯಾತ್ರೆಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಬುಧವಾರ ಚಾಲನೆ ನೀಡಿ ಮಾತನಾಡಿದ ರಾಹುಲ್‌ ಗಾಂಧಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿ, ಜಿಎಸ್‌ಟಿ, ಕೃಷಿ ಕಾಯ್ದೆ, ನಿರುದ್ಯೋಗ ಸಮಸ್ಯೆ ವಿಷಯದಲ್ಲಿ ತೀವ್ರ ವಾಗ್ದಾಳಿ ನಡೆಸಿದರು.

Tap to resize

Latest Videos

Bharat Jodo Yatra: ಸೆ.30ಕ್ಕೆ ಭಾರತ ಐಕ್ಯತಾ ಯಾತ್ರೆ ಕರ್ನಾಟಕ ಪ್ರವೇಶ

ಕನ್ಯಾಕುಮಾರಿಯಲ್ಲಿ ಬೃಹತ್‌ ಸಭೆಗೂ ಮುನ್ನ ಯಾತ್ರೆಯ ಆರಂಭದ ಸಂಕೇತವಾಗಿ ರಾಹುಲ್‌ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹಾಗೂ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್‌ ಬಾಘೇಲ್‌ ಅವರು ಖಾದಿ ರಾಷ್ಟ್ರಧ್ವಜ ನೀಡಿದರು. ಇದಕ್ಕೂ ಮುನ್ನ ರಾಹುಲ್‌ ಗಾಂಧಿ ಅವರು ತಂದೆ ರಾಜೀವ್‌ ಗಾಂಧಿ ಹತ್ಯೆಗೀಡಾದ ಸ್ಥಳವಾದ ತಮಿಳುನಾಡಿನ ಶ್ರೀಪೆರಂಬದೂರಿಗೆ ತೆರಳಿ ಪ್ರಾರ್ಥನೆ ನಡೆಸಿದರು. ಈ ವೇಳೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿ ಅನೇಕರು ಹಾಜರಿದ್ದರು. ಬುಧವಾರ ಆರಂಭವಾದ ಈ ಯಾತ್ರೆ 3570 ಕಿ.ಮೀ. ನಡೆಯಲಿದ್ದು, 5 ತಿಂಗಳ ಬಳಿಕ ಕಾಶ್ಮೀರದಲ್ಲಿ ಅಂತ್ಯವಾಗಲಿದೆ.

ಬ್ರಿಟಿಷರ ಆಡಳಿತ: ಕನ್ಯಾಕುಮಾರಿಯಲ್ಲಿ ಪಕ್ಷದ ಕಾರ್ಯಕರ್ತರ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌ ‘ಬ್ರಿಟಿಷರ ಕಾಲದಲ್ಲಿ ಭಾರತವನ್ನು ಈಸ್ಟ್‌ ಇಂಡಿಯಾ ಕಂಪನಿ ನಿಯಂತ್ರಿಸುತ್ತಿತ್ತು. ಇದೀಗ 3-4 ಕಂಪನಿಗಳು ಆ ಕೆಲಸ ಮಾಡುತ್ತಿವೆ. ನಾವು ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಯನ್ನು ಇದೀಗ ದೇಶ ಎದುರಿಸುತ್ತಿದೆ. ಪರಿಣಾಮ ದೇಶ ದುರಂತದ ಕಡೆಗೆ ಹೆಜ್ಜೆ ಹಾಕುತ್ತಿದೆ. ಆದರೆ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಟೀವಿಯಲ್ಲಿ ಕಾಣುವುದೇ ಇಲ್ಲ, ಅದರ ಬದಲಾಗಿ ಪ್ರಧಾನಿಯ ಚಿತ್ರ ಮಾತ್ರ ಗೋಚರಿಸುತ್ತದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ರೈತರು, ಕಾರ್ಮಿಕರು, ಸಣ್ಣ ಮತ್ತು ಮಧ್ಯಮ ವಲಯ ಉದ್ಯಮಗಳ ಮೇಲೆ ದಾಳಿ ನಡೆಸಿದೆ. ಬಂದರು, ವಿಮಾನ ನಿಲ್ದಾಣ, ಕಲ್ಲಿದ್ದಲು, ಇಂಧನ, ಟೆಲಿಕಾಂ ಸೇರಿದಂತೆ ಪ್ರತಿಯೊಂದು ಉದ್ಯಮ ಕೆಲವೇ ಉದ್ಯಮಿಗಳ ಪಾಲಾಗಿದೆ. ಅವರ ಬೆಂಬಲವಿಲ್ಲದೇ ಒಂದು ದಿನ ಕೂಡಾ ಪ್ರಧಾನಿ ಅಧಿಕಾರದಲ್ಲಿ ಇರಲಾರರು. ಅಪನಗದೀಕರಣ, ಜಿಎಸ್‌ಟಿ, 3 ಕೃಷಿ ಕಾಯ್ದೆಗಳು ಈ ಉದ್ಯಮಿಗಳಿಗೆ ಲಾಭ ಮಾಡಿಕೊಡಲೆಂದೇ ಜಾರಿಗೊಳಿಸಲಾಗಿದೆ ಎಂದು ರಾಹುಲ್‌ ಆರೋಪಿಸಿದರು.

ದೇಶ ವಿಜಭನೆಯ ಯತ್ನ: ನಮ್ಮ ರಾಷ್ಟ್ರಧ್ವಜ ನಮಗೆ ಯಾವುದೇ ಧರ್ಮವನ್ನು ಪಾಲಿಸುವ ಹಕ್ಕನ್ನು ಕಲ್ಪಿಸುತ್ತದೆ. ಆದರೆ ಇಂದು ಅದೇ ಧ್ವಜ ದಾಳಿಗೊಳಗಾಗಿದೆ. ಈ ರಾಷ್ಟ್ರಧ್ವಜ ನಮಗೆ ಸುಮ್ಮನೆ ಸಿಕ್ಕಿಲ್ಲ. ಅದನ್ನು ಭಾರತದ ಪ್ರತಿ ಧರ್ಮ, ಪ್ರದೇಶ ಮತ್ತು ಭಾಷೆಯ ಜನರು ದಕ್ಕಿಸಿಕೊಟ್ಟಿದ್ದಾರೆ. ಆದರೆ ಇಂದು ಅದೇ ಧರ್ಮ ಮತ್ತು ಭಾಷೆಯ ಹೆಸರಲ್ಲಿ ದೇಶವನ್ನು ವಿಭಜಿಸುವ ಕೆಲಸ ನಡೆಯುತ್ತಿದೆ. ಹೀಗಾಗಿಯೇ ದೇಶದ ಜನರನ್ನು ಒಂದುಗೂಡಿಸುವುದು ಮಹತ್ವದ್ದಾಗಿದ್ದು, ಈ ಕಾರಣಕ್ಕಾಗಿಯೇ ಭಾರತ್‌ ಜೋಡೋ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ಭಾರತೀಯರ ಧ್ವನಿಯನ್ನು ಆಲಿಸಲು ರೂಪಿಸಲಾಗಿದೆ ಎಂದು ರಾಹುಲ್‌ ಹೇಳಿದರು.

ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi

ನಿತ್ಯ 2 ಹಂತದ ಯಾತ್ರೆ: 12 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 3,570 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಕಾಶ್ಮೀರದಲ್ಲಿ ಯಾತ್ರೆ ಮುಕ್ತಾಯ ಆಗಲಿದ್ದು, ಮುಕ್ತಾಯಕ್ಕೆ 5 ತಿಂಗಳು ಹಿಡಿಯಲಿದೆ. ದಿನಕ್ಕೆ 2 ಹಂತದಲ್ಲಿ ಪಾದಯಾತ್ರೆ ಸಾಗಲಿದೆ. ಬೆಳಗ್ಗೆ 7 ಗಂಟೆಗೇ ನಿತ್ಯ ಪಾದಯಾತ್ರೆ ಆರಂಭವಾಗಿ 10.30ಕ್ಕೆ ವಿರಾಮ ತೆಗೆದುಕೊಳ್ಳಲಿದೆ. ನಂತರ 3.30ಕ್ಕೆ 2ನೇ ಹಂತದ ಪಾದಯಾತ್ರೆ ಆರಂಭವಾಗಿ ಸಂಜೆ 6.30ಕ್ಕೆ ಅಂತ್ಯಗೊಳ್ಳಲಿದೆ. ನಿತ್ಯ 22-23 ಕಿ.ಮೀ. ಸಾಗುವ ಉದ್ದೇಶ ಇರಿಸಿಕೊಳ್ಳಲಾಗಿದೆ. ಸೆ.10ರವರೆಗೆ ತಮಿಳುನಾಡಿನಲ್ಲಿ ಯಾತ್ರೆ ಸಾಗಲಿದ್ದು, ಸೆ.11ಕ್ಕೆ ಕೇರಳ, ಸೆ.30ಕ್ಕೆ ಕರ್ನಾಟಕ ತಲುಪಲಿದೆ. ಕರ್ನಾಟಕದಲ್ಲಿ 21 ದಿನ ಯಾತ್ರೆ ಏರ್ಪಾಡಾಗಿದೆ. ಕರ್ನಾಟಕದ ಮೈಸೂರು, ಬಳ್ಳಾರಿ ಹಾಗೂ ರಾಯಚೂರಿನ ಮೂಲಕ ಯಾತ್ರೆ ತೆಲಂಗಾಣ ಪ್ರವೇಶಿಸಲಿದೆ.

click me!