ಮಹಾ ಸರ್ಕಾರ ರಚನೆ ವಿಳಂಬ| ಇಂದು ದೆಹಲಿಯಲ್ಲಿ ನಿಗದಿಯಾಗಿದ್ದ ಸೋನಿಯಾ- ಪವಾರ್ ಸಭೆ ಮುಂದೂಡಿಕೆ| ಪುಣೆಯಲ್ಲಿ ಪಕ್ಷದ ಕೋರ್‌ಕಮಿಟಿ ಸಭೆ ಕರೆದ ಎನ್‌ಸಿಪಿ ನಾಯಕ ಶರದ್ ಪವಾರ್| ಬಿಜೆಪಿಯಿಂದ ಕುದುರೆ ವ್ಯಾಪಾರ: ಶಿವಸೇನೆಯ ರಾವುತ್ ಆರೋಪ
ನವದೆಹಲಿ[ನ.17]: ರಾಷ್ಟ್ರಪತಿ ಆಳ್ವಿಕೆಗೆ ಒಳಪಟ್ಟಿರುವ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮತ್ತಷ್ಟುವಿಳಂಬವಾಗುವ ಸಾಧ್ಯತೆಗಳು ಕಂಡುಬಂದಿವೆ. ಭಾನುವಾರ ನವದೆಹಲಿಯಲ್ಲಿ ನಿಗದಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ನಡುವಿನ ಮಹತ್ವದ ಸಭೆಯನ್ನು ಕಡೆಯ ಗಳಿಗೆಯಲ್ಲಿ ಮುಂದೂಡಲಾಗಿದೆ ಎನ್ನಲಾಗಿದೆ. ಹೀಗಾಗಿ ಸಭೆಯ ಬಳಿಕ ಸರ್ಕಾರ ರಚನೆಯ ಕುರಿತು ಅಧಿಕೃತ ಹೇಳಿಕೆ ಹೊರಬೀಳಬಹುದು ಎಂಬ ನಿರೀಕ್ಷೆ ಮುಂದೂಡಲ್ಪಟ್ಟಿದೆ.
ಮೂರೂ ಪಕ್ಷಗಳು ಮಹಾರಾಷ್ಟ್ರದ ಆಡಳಿತ ಹೇಗೆ ನಡೆಸಬೇಕು ಎಂದು ‘ಸಾಮಾನ್ಯ ಕನಿಷ್ಠ ಕಾರ್ಯಸೂಚಿ’ ರೂಪಿಸಿವೆ. ಇದಿನ್ನೂ ಕರಡು ರೂಪದಲ್ಲಿದ್ದು ಇದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೂ ಒಪ್ಪಬೇಕು. ಪವಾರ್ ಅವರ ಜತೆ ಸೋನಿಯಾ ಈ ಬಗ್ಗೆ ಚರ್ಚೆ ನಡೆಸಲಿದ್ದು, ಸೋನಿಯಾ ಒಪ್ಪಿಗೆ ಬಳಿಕ ಮೈತ್ರಿಯ ಅಂತಿಮ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದರು.
ಆದರೆ ಶರದ್ ಪವಾರ್ ಭಾನುವಾರ ಪುಣೆಯಲ್ಲಿ ಪಕ್ಷದ ಕೋರ್‌ಕಮಿಟಿ ಸಭೆ ಕರೆದಿದ್ದಾರೆ. ಈ ಸಭೆ ಆಯೋಜನೆಯಾಗಿರುವುದೇ ಸಂಜೆ 4 ಗಂಟೆಗೆ. ಆ ಸಭೆ ಮುಗಿಸಿ, ಬಳಿಕ ಪವಾರ್ ದೆಹಲಿಗೆ ತೆರಳಿ ಸೋನಿಯಾರನ್ನು ಭೇಟಿಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ. ಆದರೆ ಸಭೆ ಬಳಿಕ ಪವಾರ್ ನವದೆಹಲಿಗೆ ತೆರಳುವುದು ಖಚಿತವಾಗಿದೆ. ಹೀಗಾಗಿ ಅವರು ಸೋನಿಯಾರನ್ನು ಸೋಮವಾರ ಭೇಟಿಯಾದರೂ ಆಗಬಹುದು ಎನ್ನಲಾಗಿದೆ.
ಏನೇನು ಚರ್ಚೆ?: ಭಾನುವಾರದ ಕೋರ್‌ಕಮಿಟಿ ಸಭೆಯಲ್ಲಿ ಪ್ರಸ್ತಾವಿತ ಸರ್ಕಾರದಲ್ಲಿ ಪಕ್ಷ ಪಡೆಯಬೇಕಾದ ಖಾತೆಗಳು, ಡಿಸಿಎಂ ಹುದ್ದೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
ಬಿಜೆಪಿಯಿಂದ ಕುದುರೆ ವ್ಯಾಪಾರ- ಶಿವಸೇನೆ:
ಈ ನಡುವೆ ‘ಸರ್ಕಾರ ರಚಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಹಿಂದೆ ಸರಿದ ಬಿಜೆಪಿ, ಈಗ ಸರ್ಕಾರ ರಚಿಸುತ್ತೇವೆ ಎಂದು ಹೇಳುತ್ತಿದೆ. ಇದು ಇತರ ಪಕ್ಷಗಳ ಶಾಸಕರನ್ನು ‘ಕುದುರೆ ವ್ಯಾಪಾರ’ ನಡೆಸಿ ಖರೀದಿಸಿ ಸರ್ಕಾರ ರಚಿಸಲು ಯತ್ನಿಸುತ್ತಿರುವುದರ ಸಂಕೇತ’ ಎಂದು ಶಿವಸೇನೆಯು ತನ್ನ ಮುಖವಾಣಿ ಪತ್ರಿಕೆ ‘ಸಾಮ್ನಾ’ದಲ್ಲಿ ಆರೋಪಿಸಿದೆ.
ಈ ನಡುವೆ, ‘ಹೊಸ ಹವಾಮಾನ ಸೃಷ್ಟಿಯಾಗಲಿದೆ’ ಎಂದು ಉರ್ದು ಕವಿತೆಯೊಂದನ್ನು ಉಲ್ಲೇಖಿಸಿ ಶಿವಸೇನೆ ಮುಖಂಡ ಸಂಜಯ ರಾವುತ್ ಟ್ವೀಟ್ ಮಾಡಿದ್ದಾರೆ. ಇದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಯ ದ್ಯೋತಕ ಎಂದು ವಿಶ್ಲೇಷಿಸಲಾಗುತ್ತಿದೆ.