'ನಾನು ದೇಶಕ್ಕಾಗಿ ಕೆಲಸ ಮಾಡ್ತೇನೆ, ಕುಟುಂಬಕ್ಕಾಗಿ ಅಲ್ಲ..' ಟ್ರೋಲ್‌ ಮಾಡಿದ ರಾಹುಲ್‌ ಗಾಂಧಿಗೆ ಅನಿಲ್‌ ಆಂಟನಿ ತಿರುಗೇಟು!

Published : Apr 08, 2023, 03:43 PM IST
'ನಾನು ದೇಶಕ್ಕಾಗಿ ಕೆಲಸ ಮಾಡ್ತೇನೆ, ಕುಟುಂಬಕ್ಕಾಗಿ ಅಲ್ಲ..' ಟ್ರೋಲ್‌ ಮಾಡಿದ ರಾಹುಲ್‌ ಗಾಂಧಿಗೆ ಅನಿಲ್‌ ಆಂಟನಿ ತಿರುಗೇಟು!

ಸಾರಾಂಶ

ಕಾಂಗ್ರೆಸ್‌ ಪಕ್ಷವನ್ನು ತೊರೆದು ಬಿಜೆಪಿ ಸೇರಿರುವ ಹಾಗೂ ಕಾಂಗ್ರೆಸ್‌ ವಿರುದ್ಧ ಮಾತನಾಡುತ್ತಿರುವ ಹೆಸರುಗಳನ್ನೆಲ್ಲಾ ಬಳಸಿಕೊಂಡು 'ಅದಾನಿ' ಹೆಸರಿನಲ್ಲಿ ರಾಹುಲ್‌ ಗಾಂಧಿ ಟ್ರೋಲ್‌ ಮಾಡಿದ್ದರು. ಅವರ ಈ ಟ್ವೀಟ್‌ಗೆ ಇತ್ತೀಚಿಗಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಅನಿಲ್‌ ಆಂಟನಿ 'ಸಂಸ್ಕಾರ'ದ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಏ.8): ಕಾಂಗ್ರೆಸ್‌ ಪಕ್ಷವನ್ನು ಬಿಟ್ಟು ಪ್ರಮುಖ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಈ ನಡುವೆ ರಾಹುಲ್‌ ಗಾಂಧಿ ಶನಿವಾರ ಮಾಡಿರುವ ಟ್ವೀಟ್‌ ಗಮನಸೆಳೆದಿದೆ. ಅದಾನಿ ಹೆಸರಿನಲ್ಲಿರುವ ಅಕ್ಷರಗಳನ್ನು ಬಳಸಿಕೊಂಡು, ಕಾಂಗ್ರೆಸ್‌ ತೊರೆದಿರುವ ಗುಲಾಂ ನಬಿ ಆಜಾದ್‌, ಬಿಜೆಪಿ ಸೇರಿರುವ ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್‌ ಕುಮಾರ್‌ ರೆಡ್ಡಿ, ಹಿಮಾಂತ ಬಿಸ್ವಾ ಶರ್ಮ ಹಾಗೂ ಅನಿಲ್‌ ಆಂಟನಿ ಅವರನ್ನು ಟ್ರೋಲ್‌ ಮಾಡಿದ್ದರು. ಇದರ ಬೆನ್ನಲ್ಲಿಯೇ ಮಾಜಿ ರಕ್ಷಣಾ ಸಚಿವ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್‌ ಆಂಟನಿ ನೀಡಿರುವ ತಿರುಗೇಟು ಗಮನಸೆಳೆದಿದೆ. 'ಶ್ರೀ ರಾಹುಲ್‌ ಗಾಂಧಿಯವರೇ ಒಂದು ರಾಷ್ಟ್ರೀಯ ಪಕ್ಷದ ಮಾಜಿ ಅಧ್ಯಕ್ಷ ಹಾಗೂ ಪ್ರಧಾನಿ ಅಭ್ಯರ್ಥಿ ಎಂದು ಕರೆಯಲ್ಪಡುವ ವ್ಯಕ್ತಿಯನ್ನು ಈ ರೀತಿಯಲ್ಲಿ ನೋಡುತ್ತಿರುವುದು ಬಹಳ ಬೇಸರ ಎನಿಸುತ್ತಿದೆ. ನೀವೀಗ ಆನ್‌ಲೈನ್‌/ಸೋಶಿಯಲ್‌ ಮೀಡಿಯಾ ಕೇಂದ್ರದ ಟ್ರೋಲ್‌ ಟೀಮ್‌ನಂತೆ ವರ್ತಿಸುತ್ತಿದ್ದೀರಿ. ರಾಷ್ಟ್ರೀಯ ನಾಯಕನ ವರ್ತನೆ ಇದಲ್ಲ. ದೇಶ ಕಟ್ಟುವ ಕೆಲಸಕ್ಕಾಗಿ ದಶಕಗಳಿಂದ ಕೊಡುಗೆ ನೀಡಿದ ಈ ನಾಯಕರುಗಳೊಂದಿಗೆ ನನ್ನ ಹೆಸರನ್ನೂ ನೋಡಲು ಬಹಳ ಖುಷಿಯಾಗುತ್ತದೆ. ಇವರೆಲ್ಲರೂ ಕೂಡ ಒಂದು ಕುಟುಂಬದ ಬದಲು, ಭಾರತ ಎನ್ನುವ ದೇಶಕ್ಕಾಗಿ ಕೆಲಸ ಮಾಡಲು ಆದ್ಯತೆ ನೀಡಿದ್ದರಿಂದ ಪಕ್ಷ ತೊರೆಯಬೇಕಾಯಿತು' ಎಂದು ರಾಹುಲ್‌ ಗಾಂಧಿಯವರ ಟ್ರೋಲ್‌  ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಅನಿಲ್‌ ಆಂಟನಿ ಅವರ ಟ್ವೀಟ್‌ಗೆ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. 'ಎದುರಾಳಿ ಪಕ್ಷದ ನಾಯಕರೊಬ್ಬರಿಗೆ ನೀವು  'ಶ್ರೀ' ಎನ್ನುವ ಒಕ್ಕಣೆ ಸೇರಿಸಿಯೇ ಸಂಬೋಧಿಸಿದ್ದು ನಿಮ್ಮ ಬಗ್ಗೆ ಹೇಳುತ್ತದೆ ಅನಿಲ್‌ ಜೀ. ನಮ್ಮ ನಾಗರೀಕತೆಯ ಸಂಸ್ಕಾರವಿದು' ಎಂದು ಕರ್ನಲ್‌ ರೋಹಿತ್‌ ದೇವ್‌ ಬರೆದಿದ್ದಾರೆ. 'ಎಂತಹ ವಿಪರ್ಯಾಸ ಮತ್ತು ದುಃಖದ ಸ್ಥಿತಿ, ಯುವ ಡೈನಾಮಿಕ್ ನಾಯಕ 53 ವರ್ಷದ ಉಚ್ಚಾಟಿತ ನಾಯಕನಿಗೆ ನಡವಳಿಕೆಯನ್ನು ಕಲಿಸಬೇಕಾಗಿದೆ ... ನಾಚಿಕೆಗೇಡು' ಎಂದು ಮಿಲಿಂದ್‌ ಎನ್ನುವವರು ಬರೆದಿದ್ದಾರೆ.

'ನಿಮ್ಮ ವಿಚಾರದಲ್ಲಿ ರಾಹುಲ್‌ ಗಾಂಧಿ ಈಗ ಎಲ್ಲವನ್ನೂ ಮರೆತಿದ್ದಾರೆ ಎಂದು ಕಾಣುತ್ತದೆ. ನೀವು ಯಾರು, ನಿಮ್ಮ ಪಕ್ಷ ಕಾಂಗ್ರೆಸ್‌ಗೆ ಏನು ಕೆಲಸ ಮಾಡಿದೆ ಅನ್ನೋದನ್ನು ತೋರಿಸ್ತಿದ್ದಾರೆ. ಸ್ವಾರ್ಥದ ಪರಮಾವಧಿ..' ಎಂದು ಮನಸ್‌ ಸೊಮೆಯಾ ಎನ್ನುವವರು ಬರೆದಿದ್ದಾರೆ. 'ಇದನ್ನು ಓದಲು ನೋವಾಗುತ್ತದೆ ಅನಿಲ್. ಭಾರತಕ್ಕೆ ಪ್ರಮುಖ ವಿಷಯಗಳನ್ನು ಎತ್ತುವ ಪ್ರತಿಪಕ್ಷದ ಅಗತ್ಯವಿರುವ ಸಮಯದಲ್ಲಿ, ನಾವು ರಾಹುಲ್ ಗಾಂಧಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುವಂತೆ ಕಾಣುತ್ತಿದ್ದೇವೆ. ದೇಶಕ್ಕೆ ಅತ್ಯಂತ ದುರದೃಷ್ಟಕರ ವಿಚಾರವಿದು' ಎಂದು ಲೇಖಕ ಸೂರಜ್‌ ಬಾಲಕೃಷ್ಣನ್‌ ಬರೆದುಕೊಂಡಿದ್ದಾರೆ.

'ಬಿಜೆಪಿಯಲ್ಲಿ ನನ್ನ ಅಣ್ಣ, ಸಾಂಬಾರ್‌ನಲ್ಲಿ ಕರಿಬೇವು ಇದ್ದ ಹಾಗೆ..' ಅನಿಲ್ ಆಂಟನಿ ಸಹೋದರನ ಟೀಕೆ!

'ರಾಹುಲ್ ಅವರೇ ಈ ಟ್ವೀಟ್ ಮಾಡಿದ್ದರೆ ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಹ್ಯಾಂಡಲ್ ಅನ್ನು ಬೇರೆಯವರು ನಿರ್ವಹಿಸುತ್ತಿದ್ದರೆ, ಅವರು ಎಷ್ಟು ವೃತ್ತಿಪರರಾಗಿಲ್ಲ ಎಂಬುದನ್ನು ತೋರಿಸುತ್ತದೆ' ಎಂದು ಇನ್ನೊಬ್ಬರು ಬರೆದಿದ್ದಾರೆ. 'ರಾಹುಲ್‌ ಗಾಂಧಿ ಇನ್ನೊಬ್ಬ ಟ್ರೋಲರ್‌ ಅಷ್ಟೇ, ನಾಯಕರಾಗುವ ಪ್ರೌಢಿಮೆ ಅವರಲ್ಲಿಲ್ಲ ಎನ್ನುವುದನ್ನು ತೋರಿಸುವ ಇನ್ನೊಂದು ಉದಾಹರಣೆ ಇದಷ್ಟೇ. ಈಗಲೂ ಕಾಂಗ್ರೆಸ್ ಪಕ್ಷದಲ್ಲಿರುವ ನಾಯಕರು ಮತ್ತು ಕಾರ್ಯಕರ್ತರ ಬಗ್ಗೆ ಅನುಕಂಪವಿದೆ' ಎಂದು ಬಿಆರ್‌ ಶ್ರೀನಿವಾಸನ್‌ ಬರೆದಿದ್ದಾರೆ.

ಕಾಂಗ್ರೆಸ್‌ ಹಿರಿಯ ನಾಯಕ ಎಕೆ ಆಂಟನಿ ಪುತ್ರ ಅನಿಲ್‌ ಆಂಟನಿ ಬಿಜೆಪಿಗೆ ಸೇರ್ಪಡೆ

ಮೋದಿ ಕುರಿತಾಗಿ ಬಿಬಿಸಿ ಮಾಡಿದ್ದ ಸಾಕ್ಷ್ಯಚಿತ್ರವನ್ನು ವಿರೋಧಿಸಿದ್ದ ಕಾರಣಕ್ಕೆ ಕಾಂಗ್ರೆಸ್‌ ಪಕ್ಷದವರಿಂದಲೇ ಬೆದರಿಕೆ ಕರೆಗಳನ್ನು ಎದುರಿಸಿದ್ದ ಕೇರಳ ಕಾಂಗ್ರೆಸ್‌ನ ಮಾಧ್ಯಮ ಸಂಯೋಜಕ ಅನಿಲ್‌ ಆಂಟನಿ ಕಳೆದ ಜನವರಿಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಗುರುವಾರ ಅವರು ನವದೆಹಲಿಯಲ್ಲಿ ಬಿಜೆಪಿ ಪಕ್ಷ ಸೇರಿದ್ದರು. ' ಬಿಜೆಪಿ ಸೇರುವ ಅನಿಲ್ ನಿರ್ಧಾರ ನನಗೆ ನೋವುಂಟು ಮಾಡಿದೆ. ಇದು ತುಂಬಾ ತಪ್ಪು ನಿರ್ಧಾರ. ಭಾರತದ ಆಧಾರವೆಂದರೆ ಏಕತೆ ಮತ್ತು ಧಾರ್ಮಿಕ ಸಾಮರಸ್ಯ. 2014 ರ ನಂತರ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದಿತು, ಅವರು ವ್ಯವಸ್ಥಿತವಾಗಿ ವೈವಿಧ್ಯತೆ ಮತ್ತು ಜಾತ್ಯತೀತತೆಯನ್ನು ದುರ್ಬಲಗೊಳಿಸುತ್ತಿದ್ದಾರೆ' ಎಂದು ಕಾಂಗ್ರೆಸ್‌ ಹಿರಿಯ ನಾಯಕ ಎಕೆ ಆಂಟನಿ, ಪುತ್ರ ಬಿಜೆಪಿ ಸೇರಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು.
ಇದಕ್ಕೂ ಉತ್ತರ ನೀಡಿರುವ ಅನಿಲ್‌, 'ಅವರು ನಮ್ಮ ತಂದೆ. ನಾನು ಅತ್ಯಂತ ಗೌರವ ಮತ್ತು ಪ್ರೀತಿ ತೋರುವ ವ್ಯಕ್ತಿ. ಆದರೆ ರಾಜಕೀಯವೇ ಬೇರೆ, ವೈಯಕ್ತಿಕ ಅಭಿರುಚಿಗಳು ಬೇರೆ. ನಮ್ಮಿಬ್ಬರ ಪ್ರೀತಿ ಯಾವ ರೀತಿಯಲ್ಲೂ ಬದಲಾಗುವುದಿಲ್ಲ' ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ