ರಾಹುಲ್‌ ಗಾಂಧಿ ಸಂಸತ್‌ ಸದಸ್ಯತ್ವ ರದ್ದತಿಗೆ ಬಿಜೆಪಿ ಬಿಗಿಪಟ್ಟು ; ಕ್ಷಮೆ ಕೇಳೋವರೆಗೂ ಮಾತಾಡಲು ಬಿಡಲ್ಲ ಎಂದ ಕೇಸರಿ ಪಕ್ಷ

By Kannadaprabha News  |  First Published Mar 18, 2023, 9:23 AM IST

ಪ್ರಶ್ನೆಗಾಗಿ ಲಂಚ ಹಗರಣದ ರೀತಿ ಸಮಿತಿ ರಚಿಸಿ ಲೋಕಸಭೆಯಿಂದ ರಾಹುಲ್‌ ಗಾಂಧಿಯನ್ನು ಉಚ್ಚಾಟಿಸಿ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಹೇಳಿದ್ದಾರೆ. 


ಹೊಸದೆಹಲಿ (ಮಾರ್ಚ್‌ 18, 2023): ನವದೆಹಲಿ: ಬ್ರಿಟನ್‌ನ ಕೇಂಬ್ರಿಜ್‌ ವಿಶ್ವವಿದ್ಯಾಲಯದಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭೆಯ ಸದಸ್ಯತ್ವವನ್ನೇ ರದ್ದುಗೊಳಿಸಬೇಕು ಎಂದು ಬಿಜೆಪಿ ಆಗ್ರಹ ಮಂಡಿಸಿದೆ. ‘2005ರಲ್ಲಿ ಪ್ರಶ್ನೆಗಾಗಿ ಲಂಚ ಹಗರಣ ಬೆಳಕಿಗೆ ಬಂದಾಗ ವಿಶೇಷ ಸಮಿತಿಯೊಂದನ್ನು ರಚನೆ ಮಾಡಲಾಗಿತ್ತು. ಆ ಸಮಿತಿ, 11 ಸಂಸದರ ಸದಸ್ಯತ್ವ ರದ್ದತಿ ಮಾಡಿತ್ತು. ಈ ಸಂಸದರು ಸಂಸತ್ತಿನ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಹೇಳಿತ್ತು. ಆ ನಿರ್ಧಾರವನ್ನು ಸುಪ್ರೀಂಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು.

ಇದೀಗ ರಾಹುಲ್‌ ಗಾಂಧಿ ಅವರು ಸಂಸತ್ತು, ಪ್ರಜಾಪ್ರಭುತ್ವ ಹಾಗೂ ದೇಶದ ಸಂಸ್ಥೆಗಳಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ರಾಹುಲ್‌ ಗಾಂಧಿ ಹೇಳಿಕೆ ಪರಿಶೀಲನೆಗೆ ವಿಶೇಷ ಸಮಿತಿಯೊಂದನ್ನು ರಚಿಸಿ, ಅವರ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಬೇಕು’ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಆಗ್ರಹಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ರಾಹುಲ್‌ ಗಾಂಧಿ ವಿರುದ್ಧ ಯೋಜಿತ ವೈಯಕ್ತಿಕ ದಾಳಿ: ಗಾಂಧಿ ಕುಟುಂಬ ಆಪ್ತ ಸ್ಯಾಮ್‌ ಪಿತ್ರೋಡಾ ಆಕ್ರೋಶ

‘ಯುರೋಪ್‌ ಹಾಗೂ ಅಮೆರಿಕದಲ್ಲಿ ರಾಹುಲ್‌ ಗಾಂಧಿ ನಿರಂತರವಾಗಿ ಸಂಸತ್ತು ಮತ್ತು ದೇಶದ ಗೌರವಕ್ಕೆ ಕಳಂಕ ಮೆತ್ತಿದ್ದಾರೆ. ಹೀಗಾಗಿ ಅವರನ್ನು ಸಂಸತ್ತಿನಿಂದ ಉಚ್ಚಾಟಿಸುವ ಸಮಯ ಬಂದಿದೆ’ ಎಂದಿದ್ದಾರೆ.

ಅದಾನಿ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತಾಡಿದ್ದಕ್ಕಾಗಿ ರಾಹುಲ್‌ ಗಾಂಧಿ ವಿರುದ್ಧ ಈ ಹಿಂದೆಯೇ ಹಕ್ಕುಚ್ಯುತಿ ಮಂಡಿಸಿರುವ ನಿಶಿಕಾಂತ್‌ ದುಬೆ, ಕಳೆದ ವಾರ ಆ ಕುರಿತು ನಡೆದ ವಿಚಾರಣೆ ಸಂದರ್ಭದಲ್ಲೂ ರಾಹುಲ್‌ ಸದಸ್ಯತ್ವ ರದ್ದತಿಗೊಳಿಸಬೇಕು ಎಂದು ವಾದ ಮಂಡಿಸಿದ್ದರು ಎಂದು ವರದಿಗಳು ತಿಳಿಸಿದ್ದವು.

ಇದನ್ನೂ ಓದಿ: Sorry Politics: ರಾಹುಲ್‌ - ಮೋದಿ ಕ್ಷಮೆ ಗಲಾಟೆಗೆ ಬಲಿಯಾಯ್ತು 2ನೇ ದಿನದ ಕಲಾಪ..!

ಕ್ಷಮೆ ಕೇಳುವವರೆಗೂ ರಾಹುಲ್‌ ಮಾತಾಡಲು ಬಿಡಲ್ಲ: ಬಿಜೆಪಿ ಪಟ್ಟು
ತಮ್ಮ ಮೇಲಿನ ಆರೋಪಗಳಿಗೆ ತಾವು ಲೋಕಸಭೆಯಲ್ಲಿ ಉತ್ತರ ನೀಡಲು ಬಯಸುವುದಾಗಿ ರಾಹುಲ್‌ ಗಾಂಧಿ ಹೇಳಿದ್ದರೆ, ಇತ್ತ ಅವರು ತಮ್ಮ ಲಂಡನ್‌ ಹೇಳಿಕೆ ಕುರಿತು ಕ್ಷಮೆ ಯಾಚಿಸುವವರೆಗೂ ರಾಹುಲ್‌ ಗಾಂಧಿಗೆ ಭಾಷಣ ಮಾಡಲು ಬಿಡದೇ ಇರಲು ಬಿಜೆಪಿ ಕೂಡಾ ಅಚಲ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಹೀಗಾಗಿ ಈಗಾಗಲೇ ಬಜೆಟ್‌ ಅಧಿವೇಶನದ 2ನೇ ಚರಣದ ಮೊದಲ 5 ದಿನ ಬಲಿ ಪಡೆದ ವಿವಾದ, ಉಳಿದ ದಿನಗಳನ್ನೂ ಆಹುತಿ ಪಡೆಯುವ ಸ್ಪಷ್ಟ ಸುಳಿವು ಸಿಕ್ಕಿದೆ.

ಗುರುವಾರ ಲೋಕಸಭೆ ಸ್ಪೀಕರ್‌ ಭೇಟಿ ಮಾಡಿದ್ದ ರಾಹುಲ್‌, ‘ನನ್ನ ವಿರುದ್ಧ ಸದನದಲ್ಲಿ 4 ಸಚಿವರು ಆರೋಪ ಮಾಡಿದ್ದಾರೆ. ನಾನು ಲೋಕಸಭೆ ಸದಸ್ಯನಾಗಿರುವ ಕಾರಣ, ನನ್ನ ಮೇಲಿನ ಆರೋಪಗಳಿಗೆ ಮೊದಲು ಅಲ್ಲೇ ಉತ್ತರ ನೀಡಲು ಬಯಸುತ್ತೇನೆ’ ಎಂದು ಹೇಳಿದ್ದರು. ಬಳಿಕ ಪತ್ರಿಕಾಗೋಷ್ಠಿಯಲ್ಲೂ ಇದನ್ನು ಪುನರುಚ್ಚರಿಸಿದ್ದರು.

ಆದರೆ, ‘ಭಾರತದಲ್ಲಿ ಪ್ರಜಾಪ್ರಭುತ್ವ ದಾಳಿಗೆ ತುತ್ತಾಗುತ್ತಿದೆ, ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಈ ವಿಷಯದಲ್ಲಿ ಅಮೆರಿಕ ಮತ್ತು ಯುರೋಪ್‌ ದೇಶಗಳು ಸುಮ್ಮನೆ ಕುಳಿತಿರುವುದು ಸರಿಯಲ್ಲ ಎಂಬ ರಾಹುಲ್‌ ಗಾಂಧಿ ಹೇಳಿಕೆ, ದೇಶಕ್ಕೆ ಮಾಡಿದ ಅವಮಾನ’ ಎಂದು ಟೀಕಿಸುತ್ತಿರುವ ಬಿಜೆಪಿ, ‘ಈ ವಿಷಯದಲ್ಲಿ ಮೊದಲು ರಾಹುಲ್‌ ದೇಶ ಮತ್ತು ಸಂಸತ್ತಿನ ಕ್ಷಮೆ ಯಾಚಿಸಬೇಕು. ಅಲ್ಲಿಯವರೆಗೂ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಬಿಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

click me!