
ನವದೆಹಲಿ(ಜು.25): ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಾಂವಿಧಾನಿಕ 370ನೇ ವಿಧಿ ರದ್ದು, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕಲ್ಪಿಸುವ ತ್ರಿವಳಿ ತಲಾಖ್ ತಿದ್ದುಪಡಿ ಕಾಯ್ದೆ ಜಾರಿಯಾಗಿ 1 ವರ್ಷ ಪೂರೈಸಲಿರುವ ಹಿನ್ನೆಲೆ ಕಾರ‍್ಯಕ್ರಮಗಳನ್ನು ಏರ್ಪಡಿಸುವಂತೆ ಸೂಚಿಸಿ ಎಲ್ಲ ರಾಜ್ಯಗಳ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯ ಉಸ್ತುವಾರಿಗಳಿಗೆ ಕೇಂದ್ರ ಬಿಜೆಪಿ ನಾಯಕತ್ವ ಸೂಚಿಸಿದೆ.
ಅಲ್ಲದೆ, ಈ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಪ್ರಚುರಪಡಿಸುವಂಥ ಜಾಗೃತಿ ಕಾರ‍್ಯಕ್ರಮಗಳನ್ನು ನಡೆಸುವಂತೆ ಪತ್ರ ಮುಖೇನ ಸೂಚಿಸಲಾಗಿದೆ.
ಕಳೆದ ವರ್ಷದ ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ ಕಾಶ್ಮೀರವನ್ನು 2 ಭಾಗಗಳಾಗಿ ವಿಭಜಿಸಿ ಲಡಾಖ್ ಹಾಗೂ ಜಮ್ಮು-ಕಾಶ್ಮೀರ ಎಂಬ ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿತ್ತು. ಅಲ್ಲದೆ, ತ್ರಿವಳಿ ತಲಾಖ್ ಮೂಲಕ ತಕ್ಷಣವೇ ವಿಚ್ಛೇದನ ನೀಡುವುದನ್ನು ಅಪರಾಧಿಕರಣಗೊಳಿಸುವ ತ್ರಿವಳಿ ತಲಾಖ್ ಮಸೂದೆಗೆ ಕಳೆದ ವರ್ಷದ ಆ.1ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದರು. ಕೇಂದ್ರದ ಈ ಐತಿಹಾಸಿಕ ಕಾರ‍್ಯಕ್ರಮಗಳು ವರ್ಷ ಪೂರೈಸಲಿರುವ ಹಿನ್ನೆಲೆ, ಜು.28ರಿಂದ ಆ.3ರವರೆಗೆ ಸ್ಥಳೀಯ ಭಾಷೆಗಳಲ್ಲಿ ರಾರಯಲಿಗಳನ್ನು ಏರ್ಪಡಿಸಬೇಕು. ತನ್ಮೂಲಕ ಸರ್ಕಾರದ ಸಾಧನೆಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸಬೇಕು ಎಂದು ಸೂಚಿಸಲಾಗಿದೆ.
ಇದರನ್ವಯ ತಜ್ಞರು, ಸಾಮಾಜಿಕ ಕಾರ‍್ಯಕರ್ತರು ಹಾಗೂ ಇತರ ಸಮಾಜಮುಖಿಯಾಗಿ ಕಾರ‍್ಯನಿರ್ವಹಿಸುವವರೊಂದಿಗೆ ಬಿಜೆಪಿಯ 1 ವರ್ಷದ ಸಾಧನೆಗಳ ಕುರಿತಾಗಿ ಚರ್ಚಿಸುವ ವಿಡಿಯೋ ಕಾನ್ಫರೆನ್ಸ್‌ಗಳನ್ನು ಹಮ್ಮಿಕೊಳ್ಳಬೇಕು. ದೊಡ್ಡ ರಾಜ್ಯಗಳಲ್ಲಿ 5 ಹಾಗೂ ಸಣ್ಣ ರಾಜ್ಯಗಳಲ್ಲಿ 2 ವಿಡಿಯೋ ಕಾನ್ಫರೆನ್ಸ್‌ಗಳನ್ನು ಹಮ್ಮಿಕೊಳ್ಳಬೇಕು. ಇದಕ್ಕಾಗಿ ಪ್ರತೀ ಜಿಲ್ಲೆಯಿಂದ ಓರ್ವ ಸಾಮಾಜಿಕ ಕಾರ‍್ಯಕರ್ತ ಹಾಗೂ 50 ಬುದ್ಧಿವಂತರನ್ನು ಆಯ್ಕೆ ಮಾಡಿಕೊಳ್ಳುವಂತೆ ಈ ಪತ್ರದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಈ ಕುರಿತಾಗಿ ರಾಷ್ಟ್ರ ಮಟ್ಟದಲ್ಲಿ ವರ್ಚುವಲ್ ರಾರಯಲಿಯೊಂದನ್ನು ಆಯೋಜಿಸಲಾಗುತ್ತದೆ. ಜೊತೆಗೆ, ಕೇಂದ್ರ ಬಿಜೆಪಿ ನಾಯಕರೊಬ್ಬರು ಜಮ್ಮು-ಕಾಶ್ಮೀರ ಹಾಗೂ ಲಡಾಖ್‌ನಲ್ಲಿ ಆ.5ರಂದು ನಡೆಯಲಿರುವ ವಿಶೇಷ ಸ್ಥಾನಮಾನ ರದ್ದತಿಯ ವಾರ್ಷಿಕ ಕಾರ‍್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ