ಸಿಎಂಗೆ ವರಿಷ್ಠರಿಂದ ಮೂರು ಟಾರ್ಗೆಟ್‌!

By Kannadaprabha NewsFirst Published Jul 18, 2021, 7:22 AM IST
Highlights

* ವರಿಷ್ಠ ನಾಯಕರ ಜತೆ ಯಡಿಯೂರಪ್ಪ ಮಾತುಕತೆ

* ಆಡಳಿತದ ಬಗ್ಗೆ ಹೆಚ್ಚಿನ ಅಸಮಾಧಾನ ತೋರಿಸದ ವರಿಷ್ಠರು

* ಲೋಪದೋಷ ಸರಿಪಡಿಸಿಕೊಂಡು ಹೋಗಲು ಸೂಚನೆ

* ಎಲ್ಲರನ್ನೂ ಕರೆದೊಯ್ಯಲು, ಅತೃಪ್ತಿ ಇತ್ಯರ್ಥಕ್ಕೆ ಸಲಹೆ

* ಸಿಎಂಗೆ ವರಿಷ್ಠರಿಂದ ಮೂರು ಟಾರ್ಗೆಟ್‌

ಬೆಂಗಳೂರು(ಜು.18): ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಅಳೆದೂ ತೂಗಿ ನಿರ್ಧಾರ ಕೈಗೊಳ್ಳುವ ಚಿಂತನೆಯಲ್ಲಿರುವ ಬಿಜೆಪಿ ಹೈಕಮಾಂಡ್‌, ಸರ್ಕಾರ ಮತ್ತು ಪಕ್ಷಕ್ಕೆ ಕೆಟ್ಟಹೆಸರು ಬರದಂತೆ ಆಡಳಿತ ನಡೆಸಿಕೊಂಡು ಹೋಗಿ ಎಂಬ ಖಡಕ್‌ ಸೂಚನೆಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ನೀಡಿದೆ.

ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ತನ್ನ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಂತಾಗಬೇಕು. ಬಳಿಕ ಎದುರಾಗುವ ಲೋಕಸಭಾ ಚುನಾವಣೆಯಲ್ಲಿ ಈಗಿನಂತೆ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವಂತಾಗಬೇಕು. ಇದಕ್ಕೆ ಬೇಕಾದ ನಿಟ್ಟಿನಲ್ಲಿ ಆಡಳಿತ ನಡೆಸಿ ಎಂಬ ನಿರ್ದೇಶನವನ್ನು ವರಿಷ್ಠರು ನೀಡಿ ಕಳುಹಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಒಟ್ಟಾರೆ ಕಳೆದ ಎರಡು ವರ್ಷಗಳ ಯಡಿಯೂರಪ್ಪ ನೇತೃತ್ವದ ಆಡಳಿತದ ಬಗ್ಗೆ ಅಷ್ಟೇನೂ ಸಮಾಧಾನ ವ್ಯಕ್ತಪಡಿಸದ ವರಿಷ್ಠರು, ಈಗಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ಹೋಗುವಂತೆ ಹೇಳಿ ಕಳುಹಿಸಿದ್ದಾರೆ. ಜತೆಗೆ ಪಕ್ಷದ ಕೆಲವು ಶಾಸಕರ ಆರೋಪಗಳ ಬಗ್ಗೆಯೂ ವರಿಷ್ಠರು ಪ್ರಸ್ತಾಪಿಸಿ, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಮೂಲಕ ಭಿನ್ನಾಭಿಪ್ರಾಯ ನಿವಾರಿಸಿಕೊಳ್ಳಿ ಎಂದಿದ್ದಾರೆ ಎನ್ನಲಾಗಿದೆ.

ಎರಡು ದಿನಗಳ ಕಾಲ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮಾತುಕತೆಗೆ ಯಡಿಯೂರಪ್ಪ ಅವರು ತಮ್ಮ ಪುತ್ರರನ್ನೂ ಕರೆದೊಯ್ದಿದ್ದರು. ಯಡಿಯೂರಪ್ಪ ಅವರ ದೆಹಲಿ ಭೇಟಿ ಬೆನ್ನಲ್ಲೇ ನಾಯಕತ್ವ ಬದಲಾವಣೆ ನಿಶ್ಚಿತ ಎಂಬ ರೀತಿಯಲ್ಲಿ ರಾಷ್ಟ್ರೀಯ ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿದರೂ ಸದ್ಯಕ್ಕೆ ಆ ಹಂತ ತಲುಪಿಲ್ಲ ಎಂದು ತಿಳಿದು ಬಂದಿದೆ.

ನಾಯಕತ್ವ ಬದಲಾವಣೆ ವಿಷಯದಲ್ಲಿ ಇತರ ರಾಜ್ಯಗಳಂತೆ ತರಾತುರಿಯ ನಿರ್ಧಾರ ಕೈಗೊಳ್ಳುವುದು ಬೇಡ ಎಂಬ ನಿಲವಿಗೆ ಬಂದಿರುವ ವರಿಷ್ಠರು ಸಂಪೂರ್ಣ ಸಾಧಕ​- ಬಾಧಕಗಳನ್ನು ಪರಿಶೀಲಿಸಿದ ಬಳಿಕವೇ ತೀರ್ಮಾನಕ್ಕೆ ಬರಲು ಮುಂದಾಗಿದ್ದಾರೆ. ಹೀಗಾಗಿಯೇ ಮತ್ತೊಮ್ಮೆ ಆಗಸ್ಟ್‌ ತಿಂಗಳಲ್ಲಿ ದೆಹಲಿಗೆ ಬನ್ನಿ, ಮಾತನಾಡೋಣ ಎಂಬ ಸಲಹೆ ರೂಪದ ಅಭಯವನ್ನು ವರಿಷ್ಠರು ಯಡಿಯೂರಪ್ಪ ಅವರಿಗೆ ನೀಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ.

ಹೀಗಾಗಿಯೇ ಯಡಿಯೂರಪ್ಪ ಅವರು ಶಾಂತಚಿತ್ತರಾಗಿಯೇ ಬೆಂಗಳೂರಿಗೆ ವಾಪಸಾಗಿದ್ದು, ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಹೆಚ್ಚಿಸುವ ದಿಕ್ಕಿನಲ್ಲಿ ಮತ್ತಷ್ಟುಪರಿಣಾಮಕಾರಿಯಾಗಿ ಆಡಳಿತ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮೂರು ಟಾರ್ಗೆಟ್‌

1 ಸ್ವಂತ ಬಲದ ಮೇಲೆ ಕರ್ನಾಟಕ ಗೆಲ್ಲಬೇಕು

2 ಬಿಜೆಪಿಗೆ 25+ ಲೋಕಸಭೆ ಸೀಟು ತರಬೇಕು

3 ಸರ್ಕಾರ, ಪಕ್ಷಕ್ಕೆ ಕೆಟ್ಟಹೆಸರು ಬರಬಾರದು

click me!