
ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶ, ಗುಜರಾತ್ ಸೇರಿದಂತೆ 7 ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಬಿಜೆಪಿ ಭರ್ಜರಿ ತಂತ್ರಗಾರಿಕೆ ರೂಪಿಸುತ್ತಿದೆ. ಇದರ ಭಾಗವಾಗಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅಧ್ಯಕ್ಷತೆಯಲ್ಲಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಉನ್ನತ ಮಟ್ಟದ ಸಂಘಟನಾ ಸಭೆ ನಡೆಸಲಾಗಿದೆ.
ಈ ಪ್ರಮುಖ ಸಭೆಯಲ್ಲಿ ನೂತನವಾಗಿ ಆಯ್ಕೆಗೊಂಡ ಪಕ್ಷದ ಪದಾಧಿಕಾರಿಗಳು, ವಿವಿಧ ರಾಜ್ಯ ಘಟಕಗಳ ಅಧ್ಯಕ್ಷರು ಹಾಗೂ ಸಂಘಟನಾ ಉಸ್ತುವಾರಿಗಳು ಭಾಗವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉಪಸ್ಥಿತರಿದ್ದರು. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವುದು ಹಾಗೂ ಯುವಜನತೆಯನ್ನು ಪಕ್ಷದತ್ತ ಸೆಳೆಯುವ ಕುರಿತು ವಿವರವಾದ ಚರ್ಚೆ ನಡೆಸಲಾಯಿತು.
2027ರಲ್ಲಿ ಪಂಜಾಬ್, ಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡ, ಗೋವಾ, ಹಿಮಾಚಲ ಪ್ರದೇಶ ಹಾಗೂ ಮಣಿಪುರದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಪೈಕಿ ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳನ್ನು ಹೊರತುಪಡಿಸಿ ಉಳಿದ 5 ರಾಜ್ಯಗಳಲ್ಲಿ ಬಿಜೆಪಿ ಪ್ರಸ್ತುತ ಅಧಿಕಾರದಲ್ಲಿದೆ. ಮುಂದಿನ ಸಾಲಿನಲ್ಲಿ ನಡೆಯಲಿರುವ ರಾಜ್ಯ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವುದು ಮತ್ತು ಚುನಾವಣಾ ತಂತ್ರಗಳನ್ನು ರೂಪಿಸುವುದೇ ಈ ಸಭೆಯ ಮುಖ್ಯ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಶನಿವಾರ, ನಿತಿನ್ ನವೀನ್ ಪಕ್ಷದ ನೂತನ ಪದಾಧಿಕಾರಿಗಳ ಜತೆ ದಿನಪೂರ್ತಿ ಸಭೆ ನಡೆಸಿದ್ದರು. ಈ ಸಭೆಯ ನಂತರ ಪ್ರಧಾನಿ ನರೇಂದ್ರ ಮೋದಿ ಕೂಡ ಇವರನ್ನು ಭೇಟಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ